ಬೆಂಗಳೂರು, ಏ.12- ಟಿ.ನರಸೀಪುರ ಕ್ಷೇತ್ರದ ಟಿಕೆಟ್ ಸಂಬಂಧವಾಗಿ ಸಚಿವ ಮಹದೇವಪ್ಪ ಅವರ ವಿರುದ್ಧ ಪುತ್ರ ಸುನೀಲ್ಬೋಸ್ ತಿರುಗಿ ಬಿದ್ದಿದ್ದಾರೆ ಎಂದು ಹೇಳಲಾಗಿದೆ.
ಈಗಾಗಲೇ ಕ್ಷೇತ್ರದ ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಸುನೀಲ್ಬೋಸ್ ಶತಾಯಗತಾಯ ಚುನಾವಣೆಯಲ್ಲಿ ಸ್ಪರ್ಧಿಸಲೇಬೇಕೆಂದು ಹಠಕ್ಕೆ ಬಿದ್ದಿದ್ದಾರೆ.
ಲೋಕೋಪಯೋಗಿ ಸಚಿವ ಮಹದೇವಪ್ಪ ಅವರು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದಲಿತ ಕೋಟಾದಡಿ ಮುಖ್ಯಮಂತ್ರಿ ಹುದ್ದೆಯನ್ನು ಕೇಳುವ ತಯಾರಿಯಲ್ಲಿದ್ದು, ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ರಾಜಕೀಯವಾಗಿ ಉನ್ನತ ಸ್ಥಾನಕ್ಕೇರುವ ಕನಸು ಕಾಣುತ್ತಿದ್ದಾರೆ. ಆದರೆ, ಅದಕ್ಕೆ ಅವರ ಪುತ್ರನಿಂದಲೇ ಅಡ್ಡಿ ಎದುರಾಗಿದೆ.
ನನಗೆ ಟಿ.ನರಸೀಪುರ ಕ್ಷೇತ್ರದಿಂದೇ ಸ್ಪರ್ಧಿಸಲು ಟಿಕೆಟ್ ಬೇಕು. ಇಲ್ಲವಾದರೆ ಬಂಡಾಯವಾಗಿಯಾದರೂ ಸ್ಪರ್ಧಿಸುತ್ತೇನೆ ಎಂದು ಸುನೀಲ್ಬೋಸ್ ದಮ್ಕಿ ಹಾಕಿದ್ದಾರೆ ಎನ್ನಲಾಗಿದೆ. ಅಂತಿಮವಾಗಿ ದಾರಿ ಕಾಣದೆ ಮಹದೇವಪ್ಪ ಅವರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ತಮ್ಮ ಮಗ ಹಠಕ್ಕೆ ಬಿದ್ದಿದ್ದು, ನನ್ನ ಮಾತು ಕೇಳುವ ಹಂತವನ್ನು ಮೀರಿದ್ದಾನೆ.
ಅವನ ಮನವೊಲಿಸುವ ಎಲ್ಲಾ ಪ್ರಯತ್ನಗಳು ವಿಫಲವಾಗಿದೆ. ನೀವು ಈ ಮೊದಲು ನೀಡಿದ್ದ ಭರವಸೆಯನ್ನ ಆತ ಗಂಭೀರವಾಗಿ ತೆಗೆದುಕೊಂಡಿದ್ದು, ಚುನಾವಣೆಯಲ್ಲಿ ಸ್ಪರ್ಧಿಸಿಯೇ ತೀರುವುದಾಗಿ ಹಠ ಮಾಡುತ್ತಿದ್ದಾನೆ. ಅವನಿಗೆ ಟಿಕೆಟ್ ಕೊಡಿಸಿ ಇಲ್ಲವಾದರೆ ಅವನ ಮನವೊಲಿಸಿ ಎಂದು ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ ಎಂದು ಹೇಳಲಾಗಿದೆ.