ಬೆಂಗಳೂರು, ಏ.13- ಮಾಜಿ ಸಚಿವ ಗೋವಿಂದಕಾರಜೋಳ ಅವರ ಪುತ್ರ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧ ಬಹಿರಂಗವಾಗಿಯೇ ಬಂಡಾಯದ ಕಹಳೆ ಊದಿದ್ದಾರೆ.
ತಮ್ಮ ಅಧಿಕೃತ ಫೇಸ್‍ಬುಕ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿ ಟೀಮ್ ಓಕೆ, ಆದರೆ, ರಾಜ್ಯದಲ್ಲಿ ಯಡಿಯೂರಪ್ಪನವರ ಟೀಮ್ ಏಕೆ ಎಂದು ಗೋವಿಂದಕಾರಜೋಳ ಪುತ್ರ ಉಮೇಶ್ ಕಾರಜೋಳ ಪ್ರಶ್ನಿಸಿದ್ದಾರೆ.
ಯಡಿಯೂರಪ್ಪನವರು ಹೇಳಿದವರಿಗೆಲ್ಲ ಟಿಕೆಟ್ ನೀಡುವುದಾದರೆ ಪಕ್ಷದ ಕಾರ್ಯಕರ್ತರು, ಪಕ್ಷಕ್ಕಾಗಿ ದುಡಿದವರು ಏನು ಮಾಡಬೇಕು, ನಿನ್ನೆ-ಮೊನ್ನೆ ಬಂದವರೆಲ್ಲಾ ಟಿಕೆಟ್ ಕೊಡುವುದಾದರೆ ಉಳಿದವರ ಪಾಡೇನೆಂದು ತೀಕ್ಷ್ಣವಾಗಿ ಫೇಸ್‍ಬುಕ್‍ನಲ್ಲಿ ಪ್ರಶ್ನಿಸಿದ್ದಾರೆ.
ವಿಜಯಪುರ ಜಿಲ್ಲೆ ನಾಗಠಾಣ ಮೀಸಲು ವಿಧಾನಸಭಾ ಕ್ಷೇತ್ರದ ಬಿಜೆಪಿ ಪ್ರಬಲ ಆಕಾಂಕ್ಷಿಯಾಗಿದ್ದ ಉಮೇಶ್ ಅವರಿಗೆ ಮೊದಲ ಪಟ್ಟಿಯಲ್ಲಿ ಕೇಂದ್ರ ನಾಯಕರು ಟಿಕೆಟ್ ಘೋಷಣೆ ಮಾಡಿರಲಿಲ್ಲ. ಇದರಿಂದ ಬೇಸರಗೊಂಡು ಅವರು ಬಿಎಸ್‍ವೈ ವಿರುದ್ಧ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ ಎನ್ನಲಾಗಿದೆ.
ನಾಗಠಾಣ ಕ್ಷೇತ್ರದಿಂದ ಯಡಿಯೂರಪ್ಪ ತಮ್ಮ ಆಪ್ತ ವಿಠಲ ಕಟಕದೋಂಡ ಅವರಿಗೆ ಟಿಕೆಟ್ ನೀಡಲು ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ನಾಗಠಾಣದಿಂದ ಟಿಕೆಟ್ ಕೈ ತಪ್ಪಿರುವುದಕ್ಕೆ ಉಮೇಶ್ ಕಾರಜೋಳ ಈ ರೀತಿ ಫೇಸ್‍ಬುಕ್‍ನಲ್ಲಿ ಪ್ರಶ್ನಿಸಿದ್ದಾರೆ. ಇತ್ತಿಚೆಗೆ ಬಿಡುಗಡೆಯಾದ 72 ಅಭ್ಯರ್ಥಿಗಳ ಪಟ್ಟಿಯಲ್ಲಿ ಬಹುತೇಕರು ಬಿಎಸ್‍ಬೈ ಬೆಂಬಲಿಗರು ಎಂಬ ಮಾತು ಪಕ್ಷದ ವಲಯದಲ್ಲಿ ಹಬ್ಬಿದೆ.
ತಮ್ಮ ಆಪ್ತರು ಮತ್ತು ಬೆಂಬಲಿಗರ ಹಿತ ಕಾಪಾಡಲು ಯಡಿಯೂರಪ್ಪ ಟಿಕೆಟ್ ಖಚಿತಪಡಿಸಿರುವುದು ಕೆಲವರ ಕಣ್ಣು ಕೆಂಪಾಗುವಂತೆ ಮಾಡಿದೆ.