ಕಥುವಾ ಅತ್ಯಾಚಾರ, ಹತ್ಯೆ ಪ್ರಕರಣ: ಗ್ರಾಮ ತೊರೆದ ಸಂತ್ರಸ್ತೆ ಬಾಲಕಿಯ ಕುಟುಂಬ!

ಶ್ರೀನಗರ,ಏ.13

ಅತ್ಯಾಚಾರಕ್ಕೀಡಾಗಿ ಹತ್ಯೆಯಾದ 8 ವರ್ಷದ ಬಾಲಕಿಯ ಕುಟುಂಬ ಭೀತಿಗೊಳಗಾಗಿ ರಸನಾ ಗ್ರಾಮದಿಂದ ಪಲಾಯನ ಮಾಡಿದೆ. ಜಮ್ಮು ಮತ್ತು ಕಾಶ್ಮೀರ ಪೊಲೀಸರು ಪ್ರಕರಣವನ್ನು ‘ಸರಿಯಾಗಿ ನಿಭಾಯಿಸಿಲ್ಲ’ ಎಂದು ಆರೋಪಿಸಿ ಜಮ್ಮು ಬಾರ್‌ ಅಸೋಸಿಯೇಶನ್‌ ಪ್ರತಿಭಟನೆಗೆ ಕರೆ ನೀಡಿದ ಬಳಿಕ ಗ್ರಾಮದಲ್ಲಿ ಭೀತಿಯ ವಾತಾವರಣ ಮೂಡಿದೆ.
ಸಂತ್ರಸ್ತೆಯ ತಂದೆ ಮುಹಮ್ಮದ್‌ ಯೂಸುಫ್‌ ಪುಜ್ವಾಲಾ ತಮ್ಮ ಪತ್ನಿ, ಇಬ್ಬರು ಮಕ್ಕಳು ಮತ್ತು ಜಾನುವಾರುಗಳ ಜತೆ ಗ್ರಾಮವನ್ನು ತೊರೆದು ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಪ್ರಕರಣದ ಬಗ್ಗೆ ರಾಜ್ಯ ಸರಕಾರ ಮತ್ತು ಪೊಲೀಸರು ‘ಮೂಕಪ್ರೇಕ್ಷಕ’ರಾಗಿದ್ದಾರೆ ಎಂದು ಮಿರ್ವಾಯಿಜ್ ಉಮರ್‌ ಫಾರೂಕ್ ನೇತೃತ್ವದ ಪ್ರತ್ಯೇಕತಾವಾದಿ ಹುರಿಯತ್ ಕಾನ್ಫರೆನ್ಸ್‌ ಆರೋಪಿಸಿದೆ. ಇದೇ ವೇಳೆ ಭೀಮ್‌ ಸಿಂಗ್‌ ಅವರ ಜಮ್ಮು ಕಾಶ್ಮೀರ ಪ್ಯಾಂಥರ್ಸ್‌ ಪಾರ್ಟಿ ‘ಅತ್ಯಾಚಾರಿಗಳು ಮತ್ತು ಕೊಲೆಗಡುಕರ ಪರವಾಗಿ’ ಬಂದ್‌, ಪ್ರತಿಭಟನೆ ಹಾಗೂ ರ‍್ಯಾಲಿಗಳನ್ನು ನಡೆಸುತ್ತಿದೆ ಎಂದು ಅದು ದೂರಿದೆ.
ಈ ಮಧ್ಯೆ, ನಾಗರಿಕ ಸಮಾಜದ ಹಲವರು ಕೂಡ ದುಷ್ಕೃತ್ಯವನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಪ್ರಕರಣಕ್ಕೆ ಕೋಮು ಬಣ್ಣ ಬಳಿಯಲು ಬಿಜೆಪಿ ಯತ್ನಿಸುತ್ತಿದೆ ಎಂದು ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ಮಾಜಿ ಉಪಾಧ್ಯಕ್ಷೆ ಶೆಹ್ಲಾ ರಶೀದ್‌ ಆರೋಪಿಸಿದ್ದಾರೆ. ‘ಜಮ್ಮು ಕಾಶ್ಮೀರದಲ್ಲಿ ಕೊಳಕು ರಾಜಕಾರಣದಿಂದ ದೂರವಿರಿ. ಈ ರಾಜ್ಯವನ್ನು ಮತ್ತೊಂದು ಗುಜರಾತ್ ಮಾಡಲು ನಾವು ಬಿಡುವುದಿಲ್ಲ. ಇಲ್ಲಿ ಪ್ರತಿಭಟನೆ ನಡೆಸುವ ವಕೀಲರಿಗೆ ಮಕ್ಕಳಿಲ್ಲವೆ?. ಒಂದು ಮಗುವಿನ ಬಗ್ಗೆ ಅವರಿಗೆ ಕನಿಕರವಿಲ್ಲವೆ?’ ಎಂದು ಶೆಹ್ಲಾ ಪ್ರಶ್ನಿಸಿದ್ದಾರೆ.
ಪ್ರಕರಣದಲ್ಲಿ ಆರೋಪ ಪಟ್ಟಿ ದಾಖಲಿಸಲು ಕ್ರೈಂ ಬ್ರಾಂಚ್‌ಗೆ ಅವಕಾಶ ನೀಡದೆ ಪ್ರತಿಭಟಿಸುತ್ತಿರುವ ವಕೀಲರನ್ನು ಬಂಧಿಸಿ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಪ್ರಕರಣದ ವಿಚಾರಣೆಯನ್ನು ಕಥುವಾದಿಂದ ಬೇರೆಡೆಗೆ ವರ್ಗಾಯಿಸಬೇಕು ಎಂದೂ ಅವರು ಆಗ್ರಹಿಸಿದರು.
ಪೊಲೀಸರ ವಿರುದ್ಧ ಪ್ರತಿಭಟನೆ ರ್ಯಾಲಿಗಳಲ್ಲಿ ಭಾಗವಹಿಸಿದ ಸಚಿವರಾದ ಚೌಧರಿ ಲಾಲ್‌ ಸಿಂಗ್‌ ಮತ್ತು ಚಂದರ್‌ ಪ್ರಕಾಶ್‌ ಗಂಗಾ ಅವರನ್ನು ಕೂಡಲೇ ವಜಾ ಮಾಡುವಂತೆ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರಿಗೆ ಶೆಹ್ಲಾ ಆಗ್ರಹಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ