ಕಾಂಗ್ರೆಸ್ ಪಕ್ಷ ಸಂವಿಧಾನ ಶಿಲ್ಪ ಅಂಬೇಡ್ಕರ್ ಅವರಿಗೆ ಅನ್ಯಾಯ ಮಾಡಿದೆ – ಬಿ.ಎಸ್.ಯಡಿಯೂರಪ್ಪ

ನೆಲಮಂಗಲ, ಏ.14- ಕಾಂಗ್ರೆಸ್ ಪಕ್ಷ ಸಂವಿಧಾನ ಶಿಲ್ಪ ಅಂಬೇಡ್ಕರ್ ಅವರಿಗೆ ಅನ್ಯಾಯ ಮಾಡಿದೆ. ಅವರ ಶವಸಂಸ್ಕಾರಕ್ಕೂ ದೆಹಲಿಯಲ್ಲಿ ಜಾಗ ಕೊಡಲಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಆರೋಪಿಸಿದರು.
ಮೈಲನಹಳ್ಳಿಯ ಮಾರುತಿಮಂಜುಳಾ ಅವರ ಮನೆಯಲ್ಲಿ ಉಪಹಾರ ಸೇವಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಲಿತರ ಮನೆಯಲ್ಲಿ ಉಪಹಾರ ಸೇವಿಸುವ ಮೂಲಕ ಇಂದಿನ ದಿನವನ್ನು ಆರಂಭಿಸಿದ್ದೇನೆ. ಭಾರತಕ್ಕೆ ಅತ್ಯುತ್ತಮ ಸಂವಿಧಾನ ನೀಡಿದ ಅಂಬೇಡ್ಕರ್ ಅವರಿಗೆ ಭಾರತರತ್ನ ನೀಡಲಿಲ್ಲ. ಅವರು ಲೋಕಸಭೆಗೆ ಸ್ಪರ್ಧಿಸಿದ್ದಾಗ ಕಾಂಗ್ರೆಸ್‍ನವರು ಅವರ ವಿರುದ್ಧ ಅನಕ್ಷರಸ್ಥರೊಬ್ಬರನ್ನು ಕಣಕ್ಕಿಳಿಸಿ ಸೋಲಿಸಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆದರೆ, ಇಂದು ಕಾಂಗ್ರೆಸ್‍ನವರು ಅಂಬೇಡ್ಕರ್ ಹೆಸರಿನಲ್ಲಿ ದಲಿತರನ್ನು ವೋಟ್‍ಬ್ಯಾಂಕ್ ಮಾಡಿಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ ದಲಿತರ ಸರ್ವಾಂಗೀಣ ಅಭಿವೃದ್ಧಿಗೆ ತಾವು ಶ್ರಮಿಸುವುದಾಗಿ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ