ಬೆಂಗಳೂರು,ಏ.13- 2019ರ ಲೋಕಸಭೆ ಚುನಾವಣೆಗೆ ದಿಕ್ಸೂಚಿ ಎಂದೇ ಹೇಳಲಾಗಿರುವ ಕರ್ನಾಟಕ ವಿಧಾನಸಭೆ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಪ್ರಧಾನಿ ನರೇಂದ್ರ ಮೋದಿ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಪರ ಸುನಾಮಿ ಏಳಿಸಲು ಮುಂದಾಗಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಮುಕ್ತಗೊಳಿಸಿ ಬಿಜೆಪಿಯನ್ನು ಅಧಿಕಾರಕ್ಕೆ ತಂದರೆ ದಕ್ಷಿಣ ಭಾರತದಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವ ಗುರಿಗೆ ಈ ಚುನಾವಣೆ ಮುನ್ನುಡಿ ಬರೆಯಲಿದೆ ಎಂಬುದು ಅವರ ಲೆಕ್ಕಾಚಾರ.
ಕಾಂಗ್ರೆಸ್ ಪಾಲಿಗೆ ಏಕೈಕ ಆಶಾಕಿರಣವಾಗಿರುವ ಕರ್ನಾಟಕದಲ್ಲಿ ಆಡಳಿತಾರೂಢ ಪಕ್ಷವನ್ನು ಈ ಚುನಾವಣೆಯಲ್ಲಿ ಪರಾಭವಗೊಳಿಸಿದರೆ ಪುನಃ 2019ರ ಲೋಕಸಭೆ ಚುನಾವಣೆಯಲ್ಲಿ ಅಧಿಕಾರ ಹಿಡಿಯಲು ದಾರಿ ಸುಗಮವಾಗುತ್ತದೆ. ಇದಕ್ಕಾಗಿ ಕರುನಾಡಿನಿಂದಲೇ ಈ ವಿಜಯದ ದುಂದುಬಿ ಮೊಳಗಿಸಲು ಮೋದಿ ತೀರ್ಮಾನಿಸಿದ್ದಾರೆ.
ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾದ ನಂತರ ಇದುವರೆಗೂ ಮೋದಿ ಪ್ರಚಾರಕ್ಕೆ ಬಂದಿಲ್ಲ. ಬೆಂಗಳೂರಿನಲ್ಲಿ ನಡೆದ ಪರಿವರ್ತನಾ ರ್ಯಾಲಿಯ ಸಮಾರೋಪ ಸಮಾರಂಭ ಮೈಸೂರು, ದಾವಣಗೆರೆ ಮಾತ್ರ ಆಗಮಿಸಿದ್ದರು.
ಚುನಾವಣಾ ಆಯೋಗ ದಿನಾಂಕವು ಅಧಿಕೃತವಾಗಿ ಘೋಷಣೆಯಾದ ನಂತರ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಆಗಮಿಸಬೇಕೆಂಬ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತದೆ.
ಮೊದಲ ಪಟ್ಟಿ ಪ್ರಕಟವಾದ ನಂತರ ಅಲ್ಲಲ್ಲಿ ಸಣ್ಣಪುಟ್ಟ ಗೊಂದಲಗಳು, ಟಿಕೆಟ್ ವಂಚಿತರ ಪ್ರತಿಭಟನೆಯಿಂದಾಗಿ ಕಮಲಕ್ಕೆ ತುಸು ಇರಿಸು-ಮುರಿಸು ಉಂಟಾಗಿದೆ. ಇದೀಗ ಎಲ್ಲ ಅಭ್ಯರ್ಥಿಗಳ ಪಟ್ಟಿ ಅಧಿಕೃತವಾದ ನಂತರ ಮೋದಿ ಕರ್ನಾಟಕದಲ್ಲಿ ರಣ ಕಹಳೆ ಮೊಳಗಿಸಲಿದ್ದಾರೆ.
ಗುಜರಾತ್ನಂತೆ ಇಲ್ಲಿಯೂ ಪ್ರಚಾರ:
ತಮ್ಮ ತವರು ಜಿಲ್ಲೆ ಗುಜರಾತ್ನಲ್ಲಿ ಯಾವ ರೀತಿ ಪ್ರಚಾರ ನಡೆಸಿದ್ದರೋ ಕರ್ನಾಟಕದಲ್ಲೂ ಮೋದಿ ಅದೇ ಮಾದರಿಯಲ್ಲೇ ಬಿಜೆಪಿ ಸಾರಥಿಗಳ ಪರ ಮತಯಾಚನೆ ಮಾಡುವರು.
ಈಗಾಗಲೇ ಬಿಜೆಪಿಯ ಚಿಂತಕರ ಚಾವಡಿ ಮೋದಿ ರಾಜ್ಯದ ಯಾವ ಯಾವ ಭಾಗದಲ್ಲಿ ಪ್ರಚಾರ ನಡೆಸಬೇಕು ಎಂಬುದರ ವಿಸ್ತೃತವಾದ ಪಟ್ಟಿಯನ್ನು ಸಿದ್ಧಪಡಿಸಿ ಕಳುಹಿಸಿಕೊಟ್ಟಿದ್ದಾರೆ.
ಅದರಂತೆ ಈ ಬಾರಿ ನರೇಂದ್ರ ಮೋದಿ ಅವರು ರಾಜ್ಯದಲ್ಲಿ ಸರಿಸುಮಾರು 20ರಿಂದ 25ರವರೆಗೆ ಬಹಿರಂಗ ಸಭೆಗಳನ್ನು ನಡೆಸಲಿದ್ದಾರೆ. ಅಗತ್ಯವಿರುವ ಕಡೆ ರೋಡ್ ಶೋ ಕೂಡ ನಡೆಸುವರು.
ಇನ್ನು ಗುಜರಾತ್ನಲ್ಲಿ ಮೋದಿ ದೇವಸ್ಥಾನಗಳಿಗೆ, ಮಠ ಮಂದಿರಗಳು ಹಾಗೂ ಧಾರ್ಮಿಕ ಕೇಂದ್ರಗಳಿಗೆ ಭೇಟಿ ಕೊಟ್ಟಿದ್ದರು. ಇದು ಪಕ್ಷಕ್ಕೆ ಹೆಚ್ಚಿನ ಲಾಭ ತಂದುಕೊಟ್ಟಿತ್ತು.
ಈಗ ಕರ್ನಾಟಕದಲ್ಲೂ ನರೇಂದ್ರ ಮೋದಿ ಕರಾವಳಿ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕೇಂದ್ರವೆನಿಸಿದ ಧರ್ಮಸ್ಥಳ, ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯಲ್ಲಿರುವ ಶಾರದಾಂಬೆ ಪೀಠ, ಮೈಸೂರಿನ ಸುತ್ತೂರು ಮಠ, ತುಮಕೂರಿನ ಸಿದ್ದಗಂಗಾ ಮಠ, ಹುಬ್ಬಳ್ಳಿ ಮೂಜಗಂ ಮಠ, ಆದಿಚುಂಚನಗಿರಿ ಪೀಠದ ಸ್ವಾಮೀಜಿಗಳನ್ನು ಭೇಟಿ ಮಾಡುವ ಸಾಧ್ಯತೆ ಇದೆ.
ಅಲ್ಲದೆ ದೇಶದ ವಿವಿಧ ಭಾಗಗಳಲ್ಲಿ ಉಗ್ರರ ದಾಳಿಗೆ ಬಲಿಯಾದ ವೀರ ಯೋಧರ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳಲಿದ್ದಾರೆ.
ಈಗಾಗಲೇ ರಾಜ್ಯ ಬಿಜೆಪಿ ಘಟಕದ ವತಿಯಿಂದ ಅವರ ಪ್ರವಾಸದ ಪಟ್ಟಿಯನ್ನು ಕಳುಹಿಸಿಕೊಟ್ಟಿದ್ದಾರೆ.ಕೇಂದ್ರ ನಾಯಕರು ಇದನ್ನು ಮತ್ತೊಮ್ಮೆ ಪರಿಶೀಲಿಸಿ ಅಂತಿಮಗೊಳಿಸಲಿದ್ದಾರೆ.
ಪಕ್ಷ ಯಾವ ಭಾಗದಲ್ಲಿ ಸಂಘಟನೆಯಿಂದ ಹಿನ್ನಡೆಯಾಗಿದೆಯೋ ಅಂಥ ಕಡೆ ಮೋದಿ ಹೆಚ್ಚು ಪ್ರಚಾರ ನಡೆಸುವರು.ಉಳಿದಂತೆ ಬಿಜೆಪಿ ಭದ್ರ ಕೋಟೆ ಎನಿಸಿದ ಕರಾವಳಿ, ಮುಂಬೈ, ಹೈದರಾಬಾದ್ ಹಾಗೂ ಮಧ್ಯ ಕರ್ನಾಟಕ ಸೇರಿದಂತೆ ಬೆಂಗಳೂರಿನಲ್ಲಿ ಮತದಾನ ಎರಡು ದಿನ ಇರುವಾಗ ಬೃಹತ್ ಸಾರ್ವಜನಿಕ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.