ಬೆಂಗಳೂರು, ಏ.13- ಕರುಣಾಶ್ರಯ ಸಂಸ್ಥೆ ಸಹಯೋಗದಲ್ಲಿ ಶ್ರೀ ಚಂದನ್ಮಲ್ ಪೂಕ್ರಾಜ್ ಬೋತ್ರಾ ಟ್ರಸ್ಟ್ ವತಿಯಿಂದ ನಗರದ ಪೂರ್ವ ಹಾಗೂ ಈಶಾನ್ಯ ಭಾಗಗಳಲ್ಲಿ ಕ್ಯಾನ್ಸರ್ ರೋಗಿಗಳನ್ನು ಗುರುತಿಸಿ ಅವರ ಮನೆಗಳಿಗೇ ಹೋಗಿ ಉಚಿತ ಆರೋಗ್ಯ ಸೇವೆ ನೀಡುವುದಾಗಿ ವೈದ್ಯೆ ಡಾ.ವೀಣಾ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 19 ವರ್ಷಗಳಿಂದ ಮಾರುತಿ ಸೇವಾ ನಗರದಲ್ಲಿ ಶ್ರೀ ಚಂದನ್ಮಲ್ ಬೋತ್ರಾ ಸೇವಾರ್ಥ ಚಿಕಿತ್ಸಾಲಯ ಪ್ರಾರಂಭಿಸಿದ್ದು, ಈ ಭಾಗದ ಸುತ್ತಮುತ್ತಲಿನ ಜನರಿಗೆ ಪ್ರಾಥಮಿಕ ಚಿಕಿತ್ಸಾ ಸೌಲಭ್ಯ ನೀಡುತ್ತ ಬರಲಾಗಿದೆ ಎಂದು ಹೇಳಿದರು.
ಜಿಎಎಫ್ ಸಂಸ್ಥೆಯ ಸಹಯೋಗದಲ್ಲಿ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ ಮಾಡಲಾಗುತ್ತದೆ. ಅಲ್ಲದೆ, ನಮ್ಮ ಘಟಕದಲ್ಲಿ ಕ್ಲಿನಿಕಲ್ ಲ್ಯಾಬೊರೇಟರಿ, ಫಿಜಿಯೋಥೆರಪಿ, ಮಧುಮೇಹಿಗಳ ಪಾದಗಳ ರಕ್ಷಣಾ ವಿಭಾಗದೊಂದಿಗೆ ಹೃದಯ ಸಂಬಂಧಿ ರೋಗಗಳು, ಇಎಸ್ಟಿ ಮೂಳೆ ರೋಗಗಳು, ದಂತ ಸಮಸ್ಯೆಗಳು ಮತ್ತಿತರ ಸಮಸ್ಯೆಗಳಿಗೆ ತಜ್ಞ ವೈದ್ಯರುಗಳಿಂದ ತಪಾಸಣೆ ಹಾಗೂ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು.
47 ಸಾವಿರ ಮಧುಮೇಹಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಿ ಗುಣಮುಖರನ್ನಾಗಿ ಮಾಡಲಾಗಿದೆ. ಕಿದ್ವಾಯಿ, ಕ್ಯಾನ್ಸರ್ ಆಸ್ಪತ್ರೆಗೆ ಡಿಎಸ್ಕೆ ಯಂತ್ರವನ್ನು ನಮ್ಮ ಟ್ರಸ್ಟ್ ಕೊಡುಗೆಯಾಗಿ ನೀಡಿದೆ. ಮೂಳೆರೋಗ ಶಸ್ತ್ರ ಚಿಕಿತ್ಸೆಗಳು ಮತ್ತು ಹೃದಯ ಶಸ್ತ್ರ ಚಿಕಿತ್ಸೆಗಳಿಗೆ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಧನ ಸಹಾಯ ಮಾಡಲಾಗಿದೆ ಎಂದು ತಿಳಿಸಿದರು.
ಹೆಚ್ಚಿನ ವಿವರಗಳಿಗೆ 9686837277 ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.