ಬಳ್ಳಾರಿ, ಏ.12- ರಾಜ್ಯ ಸರ್ಕಾರ ಆಡಳಿತ ಯಂತ್ರದ ಜತೆಗೆ ಚುನಾವಣಾ ಆಯೋಗವನ್ನೇ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸರ್ಕಾರಿ ಹಾಗೂ ಪೆÇಲೀಸ್ ವಾಹನಗಳಲ್ಲಿ ಕಾಂಗ್ರೆಸ್ ಪಕ್ಷದ ಹಣ ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ. ಆದರೂ ಆಯೋಗದ ಅಧಿಕಾರಿಗಳಿಗೆ ಸರಿಯಾದ ಮಾಹಿತಿಯೇ ಸಿಗುತ್ತಿಲ್ಲ. ಅದನ್ನು ತಡೆಯುವ ಪ್ರಯತ್ನವೂ ಆಗುತ್ತಿಲ್ಲ. ಹೀಗಾಗಿ ರಾಜ್ಯ ವಿಧಾನಸಭೆ ಚುನಾವಣೆ ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಯುವ ಬಗ್ಗೆ ಸಂದೇಹವಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಚುನಾವಣಾ ಆಯೋಗ ವಿನಾ ಕಾರಣ ಕಿರಿಕಿರಿ ನೀಡುತ್ತಿದೆ. ಪ್ರವಾಸದ ಬಸ್ಗಳನ್ನು ಕೂಡ ಸೀಸ್ ಮಾಡಲಾಗುತ್ತಿದೆ. ನೀತಿ ಸಂಹಿತೆ ಹೆಸರಿನಲ್ಲಿ ಜನರಿಗೆ ತೊಂದರೆ ಕೊಡಲಾಗುತ್ತಿದೆ ಎಂದು ಆಕ್ಷೇಪಿಸಿದರು.
ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ಗೆ ಅಭ್ಯರ್ಥಿಗಳ ಕೊರತೆ ಎದುರಾಗಿದೆ. ರಾಜ್ಯದೆಲ್ಲೆಡೆ ನಾನು ಪ್ರವಾಸ ಕೈಗೊಂಡಿದ್ದು ಉತ್ತರ ಕರ್ನಾಟಕ ಭಾಗದಲ್ಲೇ 40ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕೆಂಬ ಉದ್ದೇಶವಿದೆ. ಬೇರೆ ಪಕ್ಷದ ರಾಜಕೀಯ ಮುಖಂಡರು ನಮ್ಮ ಜತೆ ಸಂಪರ್ಕದಲ್ಲಿದ್ದಾರೆ. ಆದರೆ ಬಳ್ಳಾರಿ ಜಿಲ್ಲೆಯಲ್ಲಿ ನನ್ನ ವಿರುದ್ಧ ಹೋರಾಟ ಮಾಡಿದವರು ನನ್ನ ಜತೆ ಸಂಪರ್ಕದಲ್ಲಿಲ್ಲ ಎಂದು ಸ್ಪಷ್ಟಪಡಿಸಿದರು.
ಜನರ ನಡುವೆ ಇರುವಂತಹ ದುಡಿಯುವ ಕಾರ್ಯಕರ್ತರು ನನ್ನ ಸಂಪರ್ಕದಲ್ಲಿದ್ದಾರೆ ಎಂದ ಕುಮಾರಸ್ವಾಮಿ ನಾಡಿನ ಸಂಪತ್ತು ಹಾಗೂ ಜನರ ತೆರಿಗೆಯ ಹಣ ಲೂಟಿಯಾಗುತ್ತಿದೆ ಎಂದು ಆರೋಪಿಸಿದರು.
ಸಂಸದೀಯ ವ್ಯವಸ್ಥೆ ವಿಫಲವಾಗಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ವಿಫಲರಾಗಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಪ್ರಚಾರಕ್ಕಾಗಿ ಉಪವಾಸದ ಯೋಜನೆಯನ್ನು ಬಿಜೆಪಿಯವರು ರೂಪಿಸಿದ್ದಾರೆ ಎಂದು ಟೀಕಿಸಿದರು.