ಬೆಂಗಳೂರು, ಏ.14- ವೋಲಾ ಕ್ಯಾಬ್‍ಗೆ ಪ್ರಯಾಣಿಕರ ಸೋಗಿನಲ್ಲಿ ಕಾರು ಹತ್ತಿ ಮಾರ್ಗಮಧ್ಯೆ ಚಾಲಕನನ್ನು ಕೊಲೆ ಮಾಡಿ ದುಬಾರಿ ಬೆಲೆಯ ಮೊಬೈಲ್, ಕಾರು, ಹಣ ದೋಚಿದ್ದ ಅಸ್ಸೋಂ ಮೂಲದ ಇಬ್ಬರು ಹಾಗೂ ಒರಿಸ್ಸಾದ ಒಬ್ಬಾತನನ್ನು ಡಿಜೆ ಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ದೀಮನ್‍ಶಂಕರ್ ದಾಸ್ (26), ಅರೂಪ್‍ಶಂಕರ್ ದಾಸ್ (36) ಮತ್ತು ಒಡಿಸ್ಸಾದ ಭರತ್ ಪ್ರಧಾನ್ (22) ಬಂಧಿತ ಆರೋಪಿಗಳು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಲಕ್ಷ ರೂ. ಬೆಲೆಯ ಕಾರು, 40 ಸಾವಿರ ರೂ. ಬೆಲೆಯ ಮೊಬೈಲ್, 7 ಸಾವಿರ ಬೆಲೆಯ ಮತ್ತೊಂದು ಮೊಬೈಲ್ ಹಾಗೂ ಕಾರಿನ ಮೂಲ ದಾಖಲಾತಿಗಳನ್ನು, ಕೃತ್ಯಕ್ಕೆ ಬಳಸಿದ್ದ ಚಾಕು, ಸ್ಕ್ರೂಡೈವರ್‍ಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಆರೋಪಿಗಳು ಆರ್‍ಎಂಸಿ ಯಾರ್ಡ್ ಠಾಣೆ ವ್ಯಾಪ್ತಿಯಲ್ಲಿ ಏ.1ರಂದು ನಡೆದಿದ್ದ ಜಂಟೂದಾಸ್ ಎಂಬುವವನ ಅಪಹರಣ ಪ್ರಕರಣದಲ್ಲಿ ಭಾಗಿಯಾಗಿರುವುದು ದೃಢಪಟ್ಟಿದೆ.
ಮಾ.18ರಂದು ಈ ಮೂವರು ಆರೋಪಿಗಳು ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ತಮ್ಮ ಮನೆಯಲ್ಲೇ ಕುಳಿತು ವೋಲಾ ಕ್ಯಾಬ್ ಬುಕ್ ಮಾಡಲು ಸಂಚು ರೂಪಿಸಿದ್ದರು. ತದನಂತರ ಬುಕ್ ಮಾಡಿದರೆ ತಮ್ಮ ಮೊಬೈಲ್ ನಂಬರ್‍ನಿಂದ ಸಿಕ್ಕಿಕೊಳ್ಳಬಹುದೆಂದು ನಿರ್ಧರಿಸಿ ಮೊಬೈಲ್‍ನಲ್ಲಿ ಬುಕ್ ಮಾಡದೆ ಅಂದು ರಾತ್ರಿ 2 ಗಂಟೆ ಸಮಯದಲ್ಲಿ ಕೆಬಿ ಸಂದ್ರದ ಕೆಎಚ್‍ಬಿ ಮುಖ್ಯರಸ್ತೆ, ವೀರಣ್ಣ ಪಾಳ್ಯ ರೈಲ್ವೆ ಗೇಟ್ ಹತ್ತಿರ ಹೋಗಿದ್ದಾರೆ.
ಈ ಮಾರ್ಗದಲ್ಲಿ ಬರುತ್ತಿದ್ದ ಕ್ಯಾಬನ್ನು ತಡೆದು ಡ್ರಾಪ್ ಕೇಳಿದಾಗ ಮೊಬೈಲ್‍ನಿಂದ ಬುಕ್ ಮಾಡಿದರೆ ಮಾತ್ರ ಬರುವುದಾಗಿ ತಿಳಿಸಿದ್ದಾರೆ. ನಂತರ ಇದೇ ಮಾರ್ಗವಾಗಿ ಕ್ಯಾಬ್ ಚಾಲಕ ರಿನ್‍ಸನ್ ಎಂಬುವವರು ಬರುತ್ತಿದ್ದಾಗ ಅವರ ಕಾರನ್ನು ತಡೆದು ಹೊಸೂರಿಗೆ 1500ರೂ.ಗೆ ಬಾಡಿಗೆಗೆ ಬರುವಂತೆ ಮಾತನಾಡಿ ಕಾರನ್ನು ಹತ್ತಿಕೊಂಡಿದ್ದಾರೆ.
ನಾಗವಾರ ರಿಂಗ್‍ರಸ್ತೆ ಮೂಲಕ ಕೆಆರ್ ಪುರಂ, ಸಿಲ್ಕ್‍ಬೋರ್ಡ್, ಎಲೆಕ್ಟ್ರಾನಿಕ್ ಸಿಟಿ ಟೋಲ್, ಅತ್ತಿಬೆಲೆ ಮೂಲಕ ಹೊಸೂರಿನ ಸಿಪ್‍ಕಾರ್ಟ್ ಇಂಡಸ್ಟ್ರಿಯಲ್ ಏರಿಯಾದ ನಿರ್ಜನ ಪ್ರದೇಶದ ಬಳಿ ಹೋಗುತ್ತಿದ್ದಂತೆ ಆರೋಪಿಗಳು ಮೂತ್ರ ವಿಸರ್ಜನೆಗಾಗಿ ಕಾರು ನಿಲ್ಲಿಸುವಂತೆ ಕೇಳಿದ್ದಾರೆ.
ಇವರ ವರ್ತನೆ ಗಮನಿಸಿದ ಕಾರು ಚಾಲಕ ಕಾರು ನಿಲ್ಲಿಸದೆ ಚಲಾಯಿಸುತ್ತಿದ್ದಾಗ ಬೇಡರಪಳ್ಳಿ ಗ್ರಾಮದ ಸರ್ಕಾರಿ ಶಾಲೆ ಮುಂದೆ ನಮ್ಮ ರೂಮ್ ಇಲ್ಲಿಯೇ ಇದೆ, ಕಾರು ನಿಲ್ಲಿಸಿ ಎಂದು ಹೇಳಿದಾಗ, ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಆರೋಪಿ ಜೀವನ್, ಚಾಲಕನ ಕುತ್ತಿಗೆ ಮತ್ತು ಬಾಯನ್ನು ಬಿಗಿಯಾಗಿ ಹಿಡಿದುಕೊಂಡಿದ್ದಾನೆ.
ಪಕ್ಕದಲ್ಲಿ ಕುಳಿತಿದ್ದ ಆರೋಪಿ ಭರತ್ ಚಾಕುವಿನಿಂದ ಹೆದರಿಸಿ ಹೊಟ್ಟೆ ಮತ್ತು ಮುಖಕ್ಕೆ ಹಲ್ಲೆ ನಡೆಸಿ ಸ್ಕ್ರೂಡೈವರ್‍ನಿಂದ ತಿವಿದಿದ್ದು, ಮತ್ತೊಬ್ಬ ಆರೋಪಿ ಅರೂಪ್ ಶಂಕರ್ ತನ್ನ ಬ್ಯಾಗ್‍ನಲ್ಲಿದ್ದ ಟವೆಲ್‍ನಿಂದ ಕುತ್ತಿಗೆಗೆ ಬಿಗಿದು ಉಸಿರುಗಟ್ಟಿ ಕೊಲೆ ಮಾಡಿದ್ದಾರೆ.
ತದನಂತರ ಈ ಮೂವರು ಸೇರಿ ಚಾಲಕನ ಶವವನ್ನು ಚರಂಡಿಗೆ ಎಸೆದು ಆತನ ಎರಡು ಮೊಬೈಲ್‍ಗಳು, ಹಣ ಹಾಗೂ ದಾಖಲೆಗಳ ಸಮೇತ ಕಾರನ್ನು ಅಪಹರಿಸಿ ಪರಾರಿಯಾಗಿದ್ದರು.
ಇತ್ತ ವೋಲಾ ಕ್ಯಾಬ್ ಚಾಲಕ ರಿನ್‍ಸನ್ (23) ಕೆಲಸಕ್ಕೆ ತೆರಳಿದ್ದು, ನಾಪತ್ತೆಯಾಗಿರುವ ಬಗ್ಗೆ ಡಿಜೆ ಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನಿಖೆ ಕೈಗೊಂಡಿದ್ದ ಪೆÇಲೀಸರಿಗೆ ತಮಿಳುನಾಡು ರಾಜ್ಯದ ಕೃಷ್ಣಗಿರಿ ಜಿಲ್ಲೆಯ ಹೊಸೂರು ಸಿಟ್‍ಕಾರ್ಟ್ ಠಾಣೆ ವ್ಯಾಪ್ತಿಯಲ್ಲಿ ಅಪರಿಚಿತ ಶವ ದೊರೆತ ಬಗ್ಗೆ ದೂರು ದಾಖಲಾಗಿದ್ದ ಬಗ್ಗೆ ಮಾಹಿತಿ ಲಭಿಸಿದೆ.
ತಕ್ಷಣ ಶವವನ್ನು ಆತನ ತಂದೆ ಸೋಮನ್‍ರವರು ಗುರುತಿಸಿದ್ದರು. ಇದು ಸ್ವಾಭಾವಿಕ ಸಾವಲ್ಲ. ಚಾಲಕನ ಬಳಿ ಇದ್ದ ಬೆಲೆ ಬಾಳುವ ಮೊಬೈಲ್, ಕಾರು ಹಾಗೂ ಹಣ ಕಿತ್ತುಕೊಳ್ಳುವ ಉದ್ದೇಶದಿಂದ ಪೂರ್ವಯೋಜಿತವಾಗಿ ಸಂಚು ರೂಪಿಸಿ ಕೊಲೆ ಮಾಡಿರುವಂತೆ ಕಂಡುಬಂದ ಹಿನ್ನೆಲೆಯಲ್ಲಿ ಇದು ಲಾಭಕ್ಕಾಗಿಯೇ ಮಾಡಿರುವ ಕೊಲೆ ಪ್ರಕರಣ ಎಂಬ ಸಂಶಯದ ಮೇಲೆ ಡಿಜೆ ಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡರು.
ಆರೋಪಿಗಳ ಪತ್ತೆಗಾಗಿ ರಚಿಸಲಾಗಿದ್ದ ವಿಶೇಷ ತಂಡ ಹಲವು ಮಾಹಿತಿಗಳನ್ನು ಸಂಗ್ರಹಿಸಿ ತಾಂತ್ರಿಕ ಸಿಬ್ಬಂದಿಗಳ ಮತ್ತು ಭಾತ್ಮಿದಾರರ ನೆರವು ಪಡೆದು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.