ಚನ್ನಪಟ್ಟಣ, ಏ.13- ಹೊಸಮನೆ ಗೃಹ ಪ್ರವೇಶದ ಕನಸು ಕಂಡಿದ್ದ ಹೆಡ್ ಕಾನ್ಸ್ಟೇಬಲ್ ಇಂದು ಮುಂಜಾನೆ ಸಂಭವಿಸಿದ ಅಪಘಾತದಲ್ಲಿ ಸಾವನ್ನಪ್ಪಿದ್ದು, ಗ್ರಾಮವೇ ಶೋಕಸಾಗರದಲ್ಲಿ ಮುಳುಗಿದೆ.
ಅಕ್ಕೂರಿನ ಸಾದರಹಳ್ಳಿ ಗ್ರಾಮದ ನಾಗರಾಜ್ (48) ಮೃತಪಟ್ಟ ಹೆಡ್ಕಾನ್ಸ್ಟೇಬಲ್.
ಬೆಂಗಳೂರಿನ ಪೆÇಲೀಸ್ಠಾಣೆಯೊಂದರಲ್ಲಿ ಹೆಡ್ಕಾನ್ಸ್ಟೇಬಲ್ ಆಗಿದ್ದ ನಾಗರಾಜ್ ಅವರು, ಚನ್ನಪಟ್ಟಣ ತಾಲ್ಲೂಕಿನ ಅಂಬಾಡಿಹಳ್ಳಿಯಲ್ಲಿ ಹೊಸ ಮನೆ ಕಟ್ಟಿಸಿದ್ದಾರೆ.
ಹತ್ತಾರು ಕನಸುಗಳನ್ನು ಕಂಡು ಗೃಹಪ್ರವೇಶಕ್ಕೆ ಸಜ್ಜಾಗುತ್ತಿದ್ದರು. ಸೋಮವಾರ ಗೃಹಪ್ರವೇಶಕ್ಕೆ ದಿನಾಂಕ ನಿಗದಿಯಾಗಿತ್ತು ಎನ್ನಲಾಗಿದೆ. ಸ್ನೇಹಿತರು ಹಾಗೂ ಸಂಬಂಧಿಕರಿಗೆ ಗೃಹಪ್ರವೇಶದ ಕಾರ್ಡ್ ಕೊಡುವ ಸಲುವಾಗಿ ಮಾದಾಪುರ ಗ್ರಾಮದಿಂದ ಇಂದು ಮುಂಜಾನೆ 5.45ರಲ್ಲಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದರು.
ಈ ವೇಳೆ ಕಣ್ವಾ ನದಿ ಸರಹದ್ದು ಕಡೆಯಿಂದ ಮರಳನ್ನು ತುಂಬಿಕೊಂಡು ಅತಿವೇಗವಾಗಿ ಮುನ್ನುಗ್ಗಿದ ಟ್ರ್ಯಾಕ್ಟರ್ ಇವರ ಬೈಕಿಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಆಯ ತಪ್ಪಿ ಬಿದ್ದ ನಾಗರಾಜ್ ಅವರ ಮೇಲೆಯೇ ಟ್ರ್ಯಾಕ್ಟರ್ ಹಿಂಬದಿ ಚಕ್ರ ಹರಿದ ಪರಿಣಾಮ ಸ್ಥಳದಲ್ಲೇ ಧಾರುಣವಾಗಿ ಮೃತಪಟ್ಟಿದ್ದಾರೆ. ಇವರ ಸಾವಿನಿಂದ ಗೃಹಪ್ರವೇಶದ ಕನಸು ನುಚ್ಚುನೂರಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮವೇ ಶೋಕಸಾಗರದಲ್ಲಿ ಮುಳುಗಿದೆ. ಅಪಘಾತದದ ವಿಷಯ ತಿಳಿದ ಅಕ್ಕೂರು ಠಾಣೆ ಪೆÇಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಶವವನ್ನು ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಗ್ರಾಮಸ್ಥರ ಆಕ್ರೋಶ:
ಈ ವ್ಯಾಪ್ತಿಯಲ್ಲಿ ಅಕ್ರಮ ಮರಳು ಸಾಗಾಣೆ ಎಗ್ಗಿಲ್ಲದೆ ನಡೆಯುತ್ತಿದ್ದರೂ ತಾಲ್ಲೂಕು ಆಡಳಿತ ಇದನ್ನು ತಡೆಯುವಲ್ಲಿ ವಿಫಲವಾಗಿದೆ. ಅತಿಯಾದ ಭಾರೀ ವಾಹನಗಳ ಓಡಾಟದಿಂದ ಅಪಘಾತಗಳು ಸಂಭವಿಸುತ್ತವೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೂಡಲೇ ಅಕ್ರಮ ಮರಳು ಸಾಗಾಣೆಯನ್ನು ನಿಲ್ಲಿಸುವ ಮೂಲಕ ಗ್ರಾಮಸ್ಥರ ಪ್ರಾಣ ರಕ್ಷಿಸಬೇಕೆಂದು ಸ್ಥಳದಲ್ಲಿ ಜಮಾಯಿಸಿದ್ದ ಸ್ಥಳೀಯರು ಒತ್ತಾಯಿಸಿದ್ದಾರೆ.