ಹುಬ್ಬಳ್ಳಿ,ಏ.14- ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು-ಎರಡಲ್ಲ ಮತ್ತೊಂದು ಕಡೆ ಸ್ಪರ್ಧಿಸಿದರು ಎಲ್ಲಾ ಕ್ಷೇತ್ರಗಳಲ್ಲೂ ಸೋಲುವುದು ಖಚಿತ ಎಂದು ವಿಧಾನಸಭೆ ವಿಪಕ್ಷ ನಾಯಕ ಜಗದೀಶ್ಶೆಟ್ಟರ್ ಭವಿಷ್ಯ ನುಡಿದಿದ್ದಾರೆ.
ನಗರದ ಕೇಂದ್ರ ಅಂಚೆಕಚೇರಿ ಬಳಿಯ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಲಿನ ಭೀತಿಯಿಂದಲೇ ಸಿದ್ದರಾಮಯ್ಯ ಕ್ಷೇತ್ರವನ್ನು ಹುಡುಕುತ್ತಿದ್ದಾರೆ. ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಸಿಎಂ ಪುತ್ರ ಡಾ.ಯತೀಂದ್ರ ಸೋಲುವುದು ಗ್ಯಾರಂಟಿ ಎಂದರು.
ಈ ಹಿಂದೆ ಮಾಡಿದ ಸಮೀಕ್ಷೆಗಳು ಯಾವುದೂ ಸತ್ಯವಾಗಿಲ್ಲ. ಈಗ ಇಂಡಿಯಾ ಟುಡೇ ನಡೆಸಿದ ಸಮೀಕ್ಷೆಯೂ ಹಾಗೆ ಇದೆ. ಸಮೀಕ್ಷೆ ಸುಳ್ಳಾಗಲಿದ್ದು, ನಮ್ಮ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ತಿಪ್ಪೇಸ್ವಾಮಿ ಪಕ್ಷೇತರ ಅಥವಾ ಬೇರೆ ಪಕ್ಷದಿಂದ ಸ್ಪರ್ಧಿಸುವ ವಿಚಾರಕ್ಕೆ ಪ್ರತಿಕ್ರಯಿಸಿದ ಅವರು, ಶ್ರೀರಾಮುಲು ಆಶೀರ್ವಾದದಿಂದ ತಿಪ್ಪೇಸ್ವಾಮಿ ಶಾಸಕರಾಗಿದ್ದರು. ಅಲ್ಲಿ ಶ್ರೀರಾಮುಲು ವರ್ಚಸ್ಸು ಹೆಚ್ಚಿದೆ. ಪಕ್ಷದ ನಿರ್ಧಾರಕ್ಕೆ ತಿಪ್ಪೇಸ್ವಾಮಿ ಬದ್ಧರಾಗಿರಬೇಕು ಎಂದು ಗುಡುಗಿದರು.
ಒಂದು ಬಾರಿ ಟಿಕೆಟ್ ನಿರ್ಧಾರಗೊಂಡ ನಂತರ ಬದಲಾವಣೆಯೇ ಇಲ್ಲ. ತಿಪ್ಪೇಸ್ವಾಮಿ ಪಕ್ಷೇತರರಾಗುವುದು ಬಿಡುವುದು ಅವರಿಗೆ ಬಿಟ್ಟದ್ದು. ಕೆಲವು ಕ್ಷೇತ್ರಗಳಲ್ಲಿ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ಗೆಲ್ಲುವ ಅಭ್ಯರ್ಥಿಗಳಿಗೆ ಹೈಕಮಾಂಡ್ ಟಿಕೆಟ್ ನೀಡಿದೆ ಎಂದು ತಿಳಿಸಿದರು.
ಸೀಮಾ ಮಸೂತಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ನಾನು ಖುದ್ದಾಗಿ ಭೇಟಿಯಾಗಿ ಮನವೊಲಿಸಲು ಮುಂದಾಗಿದ್ದೇನೆ. ಅವರು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದರೂ ನಮ್ಮ ಪಕ್ಷಕ್ಕೆ ಹೊಡೆತ ಬೀಳುವುದಿಲ್ಲ. ನಮ್ಮ ಅಭ್ಯರ್ಥಿ ಗೆಲುವು ಸಾಧಿಸುವುದು ಖಚಿತ ಎಂದರು.