
ಚೆನ್ನೈ: ಏ-12:ತಮಿಳುನಾಡಿನಲ್ಲಿ ಕಾವೇರಿ ವಿವಾದ ಸಂಬಂಧ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಚೆನ್ನೈನಲ್ಲಿ ನಿಗದಿಯಾಗಿದ್ದ ಐಪಿಎಲ್ ಪಂದ್ಯಗಳನ್ನು ಸ್ಥಳಾಂತರ ಮಾಡಲಾಗಿದೆ.
ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ರಚನೆಗೆ ಒತ್ತಾಯಿಸಿ ತಮಿಳುನಾಡಿನಲ್ಲಿ ತೀವ್ರ ಪ್ರತಿಭಟನೆ ಮಾಡಲಾಗುತ್ತಿದೆ. ಹೀಗಾಗಿ ಭದ್ರತೆ ದೃಷ್ಟಿಯಿಂದ ಐಪಿಎಲ್ ಪಂದ್ಯಗಳನ್ನು ಚೆನ್ನೈನಿಂದ ಸ್ಥಳಾಂತರಗೊಳಿಸಲಾಗಿದೆ.
ಏ. 20ರಂದು ನಿಗದಿಯಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ಪಂದ್ಯದ ಟಿಕೆಟ್ ವಿತರಣೆಯನ್ನೂ ಈಗಾಗಲೇ ಸ್ಥಗಿತಗೊಳಿಸಲಾಗಿದೆ. ಚೆನ್ನೈನಲ್ಲಿ ನಡೆಬೇಕಿದ್ದ ಪಂದ್ಯಗಳನ್ನು ಬೇರೆ-ಬೇರೆ ನಾಲ್ಕು ನಗರಗಳಲ್ಲಿ ಶಿಫ್ಟ್ ಮಾಡಲು ತೀರ್ಮಾನಿಸಲಾಗಿದೆ. ಆದರೆ, ಯಾವ ನಗರಗಳಿಗೆ ಚೆನ್ನೈನ ಪಂದ್ಯಗಳನ್ನು ಸ್ಥಳಾಂತರ ಮಾಡಲಾಗುತ್ತಿದೆ ಎಂಬುದು ಖಚಿತವಾಗಿಲ್ಲ.
ಕಾವೇರಿ ವಿವಾದ ಸಂಬಂಧ ಚೆನ್ನೈನಲ್ಲಿ ಐಪಿಎಲ್ ಪಂದ್ಯಗಳ ಆಯೋಜನೆಗೆ ಹಲವು ರಾಜಕೀಯ ಪಕ್ಷಗಳು, ರಜನಿಕಾಂತ್ರಂತಹ ಸಿನಿಮಾ ನಟರೂ ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆಯೇ ಮಂಗಳವಾರ ಚೆನ್ನೈ ಮತ್ತು ಕೋಲ್ಕತ್ತಾ ನಡುವಿನ ಪಂದ್ಯವನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ನಡೆಸಲಾಗಿತ್ತು.
ಆದರೂ, ಪಂದ್ಯದ ವೇಳೆ ಸ್ಟೇಡಿಯಂನಲ್ಲಿ ಕೆಲ ಕಿಡಿಗೇಡಿಗಳು ಚಪ್ಪಲಿ ತೂರಾಟ ಮಾಡಿ ದುಷ್ಕೃತ್ಯ ಮೆರೆದಿದ್ದರು. ಇದರ ಬೆನ್ನಲ್ಲೇ ಚೆನ್ನೈನ ಐಪಿಎಲ್ ಪಂದ್ಯಗಳನ್ನು ಸ್ಥಳಾಂತರಗೊಳಿಸುವ ತೀರ್ಮಾನಕ್ಕೆ ಬರಲಾಗಿದೆ ಎಂದು ತಿಳಿದು ಬಂದಿದೆ.