ಮತದಾನದ ಹಕ್ಕನ್ನು ತಪ್ಪದೆ ಚಲಾಯಿಸಿ: ಆರ್.ಗೀತಾ

ಕೋಲಾರ: ಪ್ರತಿಯೊಬ್ಬ ವ್ಯಕ್ತಿಯೂ ಯಾವುದೇ ಕುಲ, ಮತ, ಜಾತಿ, ಧರ್ಮ, ಹಣ ಆಮಿಷಗಳಿಗೆ ಒಳಗಾಗದೇ ಪ್ರಾಮಾಣಿಕತೆಯಿಂದ ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಬೇಕೆಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಆರ್.ಗೀತಾ ಅವರು ಕಿವಿಮಾತು ಹೇಳಿದರು.

ನಗರದ ವಿಶ್ವೇಶ್ವರಯ್ಯ ಕ್ರೀಡಾಂಗಣ ಮತ್ತು ಕನಕ ಬಾಸ್ಕೆಟ್‍ಬಾಲ್ ಮೈದಾನದಲ್ಲಿ ಗುರುವಾರ ಭಾರತ ಸರ್ಕಾರ ನೆಹರು ಯುವಕೇಂದ್ರ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಮತದಾರರ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಪ್ರತಿಯೊಬ್ಬ ಮತದಾರರ ಪಾತ್ರ ಅತ್ಯಮೂಲ್ಯವಾದುದು. ದೇಶದ ಅಭಿವೃದ್ಧಿಗಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದೆ. ಹಾಗಾಗಿ ಈ ವ್ಯವಸ್ಥೆಯು ಉತ್ತಮವಾಗಿ ಇರಬೇಕಾದರೆ ಪ್ರತಿಯೊಬ್ಬ ಮತದಾರರು ಸ್ವಯಂ ಪ್ರೇರಿತರಾಗಿ ಮತಚಲಾಯಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ನೆಹರು ಯುವಕೇಂದ್ರದ ಎನ್.ವೈ.ಸಿ. ಎಸ್. ಪ್ರವೀಣ್ ಕುಮಾರ್ ಮಾತನಾಡಿ, ಮತದಾನ ಮಾಡುವುದು ಪ್ರತಿಯೊಬ್ಬ ನಾಗರೀಕರ ಕರ್ತವ್ಯ. ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಮಂದಿ ಮತಚಲಾಯಿಸದೆ ಹಿಂದೆ ಸರಿಯುವುದನ್ನು ಹೆಚ್ಚಾಗಿ ಕಾಣುತ್ತಿದ್ದೇವೆ. ಹಾಗಾಗಿ ಶೇ.100 ರಷ್ಟು ಮತದಾನ ಆಗದೇ ಇರುವುದು ಬೇಸರದ ಸಂಗತಿಯಾಗಿದೆ. ಉತ್ತಮ ದೇಶದ ನಿರ್ಮಾಣಕ್ಕಾಗಿ ಶೇ.100 ರಷ್ಟು ಮತದಾನ ಆಗಬೇಕು. ಆಗ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆಗೆ ಒಂದು ಅರ್ಥ ದೊರೆಯುತ್ತದೆ ಎಂದು ಹೇಳಿದರು.

18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಮತದಾರರೂ ಸಹ ತಪ್ಪದೆ ಮತದಾನವನ್ನು ಮಾಡುವ ಮೂಲಕ ದೇಶದ ಅಭಿವೃದ್ಧಿಗೆ ಕೈ ಜೋಡಿಸಬೇಕು. ನೀವು ಮತದಾನದಲ್ಲಿ ಪಾಲ್ಗೊಳ್ಳಬೇಕಲ್ಲದೆ ಇತರರೂ ಸಹ ತಪ್ಪದೆ ಮತದಾನ ಮಾಡಬೇಕು ಎಂಬ ಕುರಿತು ಜಾಗೃತಿಯನ್ನು ಮೂಡಿಸುವಂತಾಗಬೇಕು ಎಂದರು.
ಇದೇ ಸಂದರ್ಭಧಲ್ಲಿ ಕಲಾವಿದ ವೆಂಕಟಾಚಲಪತಿ ಪ್ರತಿಜ್ಞಾ ವಿಧಿ ಭೋದಿಸಿದರು.

ಕಾರ್ಯಕ್ರಮದಲ್ಲಿ ಅಶ್ವಥ್, ವೆಂಕಟೇಶ್, ಹಾಬಿ ರಮೇಶ್, ಕಾನೂನು ವಿದ್ಯಾರ್ಥಿಗಳಾದ ಕೊಂಡೇನಹಳ್ಳಿ ಬಾನು ಪ್ರಕಾಶ್, ಮಡೇರಹಳ್ಳಿ ಹರೀಶ್, ಪಾಲ್ ಸೇರಿದಂತೆ ಮುಂತಾದವರು ಹಾಜರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ