ಚುನಾವಣೆ ಅಧಿಸೂಚನೆಗೆ 5 ದಿನ ಮಾತ್ರ ಬಾಕಿ: ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಪಟ್ಟಿ ಇನ್ನೂ ಅಪೂರ್ಣ; ಟಿಕೆಟ್ ಆಕಾಂಕ್ಷಿಗಳಲ್ಲಿ ಹೆಚ್ಚಿದ ದುಗುಡ

ಬೆಂಗಳೂರು, ಏ.12- ಚುನಾವಣೆ ಅಧಿಸೂಚನೆ ಹೊರಡಿಸಲು ಇನ್ನೈದು ದಿನ ಮಾತ್ರ ಬಾಕಿ ಇದ್ದರೂ ಕಾಂಗ್ರೆಸ್ ಸೇರಿದಂತೆ ಯಾವುದೇ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಪೂರ್ಣ ಪ್ರಮಾಣದ ಪಟ್ಟಿ ಪ್ರಕಟಿಸಿಲ್ಲ. ಹಾಗಾಗಿ ಟಿಕೆಟ್ ಆಕಾಂಕ್ಷಿಗಳಲ್ಲಿ ದುಗುಡ ಹೆಚ್ಚಾಗಿದೆ.
ಟಿಕೆಟ್ ಕೈ ತಪ್ಪಿದರೆ ಪರ್ಯಾಯ ರಾಜಕೀಯ ನೆಲೆ ಕಂಡುಕೊಳ್ಳಲು ಆಗದೆ ಏನು ಮಾಡಬೇಕೆಂಬ ಆತಂಕದಲ್ಲಿ ಆಕಾಂಕ್ಷಿಗಳು ಚಡಪಡಿಸುತ್ತಿದ್ದಾರೆ.

ಇದೇ ಏ.17ಕ್ಕೆ ಚುನಾವಣಾ ಅಧಿಸೂಚನೆ ಹೊರಬೀಳಲಿದೆ. ನಾಮಪತ್ರ ಸಲ್ಲಿಕೆ ಪ್ರಾರಂಭವಾಗಲಿದೆ. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷಗಳು ಅಭ್ಯರ್ಥಿಗಳ ಪೂರ್ಣ ಪ್ರಮಾಣದ ಪಟ್ಟಿ ಪ್ರಕಟಿಸಿಲ್ಲ. ಆದರೆ, ಬಿಜೆಪಿ 72 ಕ್ಷೇತ್ರ, ಜೆಡಿಎಸ್ 126 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಮಾತ್ರ ಪ್ರಕಟಿಸಿದೆ.

ಕಾಂಗ್ರೆಸ್ ಇನ್ನೂ ಆಯ್ಕೆ ಕಸರತ್ತು ಮುಂದುವರಿಸಿದರೆ, ಇತ್ತ ಬಿಜೆಪಿಯಲ್ಲಿ ಅಭ್ಯರ್ಥಿಗಳ ಆಯ್ಕೆ ಪಟ್ಟಿ ಪ್ರಕಟವಾದ ಬೆನ್ನಲ್ಲೇ ಬಂಡಾಯದ ಬಿರುಗಾಳಿ ಕೂಡ ಎದ್ದಿದೆ. ಸುಮಾರು 10 ಕ್ಷೇತ್ರಗಳಲ್ಲಿ ಬಂಡಾಯದ ಭೀತಿ ಎದುರಾಗಿದೆ.

 

ಏ.15ರಂದು ಎರಡನೆ ಪಟ್ಟಿ ಬಿಡುಗಡೆ ಮಾಡುವುದಾಗಿ ಹೇಳಿದ್ದು, ಕಾಂಗ್ರೆಸ್ ಪಕ್ಷ ಪಟ್ಟಿ ಬಿಡುಗಡೆ ಮಾಡುವುದನ್ನು ಎದುರು ನೋಡುತ್ತಿದೆ. ಇನ್ನು ಕಾಂಗ್ರೆಸ್ ಪಕ್ಷದ ಮೊದಲ ಪಟ್ಟಿ ಬಿಡುಗಡೆಗೂ ಮುನ್ನವೇ ಆಂತರಿಕ ಭಿನ್ನಾಭಿಪ್ರಾಯ ತಲೆದೋರಿದೆ. ಹಾಲಿ ಶಾಸಕರಿಗೆ ಟಿಕೆಟ್ ನೀಡುವುದು ಖಚಿತವಾಗಿದ್ದು, ಬೇರೆ ಕ್ಷೇತ್ರಗಳಲ್ಲಿ ಆಕಾಂಕ್ಷಿಗಳು ಹೆಚ್ಚಾಗಿರುವುದರಿಂದ ಅಭ್ಯರ್ಥಿಗಳ ಆಯ್ಕೆ ತಲೆನೋವಾಗಿ ಪರಿಣಮಿಸಿದೆ.

ಅಲ್ಲದೆ, ಮೂಲ ಮತ್ತು ವಲಸಿಗ ಕಾಂಗ್ರೆಸಿಗರ ಫೈಟ್ ಬೀದಿಗೆ ಬಂದಿದೆ. ನಾಯಕರು ಎರಡೆರಡು ಕಡೆ ಸ್ಪರ್ಧೆಗೆ ಮುಂದಾಗಿರುವುದು ಕೂಡ ಹಲವರ ಅಸಮಾಧಾನಕ್ಕೆ ಕಾರಣವಾಗಿದೆ.

ಕಳೆದ ಬಾರಿ ಬಂಡಾಯಕ್ಕೆ ಕಾರಣವಾಗದಂತೆ ಟಿಕೆಟ್ ನೀಡಿದ್ದ ರೀತಿಯಲ್ಲಿಯೇ ಈ ಬಾರಿಯೂ ಟಿಕೆಟ್ ನೀಡುವ ಪ್ಲಾನ್ ಹಾಕಿಕೊಂಡಿರುವ ಕಾಂಗ್ರೆಸ್ ಎಚ್ಚರಿಕೆಯ ಹೆಜ್ಜೆ ಇಟ್ಟಿದೆ. ಜೆಡಿಎಸ್ ಕೂಡ ಅತೃಪ್ತರಿಗೆ ಗಾಳ ಹಾಕುತ್ತಿದೆ.

ಮೊದಲ ಪಟ್ಟಿ ಬಿಡುಗಡೆ ಮಾಡಿದ್ದ ಬಿಜೆಪಿ ಭಿನ್ನಮತ ಎದುರಾದ ಹಿನ್ನೆಲೆಯಲ್ಲಿ ಎರಡು ಮತ್ತು ಮೂರನೆ ಪಟ್ಟಿಯನ್ನು ಎಚ್ಚರಿಕೆಯಿಂದ ಬಿಡುಗಡೆ ಮಾಡಲು ಮುಂದಾಗಿದೆ.
ಇತ್ತ ಕ್ಷೇತ್ರದ ಜನರಿಗೆ ಟಿಕೆಟ್ ಯಾರಿಗೆ ಸಿಗುತ್ತದೆ ಎಂಬ ಗೊಂದಲ ಉಂಟಾಗಿದೆ. ಕ್ಷೇತ್ರದಲ್ಲಿ ಮೂರ್ನಾಲ್ಕು ಮಂದಿ ಆಕಾಂಕ್ಷಿಗಳಿದ್ದು, ಯಾರಿಗೆ ಟಿಕೆಟ್ ಖಚಿತವಾಗುತ್ತದೆ, ಯಾರ ಪರವಾಗಿ ಕೆಲಸ ಮಾಡಬೇಕು ಎಂಬ ಗೊಂದಲದಲ್ಲಿ ಮತದಾರರಿದ್ದಾರೆ. ಟಿಕೆಟ್ ಸಿಕ್ಕ ಅಭ್ಯರ್ಥಿಗಳು ಪ್ರಚಾರ ಪ್ರಾರಂಭಿಸಿದ್ದಾರೆ. ಬಂಡಾಯ ಉಂಟಾದ ಕ್ಷೇತ್ರಗಳಲ್ಲಿ ಟಿಕೆಟ್ ಪಡೆದ ಅಭ್ಯರ್ಥಿಗಳಿಗೆ ಬಂಡಾಯ ಅಭ್ಯರ್ಥಿಗಳಿಂದ ಸೋಲಿನ ಭೀತಿ ಎದುರಾಗಿದೆ.

ಪಕ್ಷೇತರವಾಗಿ ಸ್ಪರ್ಧಿಸಲು ಹಲವು ಕ್ಷೇತ್ರಗಳಲ್ಲಿ ಬಂಡಾಯ ಅಭ್ಯರ್ಥಿಗಳು ಮುಂದಾಗಿದ್ದಾರೆ. ಮೂರ್ನಾಲ್ಕು ದಿನಗಳಲ್ಲಿ ಬಹುತೇಕ ಎಲ್ಲ ಪಕ್ಷಗಳವರೂ ಅಭ್ಯರ್ಥಿಗಳ ಆಯ್ಕೆಯನ್ನು ಆಖೈರುಗೊಳಿಸುವ ಸಾಧ್ಯತೆಯಿದೆ. ನಾಮಪತ್ರ ಸಲ್ಲಿಸುವ ಕೊನೆ ಕ್ಷಣದವರೆಗೂ ಟಿಕೆಟ್ ಆಯ್ಕೆ ಕಸರತ್ತು ಮುಂದುವರಿಯಲಿದೆ. ಆಕಾಂಕ್ಷಿಗಳು ಬೇರೆ ಪಕ್ಷಗಳತ್ತ ಹೋಗಬಾರದೆಂಬ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಸುವ ಕೊನೆ ಕ್ಷಣದಲ್ಲಿ ಕೆಲವೊಂದು ಕ್ಷೇತ್ರಕ್ಕೆ ಅಭ್ಯರ್ಥಿಗಳ ಆಯ್ಕೆಯನ್ನು ರಾಜಕೀಯ ಪಕ್ಷಗಳವರು ಪ್ರಕಟಿಸುತ್ತಾರೆ.

ಹಲವೆಡೆ ಅಭ್ಯರ್ಥಿಗಳು ಬಿ ಫಾರಂ ನಿರೀಕ್ಷೆಯಲ್ಲಿ ನಾಮಪತ್ರ ಸಲ್ಲಿಸಿರುತ್ತಾರೆ. ಬಿ ಫಾರಂ ಸಿಗದಿದ್ದರೆ ಸ್ವತಂತ್ರವಾಗಿ ಸ್ಪರ್ಧಿಸುವ ಸಾಧ್ಯತೆಯೂ ಇರುತ್ತದೆ. ಒಟ್ಟಾರೆ ನಾಲ್ಕು ದಿನಗಳ ನಂತರ ಚುನಾವಣಾ ಕಣ ಮತ್ತಷ್ಟು ರಂಗೇರಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ