ಅಶೋಕ್‍ಖೇಣಿ ವಿರುದ್ಧ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಿಂ:

ಮಂಡ್ಯ, ಏ.12- ವಿಧಾನಸಭೆ ಚುನಾವಣೆಯಲ್ಲಿ ಬೀದರ್ ವಿಧಾನಸಭಾ ಕ್ಷೇತ್ರದಿಂದ ಅಶೋಕ್‍ಖೇಣಿ ವಿರುದ್ಧ ಸ್ಪರ್ಧಿಸುವುದಾಗಿ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಿಂ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಎಂಐಸಿ ಯೋಜನೆಯಡಿ ರೈತರನ್ನು ವಂಚಿಸಿರುವ ಅಶೋಕ್ ಖೇಣಿ ವಿರುದ್ಧ ಕಾನೂನು ಸಮರ ಸಾರಿರುವ ನಾನು, ರಾಜ್ಯದ ಪರವಾಗಿ ಹೋರಾಟ ನಡೆಸುತ್ತಿರುವ ನನ್ನ ಪರವಾಗಿ ಮಂಡ್ಯ ರೈತರು ಬೀದರ್‍ನಲ್ಲಿ ಪ್ರಚಾರ ನಡೆಸುವಂತೆ ಮನವಿ ಮಾಡಿದರು.
ನನಗೆ ಬೀದರ್ ಕ್ಷೇತ್ರದ ಶಾಸಕನಾಗಬೇಕು ಎಬುವುದಕ್ಕಿಂತ ಅಶೋಕ್ ಖೇಣಿಯನ್ನು ಸೋಲಿಸುವುದೇ ನನ್ನ ಗುರಿಯಾಗಿದೆ. ಬೀದರ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಖೇಣಿ ವಿರುದ್ಧ ನನಗೆ ಬಿಜೆಪಿ ಟಿಕೆಟ್ ನೀಡಿದರೆ ಆ ಪಕ್ಷದ ಅಭ್ಯರ್ಥಿಯಾಗಿ ಅಥವಾ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆ ಎದುರಿಸುತ್ತೇನೆ.
ರಾಜ್ಯದ ಪರವಾಗಿ ಖೇಣಿ ರೈತರಿಗೆ ಮಾಡಿರುವ ಮೋಸಗಳ ಅನ್ಯಾಯಗಳ ವಿರುದ್ಧವಾಗಿ ಕಾನೂನು ಸಮರ ಸಾರಿರುವೆ. ನಾನು ಐದು ವರ್ಷಗಳಲ್ಲಿ 497 ದಿನ ಕೋರ್ಟ್ ಸುತ್ತಾಟ ಮಾಡಿದ್ದೇನೆ. ಇದಕ್ಕೆ ಯಾರಿಂದಲೂ ಯಾವ ರೀತಿಯಲ್ಲೂ ಪ್ರತಿಫಲಾಪೇಕ್ಷೆ ಬಯಸಿಲ್ಲ. ಈ ಹೋರಾಟ ಹತ್ತಿಕ್ಕಲು ಖೇಣಿ ನನ್ನ ವಿರುದ್ಧ ಕೋರ್ಟ್‍ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದರೂ ಅಂಜದೆ ಖೇಣಿ ರಾಜ್ಯದ ರೈತರಿಗೆ ಮಾಡಿರುವ ಅನ್ಯಾಯಗಳ ವಿರುದ್ಧ ಹೋರಾಟ ಖಚಿತ ಎಂದರು. ಸುದ್ದಿಗೋಷ್ಠಿಯಲ್ಲಿ ಬಿಎಂಐಸಿ ವಿರೋಧಿ ಒಕ್ಕೂಟದ ಕಾರ್ಯದರ್ಶಿ ಬೊಮ್ಮೇಗೌಡ, ರಾಮಣ್ಣ, ರಾಕೇಶ್, ನಾರಾಯಣ ಸೇರಿದಂತೆ ಮತ್ತಿತರರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ