ಬೆಂಗಳೂರು, ಏ.13-ಚುನಾವಣೆ ವೇಳೆ ಯಾವುದೇ ಪಕ್ಷಗಳ ನಡುವೆ ಮಾಧ್ಯಮ ಹಾಗೂ ಪತ್ರಿಕೆಗಳು ಭೇದ-ಭಾವವಿಲ್ಲದಂತೆ ಸುದ್ದಿ ಪ್ರಕಟಿಸಲು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‍ಕುಮಾರ್ ಕರೆ ನೀಡಿದ್ದಾರೆ.
ಖಾಸಗಿ ಹೊಟೇಲ್‍ನಲ್ಲಿ ನಡೆದ ಮಾಧ್ಯಮದವರ ಚುನಾವಣಾ ವರದಿಗಾರಿಕೆ ಕುರಿತ ವಿಚಾರಸಂಕಿರಣದಲ್ಲಿ ಮಾತನಾಡಿದ ಅವರು, ಚುನಾವಣೆ ವೇಳೆ ನಾಲ್ಕನೇ ಅಂಗವಾಗಿರುವ ಪತ್ರಿಕೋದ್ಯಮ ಪ್ರಜಾಪ್ರಭುತ್ವದ ಉಳಿವಿಗೆ ಅತ್ಯಂತ ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸಬೇಕು ಎಂದು ತಿಳಿಸಿದರು.
ಪಕ್ಷಪಾತ ರಹಿತವಾಗಿ ಕೆಲಸ ಮಾಡುವ ಮೂಲಕ ನಿಜವಾದ ಪ್ರಜಾಪ್ರಭುತ್ವಸ್ಥಾಪನೆಗೆ ಕೈ ಜೋಡಿಸಬೇಕು. ನಿಷ್ಠ ಹಾಗೂ ನ್ಯಾಯಸಮ್ಮತವಾಗಿ ಚುನಾವಣೆ ನಡೆಯಲು ಸಹಕಾರ ನೀಡಬೇಕೆಂದು ಹೇಳಿದರು.
ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ಜಗದೀಶ್ ಮಾತನಾಡಿ, ಸಾಮಾಜಿಕ ಜಾಲತಾಣಗಳಲ್ಲಿನ ವಿಡಿಯೋ ವಾಯ್ಸ್‍ಕಾಲ್‍ಗಳ ಮೇಲೂ ಚುನಾವಣಾ ಆಯೋಗ ನಿಗಾ ವಹಿಸಲಿದೆ. ಯಾವುದೇ ಇಂಟರ್‍ನೆಟ್‍ಗಳ ಜಾಹೀರಾತು ಪ್ರಕಟಣೆಗೂ ಮುನ್ನ ಪೂರ್ವಾನುಮತಿ ಅಗತ್ಯವಿದೆ. ಒಂದು ವೇಳೆ ಪೂರ್ವಾನುಮತಿ ಪಡೆಯದೆ ಜಾಹೀರಾತು ನೀಡಿದರೆ ಅದನ್ನು ಪಾವತಿ ಸುದ್ದಿ ಎಂದು ಪರಿಗಣಿಸಲಾಗುವುದು. ಅದರ ಖರ್ಚನ್ನು ಅಭ್ಯರ್ಥಿಯ ವೆಚ್ಚಕ್ಕೆ ಸೇರಿಸಲಾಗುವುದು ಅದನ್ನು ಪ್ರೆಸ್‍ಕೌನ್ಸಿಲ್‍ಗೂ ವರದಿ ನೀಡಲಾಗುವುದು ಎಂದು ವಿವರಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ಸೇವೆ ಒದಗಿಸುವವರ ಜೊತೆ ಇದೇ 17 ರೊಳಗೆ ಒಂದು ಸಭೆ ನಡೆಸಲಿದ್ದೇವೆ. ಈ ಸಭೆಯಲ್ಲಿ ಯಾವ ರೀತಿ ಕಾರ್ಯನಿರ್ವಹಿಸಬೇಕು ಎಂಬ ಬಗ್ಗೆ ಸಲಹೆ, ಸೂಚನೆ ನೀಡಲಿದ್ದೇವೆ. ಅಂತಹ ಮಾರ್ಗಸೂಚಿಗಳನ್ನು ಪಾಲಿಸದ ಕೇಬಲ್ ಆಪರೇಟರ್‍ಗಳ ಯಂತ್ರೋಪಕರಣಗಳನ್ನು ಜಪ್ತಿ ಮಾಡಲು ಅವಕಾಶವಿದೆ. ಖಾಸಗಿ ದೂರವಾಣಿ ಸಂಸ್ಥೆಗಳ ವಿರುದ್ಧವೂ ನೋಟೀಸ್ ಜಾರಿ ಮಾಡಲಾಗುವುದು ಎಂದು ಹೇಳಿದರು.
ವಾಟ್ಸಪ್, ಫೇಸ್‍ಬುಕ್, ಟ್ವೀಟರ್‍ನಂತಹ ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಲು ಪೂರ್ವಾನುಮತಿ ಕಡ್ಡಾಯವಾಗಿದೆ. ಅಭ್ಯರ್ಥಿಗಳ ಪ್ರಚಾರಕ್ಕೆ ಯಾವುದೇ ರೀತಿಯ ಆಕ್ಷೇಪವಿಲ್ಲ, ಆದರೆ ಯಾವುದೇ ವ್ಯಕ್ತಿ, ಪಕ್ಷದ ತೇಜೋವಧೆ ಮಾಡುವ ಸುದ್ದಿಯನ್ನು ಪಾವತಿ ಸುದ್ದಿ ಎಂದು ಪರಿಗಣಿಸಲು ನಿರ್ಧರಿಸಲಾಗಿದೆ. ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಸಮಿತಿ ರಚಿಸಿ ಜಿಲ್ಲಾಮಟ್ಟದಲ್ಲಿ ಪಾವತಿ ಸುದ್ದಿಗಳನ್ನು ಗುರುತಿಸಿ ತೀರ್ಪು ನೀಡಿದರೆ ಅಂತಹ ಅಭ್ಯರ್ಥಿಗೆ ನೋಟೀಸ್ ನೀಡಲಾಗುವುದು. ಈ ನೋಟೀಸ್‍ಗೆ 48 ಗಂಟೆಗಳೊಳಗಾಗಿ ಆ ಅಭ್ಯರ್ಥಿ ಸಮರ್ಥನೆ ನೀಡದಿದ್ದರೆ ಪಾವತಿ ಸುದ್ದಿ ಎಂದು ನಿರ್ಧರಿಸಿ ಅದನ್ನು ಚುನಾವಣಾ ವೆಚ್ಚಕ್ಕೆ ಸೇರಿಸಲಾಗುವುದು ಎಂದರು.
ಜಿಲ್ಲಾ ಸಮಿತಿ ನೀಡಿದ ತೀರ್ಪಿನ ಬಗ್ಗೆ ಆಕ್ಷೇಪಗಳಿದ್ದರೆ ರಾಜ್ಯ ಸಮಿತಿಯಲ್ಲಿ ಪ್ರಶ್ನಿಸಬಹುದಾಗಿದ್ದು, ರಾಜ್ಯ ಸಮಿತಿ ತೀರ್ಪಿನ ಬಗ್ಗೆ ಆಕ್ಷೇಪವನ್ನೂ ಸಹ ಕೇಂದ್ರ ಸಮಿತಿಯಲ್ಲಿ ಪ್ರಶ್ನಿಸಬಹುದಾಗಿದೆ. ಕೇಂದ್ರ ಸಮಿತಿಯ ತೀರ್ಪೇ ಅಂತಿಮ. ಎಲ್ಲಾ ಸಾಮಾಜಿಕ ಜಾಲತಾಣಗಳ ಮೇಲೂ ಚುನಾವಣಾ ಆಯೋಗ ಹದ್ದಿನ ಕಣ್ಣಿಟ್ಟಿದ್ದು, ಮತದಾರರ ಮೇಲೆ ಪ್ರಭಾವ ಬೀರಬಾರದೆಂದು ಸ್ಪಷ್ಟಪಡಿಸಿದರು.
ವಾರ್ತಾ ಇಲಾಖೆ ಆಯುಕ್ತ ಹರ್ಷ ಮಾತನಾಡಿ, ಕೋಮು ಸೌಹಾರ್ದತೆ ಕದಡುವ ಕ್ರಿಮಿನಲ್ ಅಪರಾಧಗಳೆಂದು ಕಂಡುಬಂದ ವರದಿಗಳ ಮೇಲೆ ಐಪಿಸಿ ಸೆಕ್ಷನ್ ನಡಿ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.