ಅಮೃತಸರ/ನವದೆಹಲಿ, ಏ.13-ಪಂಜಾಬ್ನ ಅಮೃತಸರದಲ್ಲಿ 739 ಮುಗ್ಧ ಜನರ ನರಮೇಧಕ್ಕೆ ಕಾರಣವಾದ ಘೋರ ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ ಇಂದು 99 ವರ್ಷ. ಈ ದುರಂತ ಘಟನೆಯಲ್ಲಿ ಮಡಿದವರ ಸ್ಮರಣೆ ಕಾರ್ಯಕ್ರಮ ದೇಶದ ವಿವಿಧೆಡೆ ನಡೆಯುತ್ತಿದೆ.
ಪಂಜಾಬ್, ದೆಹಲಿ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಕರಾಳ ಘಟನೆಯಲ್ಲಿ ಮೃತರಾದವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗಿದೆ.
ಭಾರತದಲ್ಲಿ ಸ್ವಾತಂತ್ರ್ಯ ಸಂಗ್ರಾಮ ಹಾಗೂ ಕ್ರಾಂತಿಕಾರಿ ಚಟುವಟಿಕೆಗಳನ್ನು ಹತ್ತಿಕ್ಕಲು ಬ್ರಿಟೀಷರು ಒಂದೆಡೆ ಒಡೆದು ಆಳುವ ನೀತಿಯನ್ನು ಅನುಸರಿಸಿದರೆ ಇನ್ನೊಂದೆಡೆ ದಮನಕಾರಿ ಕರಾಳ ಕಾಯ್ದೆ-ಮಸೂದೆಗಳನ್ನು ಜಾರಿಗೊಳಿಸಿದರು. ಇಂಥ ಕ್ರೂರ ಕಾಯ್ದೆಯಲ್ಲಿ ರೌಲತ್ ಮಸೂದೆ ಕೂಡ ಒಂದು.
ಈ ಕಾಯ್ದೆಗಳಿಂದ ಆದ ಚಳವಳಿಗಳು ಏಪ್ರಿಲ್ 13, 1919ರಂದು ಪಂಜಾಬ್ನ ಅಮೃತಸರದಲ್ಲಿ ನಡೆದ ಜಲಿಯನ್ ವಾಲಾಭಾಗ್ ಹತ್ಯಾಕಾಂಡದಲ್ಲಿ ಪರ್ಯವಸಾನವಾಯಿತು. ಇದನ್ನು ಅಮೃತಸರದ ನರಮೇಧ ಎಂದು ಹೆಸರಿಸಲಾಗಿದೆ.
ಬ್ರಿಟಿಷ್ ಸೈನ್ಯದ ಕಮಾಂಡರ್ ಆಗಿದ್ದ ಬ್ರಿಗೇಡಿಯರ್ ಜನರಲ್ ರೆಜಿನಾಲ್ಡ್ ಡೈಯರ್ ತನ್ನ ಸೈನಿಕರಿಗೆ, ಸುಮಾರು ಹತ್ತು ಸಾವಿರದಷ್ಟಿದ್ದ ನಿಶ್ಯಸ್ತ್ರ ಮತ್ತು ಅಮಾಯಕ ಜನರ ಮೇಲೆ ಗುಂಡು ಹಾರಿಸಲು ಆಜ್ಞೆ ನೀಡಿದ. ಅವರು ಮಾರ್ಷಲ್ ಲಾ ಜಾರಿಯಾಗಿರುವ ಸಂಗತಿ ತಿಳಿಯದೆ, ಗೋಡೆಗಳಿಂದ ಅಮೃತಸರದ ಜಲಿಯನ್ ವಾಲಾಬಾಗ್ ಎಂಬ ತೋಟದಲ್ಲಿ ಸಿಖ್ ಹಬ್ಬವಾದ ಬೈಶಾಖಿಯನ್ನು ಆಚರಿಸಲು ಸಭೆ ಸೇರಿದ್ದರು. ಈ ಘಟನೆಯಲ್ಲಿ ಒಟ್ಟು 1,650 ಸುತ್ತು ಗುಂಡುಗಳನ್ನು ಹಾರಿಸಲಾಯಿತು. 739 ಮಂದಿ ದುರಂತ ಸಾವಿಗೀಡಾಗಿ, 1,137 ಜನರು ಗಾಯಗೊಂಡರು.