![indian-national-congress](http://kannada.vartamitra.com/wp-content/uploads/2018/02/indian-national-congress-678x381.png)
ನವದೆಹಲಿ, ಏ.13-ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಕಸರತ್ತು ಮುಂದುವರೆದಿದೆ. ಎಲ್ಲಾ 224 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗೆ ಅಂತಿಮ ರೂಪ ಕೊಡಲಾಗಿದ್ದು, 130 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಇಂದು ಸಂಜೆ ಬಿಡುಗಡೆ ಮಾಡುವ ಸಾಧ್ಯತೆ ಇದೆ.
ನವದೆಹಲಿಯ 10 ಜನ್ಪಥ ರಸ್ತೆಯಲ್ಲಿರುವ ಸೋನಿಯಾ ಅವರ ನಿವಾಸದಲ್ಲಿ ಎಐಸಿಸಿ ಪ್ರಧಾನಕಾರ್ಯದರ್ಶಿ, ಕೇಂದ್ರ ಚುನಾವಣಾ ಸಮಿತಿ ಮುಖಂಡರೂ ಆದ ಮಧುಸೂದನ್ ಮಿಸ್ತ್ರಿ, ರಾಜ್ಯ ಚುನಾವಣಾ ಉಸ್ತುವಾರಿ ವೇಣುಗೋಪಾಲ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಮಲ್ಲಿಕಾರ್ಜುನ್ ಖರ್ಗೆ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಇಂದು ಸರಣಿ ಸಭೆ ನಡೆಸಿ ಒಂದು ಹಂತದ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಿದ್ದು, ಇಂದು ಸಂಜೆ ಬಿಡುಗಡೆ ಮಾಡಲಿದ್ದಾರೆ.
ಹಾಲಿ ಶಾಸಕರು ಹಾಗೂ ಜೆಡಿಎಸ್ನ ಬಂಡಾಯ ಶಾಸಕರು ಸೇರಿದಂತೆ ಯಾವುದೇ ತಕರಾರು ಇಲ್ಲದ 130 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಇಂದು ಸಂಜೆ ಎಐಸಿಸಿ ಬಿಡುಗಡೆ ಮಾಡಲಿದ್ದು, ಉಳಿದ ಕ್ಷೇತ್ರಗಳಿಗೆ ಇದೇ 15 ರಂದು ಅಭ್ಯರ್ಥಿಗಳನ್ನು ಪ್ರಕಟಿಸಲಿದೆ. ಎಲ್ಲಾ 224 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಸ್ಕ್ರೀನಿಂಗ್ ಕಮಿಟಿ ಪರಿಶೀಲನೆನಡೆಸಿದ್ದು, ಅಂತಿಮಗೊಳಿಸಿದೆ. ಈಗಾಗಲೇ ಸಾಕಷ್ಟು ಆಕಾಂಕ್ಷಿಗಳಿರುವುದರಿಂದ ಬಂಡಾಯ ಏಳುವ ಸಾಧ್ಯತೆ ಇದೆ ಹಾಗೂ ಅತೃಪ್ತರು ಪಕ್ಷ ತೊರೆಯುವ ಸಾಧ್ಯತೆ ಇರುವುದರಿಂದ ಕೊನೆ ಕ್ಷಣದಲ್ಲಿ ಅಭ್ಯರ್ಥಿಗಳ ಆಯ್ಕೆಯನ್ನು ಪ್ರಕಟಿಸಲು ಪಕ್ಷದ ಮುಖಂಡರು ತೀರ್ಮಾನಿಸಿದ್ದಾರೆ.
ಕಳೆದ ಬಾರಿ ಮಾಡಿದಂತೆ ಎರಡನೇ ಪಟ್ಟಿ ಪ್ರಕಟಿಸದೆ ನೇರವಾಗಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಬಿ ಫಾರಂ ತಲುಪಿಸುವ ಯೋಜನೆಯನ್ನೂ ಹಾಕಿಕೊಂಡಿದೆ.
ಆಯ್ಕೆಯಾದ ಅಭ್ಯರ್ಥಿಗಳಿಗೆ ಈಗಾಗಲೇ ಮುಖಂಡರು ಮೌಖಿಕ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಆದರೆ ಅಧಿಕೃತವಾಗಿ ಪ್ರಕಟಗೊಂಡು ಬಿ ಫಾರಂ ಕೈ ಸೇರುವವರೆಗೂ ಯಾವುದನ್ನೂ ಹೇಳಲು ಸಾಧ್ಯವಿಲ್ಲ. ಹಾಗಾಗಿ ಆಕಾಂಕ್ಷಿಗಳು ಇನ್ನೂ ಚಡಪಡಿಸುತ್ತಿದ್ದಾರೆ. ನೂರಾರು ಆಕಾಂಕ್ಷಿಗಳು ನವದೆಹಲಿಯಲ್ಲಿ ಬೀಡುಬಿಟ್ಟು ಟಿಕೆಟ್ ಪಡೆಯಲು ತಮ್ಮ ನಾಯಕರೊಂದಿಗೆ ಕೊನೆ ಕ್ಷಣದ ಕಸರತ್ತನ್ನೂ ಮುಂದುವರೆಸಿದ್ದಾರೆ.
ಸಾಮಾಜಿಕ ನ್ಯಾಯ, ಪ್ರಾದೇಶಿಕ ಸಮಾನತೆ, ಜಾತಿವಾರು ಆದ್ಯತೆ, ಪಕ್ಷ ನಿಷ್ಠೆ, ಬೇರೆ ಪಕ್ಷದಿಂದ ಬಂದವರಿಗೆ ಆದ್ಯತೆ, ಗೆಲ್ಲುವ ಸಾಮಥ್ರ್ಯ ಎಲ್ಲವನ್ನು ಪರಿಗಣಿಸಿ ಅಭ್ಯರ್ಥಿಗಳ ಆಯ್ಕೆಯನ್ನು ಅಳೆದು ತೂಗಿ ಮಾಡಲಾಗಿದೆ.
ರಾಜ್ಯದಲ್ಲಿ ಮತ್ತೊಮ್ಮೆ ಶತಾಯಗತಾಯ ಅಧಿಕಾರಕ್ಕೆ ಬರಲೇಬೇಕು ಎಂಬ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಾಕಷ್ಟು ಕಸರತ್ತು ನಡೆಸಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 2019ರ ಲೋಕಸಭೆ ಚುನಾವಣೆಯಲ್ಲಿ ದೇಶದಲ್ಲಿ ಕಾಂಗ್ರೆಸ್ಗೆ ಮತ್ತೆ ಶಕ್ತಿ ಬರಲಿದೆ ಎಂಬ ಹಿನ್ನೆಲೆಯಲ್ಲಿ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಕಸರತ್ತನ್ನು ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿಯವರು ಮಾಡಿದ್ದಾರೆ.
ಅಲ್ಲದೆ, ಯಾವುದೇ ಭಿನ್ನಮತ, ಬಂಡಾಯ ಎದುರಾಗದಂತೆ ಮುನ್ನೆಚ್ಚರಿಕಾ ಕ್ರಮವನ್ನೂ ಕೂಡ ಕೈಗೊಂಡಿದ್ದಾರೆ.