ಬೆಂಗಳೂರು,ಏ.14- ಸಮೀಕ್ಷೆಯಲ್ಲಿ ಪಕ್ಷ ಎರಡನೇ ಸ್ಥಾನ ಪಡೆಯಲಿದೆ ಎಂಬುದು ಮತದಾರರ ಅಭಿಪ್ರಾಯದಿಂದ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ಚುನಾವಣಾ ತಂತ್ರವನ್ನು ಬದಲಾಯಿಸಲು ಮುಂದಾಗಿದೆ.
ಮಿಷನ್ 150 ಗುರಿ ತಲುಪುವುದು ಕಷ್ಟ ಇರುವುದನ್ನು ಅರಿತಿರುವ ಬಿಜೆಪಿ ನಾಯಕರು ಇದೀಗ ಸರಳ ಬಹುಮತವಾಗಿ 113ರಿಂದ 125 ಸ್ಥಾನದವರೆಗೆ ಗೆಲ್ಲುವ ಕ್ಷೇತ್ರಗಳನ್ನೇ ಗುರಿಯಾಗಿಟ್ಟುಕೊಂಡು ಪ್ರಚಾರ ನಡೆಸಲು ತೀರ್ಮಾನಿಸಿದ್ದಾರೆ.
ಈ ಮೊದಲು ಬಿಡುಗಡೆಯಾಗಿರುವ 72 ಅಭ್ಯರ್ಥಿಗಳ ಪಟ್ಟಿಯಲ್ಲಿ ಸುಮಾರು 60ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲುವ ಗುರಿಯನ್ನು ಇಟ್ಟುಕೊಂಡಿರುವ ಕಮಲ ಪಡೆ 2ನೇ ಮತ್ತು 3ನೇ ಹಂತದಲ್ಲೂ ಗೆಲ್ಲುವ ಕುದುರೆಗಳನ್ನೇ ಕಣಕ್ಕಿಳಿಸಲು ಮುಂದಾಗಿದೆ.
ಹೈದರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕ, ಮಧ್ಯ ಕರ್ನಾಟಕ, ಕರಾವಳಿ ತೀರಾಪ್ರದೇಶ ಹಾಗೂ ಬೆಂಗಳೂರನ್ನು ಗುರಿಯಾಗಿಟ್ಟುಕೊಂಡು ವಿಭಿನ್ನವಾದ ಪ್ರಚಾರ ನಡೆಸಿ ಮತದಾರರ ಮನ ಗೆಲ್ಲಲು ಕಮಲ ನಾಯಕರು ರಣತಂತ್ರ ರೂಪಿಸಿದ್ದಾರೆ.
ಮೋದಿಯೇ ಅನಿವಾರ್ಯ:
ರಾಜ್ಯದಲ್ಲಿ ಈವರೆಗೂ ಬಿಜೆಪಿಯ ಬೆಳವಣಿಗೆಗಳನ್ನು ಅವಲೋಕಿಸಿದರೆ ಪಕ್ಷದಲ್ಲಿ ಹೇಳಿಕೊಳ್ಳುವಂತಹ ಯಾವ ಬದಲಾವಣೆಗಳು ಕಾಣಿಸಿಕೊಳ್ಳುತ್ತಿಲ್ಲ. ಖುದ್ದು ಬಿಜೆಪಿ ನಡೆಸಿರುವ ಖಾಸಗಿ ಸಮೀಕ್ಷೆಗಳ ಪ್ರಕಾರ ಹೆಚ್ಚೆಂದರೆ ಬಿಜೆಪಿ 100 ಸ್ಥಾನದೊಳಗೆ ಗೆಲ್ಲುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಕರ್ನಾಟಕದಲ್ಲಿ ಇಂದಿಗೂ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಭಾವ ಸಾಕಷ್ಟಿದೆ. ಗ್ರಾಮೀಣ ಹಾಗೂ ನಗರ ಮತದಾರರನ್ನು ಪಕ್ಷದತ್ತ ಸೂಜಿಗಲ್ಲಿನಂತೆ ಸೆಳೆಯುವ ಚಾಕಚಕ್ಯತೆ ಇರುವ ಏಕೈಕ ನಾಯಕ ಎಂದರೆ ಮೋದಿ ಮಾತ್ರ.
ಈ ಕಟು ವಾಸ್ತವವನ್ನು ಅರಿತಿರುವ ಬಿಜೆಪಿ ನಾಯಕರು ಈ ಬಾರಿ ಮೋದಿಯನ್ನು ಹೆಚ್ಚು ಹೆಚ್ಚು ಪ್ರಚಾರ ವೇಳೆ ಬಿಂಬಿಸಲು ಮುಂದಾಗಿದೆ.
ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳ್ಳುತ್ತಿದ್ದಂತೆ ಕರ್ನಾಟಕಕ್ಕೆ ದಾಂಗುಡಿ ಇಡಲಿರುವ ಮೋದಿ 20ಕ್ಕೂ ಹೆಚ್ಚು ಮೆಗಾ ರ್ಯಾಲಿ, ಐದಾರು ಕಡೆ ರೋಡ್ ಶೋ ನಡೆಸಲಿದ್ದಾರೆ.
ಒಂದಿಷ್ಟು ಪರ ವಿರೋಧ ಇದ್ದರೂ ಮೋದಿ ಬಗ್ಗೆ ವಿಶೇಷವಾಗಿ ನಗರ ಮತ್ತು ಯುವ ಮತದಾರರು ಈಗಲೂ ಆಕರ್ಷಿತರಾಗತ್ತಾರೆ. ಇದನ್ನು ಲಾಭ ಮಾಡಿಕೊಳ್ಳಲು ಹವಣಿಸುತ್ತಿರುವ ಬಿಜೆಪಿ ಕರ್ನಾಟಕದಲ್ಲಿ ಮೋದಿಯೆ ಪಕ್ಷವನ್ನು ದಡ ಸೇರಿಸಬಲ್ಲರು ಎಂಬುದು ಅರಿವಾಗಿದೆ.
ಹೀಗಾಗಿ ಖಾಸಗಿ ಸಮೀಕ್ಷೆಯಲ್ಲಿ ಪಕ್ಷ ಯಾವ ಕಡೆ ಹಿನ್ನಡೆ ಅನುಭವಿಸಿದೆಯೋ ಅಂಥ ಕಡೆ ಮೋದಿ ಅಭ್ಯರ್ಥಿಗಳ ಪರ ಮಿಂಚಿನ ಪ್ರಚಾರ ನಡೆಸಲಿದ್ದಾರೆ.