ಮೊದಲ ಪಟ್ಟಿಯಲ್ಲೇ ಟಿಕೆಟ್ ವಂಚಿತರು ಪಕ್ಷದ ವಿರುದ್ದ ತಿರುಗಿ ಬಿದ್ದಿರುವ ಸಂದರ್ಭದಲ್ಲೇ ಬಿಜೆಪಿಯ ಎರಡನೇ ಪಟ್ಟಿ ಇಂದು ಅಥವಾ ನಾಳೆ ಬಿಡುಗಡೆ

ಬೆಂಗಳೂರು,ಏ.13-ಮೊದಲ ಪಟ್ಟಿಯಲ್ಲೇ ಟಿಕೆಟ್ ವಂಚಿತರು ಪಕ್ಷದ ವಿರುದ್ದ ತಿರುಗಿ ಬಿದ್ದಿರುವ ಸಂದರ್ಭದಲ್ಲೇ ಬಿಜೆಪಿಯ ಎರಡನೇ ಪಟ್ಟಿ ಇಂದು ಅಥವಾ ನಾಳೆ ಬಿಡುಗಡೆಯಾಗಲಿದೆ.

ಈಗಾಗಲೇ 72 ವಿಧಾನಸಭಾ ಕ್ಷೇತ್ರಗಳಿಗೆ ಬಿಜೆಪಿ ತನ್ನ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಇದೀಗ ಎರಡನೇ ಪಟ್ಟಿಯಲ್ಲಿ ಸುಮಾರು 80ಕ್ಕೂ ಹೆಚ್ಚು ಕ್ಷೇತ್ರಗಳಿಗೆ ಪಟ್ಟಿಯನ್ನು ಪ್ರಕಟಿಸಲು ಮುಂದಾಗಿದೆ.

ರಾಜ್ಯ ನಾಯಕರು ಸಿದ್ದಪಡಿಸಿರುವ ಪಟ್ಟಿಯು ಈಗಾಗಲೇ ಕೇಂದ್ರ ನಾಯಕರ ಕೈಗೆ ತಲುಪಿದ್ದು ಮತ್ತೊಮ್ಮೆ ಪರಿಶೀಲಿಸಿದ ಬಳಿಕ ಯಾವುದೇ ಸಂದರ್ಭದಲ್ಲಿ ಬಿಡುಗಡೆಯಾಗುವ ಸಂಭವವಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಈ ಬಾರಿಯ ಪಟ್ಟಿಯಲ್ಲಿ ಪ್ರಮುಖವಾಗಿ 2013ರ ವಿಧಾನಸಭೆ ಚುನಾವಣೆಯಲ್ಲಿ 5ರಿಂದ 10 ಸಾವಿರ ಮತಗಳಲ್ಲಿ ಪರಾಭವಗೊಂಡ ಅಭ್ಯರ್ಥಿಗಳಿಗೆ ಟಿಕೆಟ್ ಸಿಗುವ ಸಂಭವವಿದೆ.
ಮುಖ್ಯವಾಗಿ ಉತ್ತರ ಕರ್ನಾಟಕ , ಹೈದರಾಬಾದ್ ಕರ್ನಾಟಕ ಹಾಗೂ ಮಧ್ಯಕರ್ನಾಟಕ ಭಾಗದಲ್ಲಿ ಗೆಲ್ಲುವ ಅಭ್ಯರ್ಥಿಗಳನ್ನೇ ಗುರಿಯಾಗಿಟ್ಟುಕೊಂಡು ಕಣಕ್ಕಿಳಿಸಲು ಬಿಜೆಪಿ ಮುಂದಾಗಿದೆ.
ಮೊದಲ ಪಟ್ಟಿಯಲ್ಲಿ ಸಾಕಷ್ಟು ಗೊಂದಲ ಉಂಟಾಗಿರುವುದರಿಂದ ಈ ಬಾರಿ ಭಿನ್ನಮತಕ್ಕೆ ಅವಕಾಶವಿಲ್ಲದಂತೆ ಎಚ್ಚರಿಕೆ ಹೆಜ್ಜೆ ಇಟ್ಟಿರುವ ಬಿಜೆಪಿ ನಾಯಕರು ಗೆಲುವನ್ನೇ ಮಾನದಂಡವಾಗಿಟ್ಟುಕೊಂಡಿದ್ದಾರೆ.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಖಾಸಗಿ ಸಂಸ್ಥೆಯೊಂದು ನಡೆಸಿರುವ ಸಮೀಕ್ಷೆ ಹಾಗೂ ಜಿಲ್ಲಾ ಘಟಕಗಳು ಶಿಫಾರಸು ಮಾಡಿರುವ ವರದಿ, ರಾಜ್ಯ ಘಟಕಗಳಿಂದ ಬಂದಿರುವ ಪಟ್ಟಿ ಈ ಎಲ್ಲವನ್ನು ಅಳೆದು ತೂಗಿಯೇ ಅಭ್ಯರ್ಥಿಗಳ ಹೆಸರು ಘೋಷಣೆಯಾಗಲಿದೆ.
2008ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗಳಿಸಿದ್ದ ಶಿವಮೊಗ್ಗ, ದಾವಣಗೆರೆ, ಬಳ್ಳಾರಿ, ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಬಾಗಲಕೋಟೆ ಮತ್ತಿತರ ಜಿಲ್ಲೆಗಳಲ್ಲಿ ಈವರೆಗೂ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ.ಇದು ಸಹಜವಾಗಿ ಆತಂಕಕ್ಕೀಡು ಮಾಡಿದೆ.

ಮೂಲಗಳ ಪ್ರಕಾರ 2ನೇ ಪಟ್ಟಿಯಲ್ಲಿ 80ರಿಂದ 100 ಅಭ್ಯರ್ಥಿಗಳನ್ನು ಘೋಷಿಸಲು ಪಕ್ಷದ ಮುಖಂಡರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.
ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ರಾಜ್ಯ ಪ್ರವಾಸ ಇಂದು ಅಂತಿಮಗೊಳ್ಳಲಿದ್ದು , ಸಂಜೆ ಇಲ್ಲವೆ ನಾಳೆ ಪಟ್ಟಿ ಹೊರಬೀಳುವ ನಿರೀಕ್ಷೆಯಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ