ಬೆಂಗಳೂರು, ಏ.12- ಜೆಡಿಎಸ್ನಿಂದ ಕಾಂಗ್ರೆಸ್ ಸೇರಿದ ಏಳು ಮಂದಿ ಶಾಸಕರಿಗೂ ಕಾಂಗ್ರೆಸ್ ಟಿಕೆಟ್ ನೀಡುವುದು ಖಚಿತ ಎಂದು ಜಮೀರ್ ಅಹಮ್ಮದ್ ಖಾನ್ ಸ್ಪಷ್ಟಪಡಿಸಿದ್ದಾರೆ.
ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಕೊಟ್ಟ ಮಾತನ್ನು ಎಂದೂ ತಪ್ಪುವುದಿಲ್ಲ. ನಾವು ಏಳು ಮಂದಿಗೂ ಟಿಕೆಟ್ ನೀಡುವುದು ಖಚಿತವಾಗಿದೆ.
ಪ್ರಸನ್ನಕುಮಾರ್ ಅವರು ಹಲವಾರು ವರ್ಷಗಳಿಂದ ಕಾಂಗ್ರೆಸ್ನಲ್ಲಿ ಕೆಲಸ ಮಾಡುತ್ತಿದ್ದು, ಅವರು ಟಿಕೆಟ್ ಕೇಳುವುದರಲ್ಲಿ ತಪ್ಪಿಲ್ಲ. ಆದರೆ, ನಮಗೆ ಕೊಟ್ಟ ಭರವಸೆಯಂತೆ ಹೈಕಮಾಂಡ್ ಪ್ರಸನ್ನಕುಮಾರ್ ಸೇರಿದಂತೆ ಎಲ್ಲರಿಗೂ ಟಿಕೆಟ್ ನೀಡಲಿದೆ.
ಲೋಕಸಭೆ ನಾಯಕ ಮಲ್ಲಿಕಾರ್ಜುನ ಖರ್ಗೆ ಕೂಡ ಅಖಂಡ ಶ್ರೀನಿವಾಸಮೂರ್ತಿ ಅವರಿಗೆ ಆಶೀರ್ವಾದ ಮಾಡಿದ್ದಾರೆ. ಹೈಕಮಾಂಡ್ ಟಿಕೆಟ್ ಕೊಟ್ಟರೆ ನನ್ನ ಅಭ್ಯಂತರ ಏನೂ ಇಲ್ಲ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ.
ಅಖಂಡ ಅವರಿಗೆ ಟಿಕೆಟ್ ಕೈಕೊಟ್ಟಿದೆ ಎಂಬುದು ವದಂತಿಯ ಸುದ್ದಿ ಎಂದು ಜಮೀರ್ ಹೇಳಿದರು.