ನವದೆಹಲಿ:ಏ-12: ವಿಶ್ವ ಪ್ರಸಿದ್ಧ ಪ್ರೇಮಸೌಧ ತಾಜ್ ಮಹಲ್ ನ್ನು ಮೊಘಲ್ ದೊರೆ ಶಹಜಹಾನ್ ಸುನ್ನಿ ವಕ್ಫ್ ಮಂಡಳಿಗೆ ಹಸ್ತಾತಂರಿಸಿದ್ದ ಎಂಬ ಸುನ್ನಿ ವಕ್ಫ್ ಮಂಡಳಿ ಹೇಳಿಕೆಗೆ ಗರಂ ಆಗಿರುವ ಸುಪ್ರೀಂ ಕೋರ್ಟ್ ಈ ಕುರಿತು ಶಹಜಹಾನ್ ಸಹಿ ಮಾಡಿರುವ ದಾಖಲೆಗಳಿದ್ದರೆ ವಾರದೊಳಗಾಗಿ ನ್ಯಾಯಾಲಯಕ್ಕೆ ತಂದು ತೋರಿಸಿ ಎಂದು ಖಡಕ್ ಆಗಿ ಸೂಚಿಸಿದೆ.
ತಾಜ್ ಮಹಲ್ ಒಡೆತನಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಸುನ್ನಿ ವಕ್ಫ್ ಮಂಡಳಿ ಸಲ್ಲಿಸಿದ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠ ವಖ್ಪ್ ಮಂಡಳಿಗೆ ಖಡಕ್ ಪ್ರಶೆಗಳನ್ನು ಕೇಳಿದ್ದಾರೆ.
ತಾಜ್ ಮಹಲ್ ವಕ್ಫ್ ಆಸ್ತಿಯೇ? ಭಾರತದಲ್ಲಿ ಇದನ್ನು ಯಾರಾದರೂ ನಂಬುತ್ತಾರೆಯೇ? ವಕ್ಫ್ ಮಂಡಳಿಗೆ ಶಹಜಹಾನ್ ಸಹಿ ಮಾಡಿದ್ದು ಎಂದು? ವಕ್ಫ್ ಮಂಡಳಿಗೆ ಹಸ್ತಾಂತರಿಸಿದ್ದು ಯಾವಾಗ? ಈ ಬಗ್ಗೆ ದಾಖಲೆಗಳಿದ್ದರೆ ವಾರದೊಳಗೆ ತಂದು ತೋರಿಸಿ’ ಎಂದು ಹೇಳಿದೆ.
ಉತ್ತರಾಧಿಕಾರಕ್ಕಾಗಿ ನಡೆದ ಸಂಘರ್ಷದ ಬಳಿಕ 1658ರಲ್ಲಿ ಷಾಜಹಾನ್ನನ್ನು ಆತನ ಮಗ ಔರಂಗಜೇಬ ಆಗ್ರಾ ಕೋಟೆಯಲ್ಲಿ ಬಂಧಿಸಿದ್ದ. 1666ರಲ್ಲಿ ಅಲ್ಲಿಯೇ ಷಾಜಹಾನ್ ಮೃತಪಟ್ಟ. ಹೀಗಿರುವಾಗ ತಾಜ್ಮಹಲನ್ನು ವಕ್ಫ್ಗೆ ನೀಡುವ ದಾಖಲೆಗೆ ಆತ ಸಹಿ ಮಾಡುವುದು ಸಾಧ್ಯವೇ ಎಂದು ಪೀಠ ಪ್ರಶ್ನಿಸಿತು.
ಮೊಘಲರು ನಿರ್ಮಿಸಿದ್ದ ಎಲ್ಲ ಕಟ್ಟಡಗಳನ್ನು ಅವರ ಆಳ್ವಿಕೆಯ ನಂತರ ಬ್ರಿಟಿಷ್ ಸರ್ಕಾರವು ವಶಕ್ಕೆ ಪಡೆಯಿತು. ದೇಶ ಸ್ವತಂತ್ರಗೊಂಡ ಬಳಿಕ ಈ ಸ್ಮಾರಕಗಳು ಭಾರತೀಯ ಪುರಾತತ್ವ ಇಲಾಖೆಗೆ (ಎಎಸ್ಐ) ಸೇರಿದವು ಎಂದು ವಕ್ಫ್ ವಕೀಲರಿಗೆ ಪೀಠ ಹೇಳಿತು.
ತಾಜ್ಮಹಲನ್ನು ವಕ್ಫ್ಗೆ ನೀಡಿದ ಯಾವುದೇ ದಾಖಲೆ ಇಲ್ಲ ಎಂದು ಎಎಸ್ಐ ಹೇಳಿದೆ. ತಾಜ್ಮಹಲ್ ತನ್ನ ಆಸ್ತಿ ಎಂದು ವಕ್ಫ್ ಮಂಡಳಿಯು ಮಾಡಿದ ಘೋಷಣೆಯನ್ನು ಪ್ರಶ್ನಿಸಿ ಎಎಸ್ಐ 2010ರಲ್ಲಿ ಸುಪ್ರೀಂ ಕೋರ್ಟ್ನಲ್ಲಿ ದೂರು ಸಲ್ಲಿಸಿತ್ತು.
ಈ ಸಂಬಂಧ ಮುಖ್ಯ ನ್ಯಾ| ದೀಪಕ್ ಮಿಶ್ರಾ, ಎ.ಎಂ. ಖನ್ವಿಲ್ಕರ್ ಮತ್ತು ಡಿ.ವೈ. ಚಂದ್ರಚೂಡ್ ಅವರನ್ನೊಳಗೊಂಡ ನ್ಯಾಯಪೀಠ ಪ್ರಕರಣದ ವಿಚಾರಣೆ ನಡೆಸಿದೆ.