ಬೆಂಗಳೂರು, ಏ.12- ಜೆಡಿಎಸ್ನಿಂದ ಬಂದ ಏಳು ಜನರ ಪೈಕಿ ಆರು ಮಂದಿಗೆ, ಕಾಂಗ್ರೆಸ್ನ ನಾಲ್ವರು ಪ್ರಮುಖರ ಮಕ್ಕಳೂ ಸೇರಿದಂತೆ 150 ಅಭ್ಯರ್ಥಿಗಳ ಆಯ್ಕೆಗೆ ಹೈಕಮಾಂಡ್ ಹಸಿರು ನಿಶಾನೆ ತೋರಿಸಿದ್ದು, ನಾಳೆ ಅಂಕಿತ ಬೀಳುವ ಸಾಧ್ಯತೆ ಇದೆ.
ಟಿಕೆಟ್ ಹಂಚಿಕೆಯ ಸಂಬಂಧ ರಾಜ್ಯ ಚುನಾವಣಾ ಸಮಿತಿ ಎರಡು ಬಾರಿ ಹಾಗೂ ಎಐಸಿಸಿ ಪ್ರಧಾನಕಾರ್ಯದರ್ಶಿ ಮಧುಸೂದನ್ ಮಿಸ್ತ್ರಿ ನೇತೃತ್ವದ ಸ್ಕೀನಿಂಗ್ ಕಮಿಟಿ ಎರಡು ದಿನಗಳ ಸಭೆ ನಡೆಸಿ ಬಹುತೇಕ ಅಭ್ಯರ್ಥಿಗಳನ್ನು ಅಖೈರುಗೊಳಿಸಿದೆ.
ನಾಳೆ ಪಕ್ಷದ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯಲಿದ್ದು, 224 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಕುರಿತು ಅಂತಿಮ ಸುತ್ತಿನ ಚರ್ಚೆ ನಡೆಯಲಿದೆ. ಅದಕ್ಕೆ ಪೂರ್ವಭಾವಿಯಾಗಿ ಇಂದು ಮಧ್ಯಾಹ್ನ ರಾಜ್ಯ ಮುಖಂಡರು ದೆಹಲಿಗೆ ತೆರಳುತ್ತಿದ್ದು, ಸಂಜೆ ಸ್ಕ್ರೀನಿಂಗ್ ಕಮಿಟಿ ಅಧ್ಯಕ್ಷ ಮಧುಸೂದನ್ ಮಿಸ್ತ್ರಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ದಿನೇಶ್ಗುಂಡೂರಾವ್, ಎಸ್.ಆರ್.ಪಾಟೀಲ್, ಸಂಸದರಾದ ಎಂ.ವೀರಪ್ಪಮೊಯ್ಲಿ, ಕೆ.ಎಚ್.ಮುನಿಯಪ್ಪ, ಬಿ.ಕೆ.ಹರಿಪ್ರಸಾದ್ ಮತ್ತಿತರರ ಜತೆ ಎಐಸಿಸಿ ಉಸ್ತುವಾರಿ ನಾಯಕ ಕೆ.ಸಿ.ವೇಣುಗೋಪಾಲ್ ಚರ್ಚೆ ನಡೆಸಲಿದ್ದಾರೆ.
ನಾಳೆ ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ ನೇತೃತ್ವದಲ್ಲಿ ಮಹತ್ವದ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯಲಿದ್ದು, ಅಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಗೆ ಅಧಿಕೃತ ಮುದ್ರೆ ಬೀಳಲಿದೆ.
ಈಗಾಗಲೇ ಸ್ಕ್ರೀನಿಂಗ್ ಕಮಿಟಿ ಅಭ್ಯರ್ಥಿಗಳ ಆಯ್ಕೆಯನ್ನು ಬಹುತೇಕ ಪೂರ್ಣಗೊಳಿಸಿದ್ದು, ಗೊಂದಲ ಇರುವ ಕ್ಷೇತ್ರಗಳಿಗೆ ಎರಡು ಹೆಸರುಗಳನ್ನು ಶಿಫಾರಸು ಮಾಡಲಾಗಿದೆ. ಉಳಿದಂತೆ ಬಹುತೇಕ ಕ್ಷೇತ್ರಗಳಿಗೆ ಒಬ್ಬ ಅಭ್ಯರ್ಥಿಯ ಹೆಸರನ್ನು ಕೇಂದ್ರ ಸಮಿತಿಗೆ ರವಾನಿಸಲಾಗುತ್ತಿದೆ.
ಪ್ರತಿ ಕ್ಷೇತ್ರದ ಮಾಹಿತಿ ಪಡೆದು ಕೇಂದ್ರ ಸಮಿತಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದೆ. ಜೆಡಿಎಸ್ನಿಂದ ಬಂದಿದ್ದ ಚೆಲುವರಾಯಸ್ವಾಮಿ, ಬಾಲಕೃಷ್ಣ, ಬಂಡಿಸಿದ್ದೆಗೌಡ ಜಮೀರ್ ಅಹಮ್ಮದ್ಖಾನ್, ಇಕ್ಬಾಲ್ ಅನ್ಸಾರಿ, ಭೀಮಾನಾಯಕ್ ಅವರಿಗೆ ಸ್ಕ್ರೀನಿಂಗ್ ಕಮಿಟಿ ಟಿಕೆಟ್ ಖಚಿತಪಡಿಸಿದೆ.
ಪುಲಕೇಶಿನಗರ ಕ್ಷೇತ್ರದಲ್ಲಿ ಮಾಜಿ ಸಚಿವ ಬಸವಲಿಂಗಪ್ಪ ಅವರ ಪುತ್ರ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ಆಪ್ತ ಪ್ರಸನ್ನಕುಮಾರ್ ಆಕಾಂಕ್ಷಿಯಾಗಿರುವುದರಿಂದ ಟಿಕೇಟ್ ಹಂಚಿಕೆ ಕಗ್ಗಂಟ್ಟಾಗಿದೆ.
ಪ್ರಸನ್ನಕುಮಾರ್ ಅವರಿಗೆ ಸರ್ ಸಿ.ವಿ.ರಾಮನ್ನಗರ ಕ್ಷೇತ್ರದಲ್ಲಿ ಅವಕಾಶ ನೀಡುವ ಭರವಸೆಯೊಂದಿಗೆ ನಡೆದ ಮನವೊಲಿಸುವ ಪ್ರಯತ್ನ ಫಲ ನೀಡಿಲ್ಲ. ಇದೊಂದು ಕ್ಷೇತ್ರ ಹೊರತುಪಡಿಸಿ ಉಳಿದ ಜೆಡಿಎಸ್ ಬಂಡಾಯ ಶಾಸಕರಿಗೆ ಆರು ಕ್ಷೇತ್ರಗಳ ಟಿಕೆಟನ್ನು ಹೈಕಮಾಂಡ್ ಖಚಿತಪಡಿಸಿದೆ.
ನಾಲ್ವರು ಪ್ರಮುಖರ ಮಕ್ಕಳಿಗೆ ಟಿಕೆಟ್ ಖಚಿತ:
ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ, ಎಚ್.ಸಿ.ಮಹದೇವಪ್ಪ ಪುತ್ರ ಸುನೀಲ್ಬೋಸ್, ಟಿ.ಬಿ.ಜಯಚಂದ್ರ ಪುತ್ರ ಸಂತೋಷ್, ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯಾರೆಡ್ಡಿ, ಮಾಜಿ ಸಂಸದೆ ಮಾರ್ಗರೇಟ್ ಆಳ್ವಾ ಅವರ ಪುತ್ರ ನಿವೇದಿತ್ ಆಳ್ವಾ, ಮಾಜಿ ಸಚಿವ ಮನೋಹರ್ ತಹಸೀಲ್ದಾರ್ ಅವರ ಪುತ್ರ ರಾಘವೇಂದ್ರ, ಕೆ.ಎಚ್.ಮುನಿಯಪ್ಪ ಅವರ ಪುತ್ರಿ ರೂಪಾ, ಮಾಜಿ ಸಂಸದ ಜಾಫರ್ ಶರೀಫ್ ಅವರ ಮೊಮ್ಮಗ ರೆಹಮಾನ್ ಶರೀಫ್, ಶಾಸಕ ಕೆ.ಎನ್.ರಾಜಣ್ಣ ಪುತ್ರ ರಾಜೇಂದ್ರ ಸೇರಿದಂತೆ ಸುಮಾರು 30ಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದಾರೆ.
ಅದರಲ್ಲಿ ಕೆಜಿಎಫ್ನಿಂದ ರೂಪಾ ಅವರಿಗೆ, ಜಯನಗರದಿಂದ ಸೌಮ್ಯಾರೆಡ್ಡಿ, ವರುಣಾ ಕ್ಷೇತ್ರದಿಂದ ಯತೀಂದ್ರ, ಶಿರಸಿ ಕ್ಷೇತ್ರದಿಂದ ನಿವೇದಿತಾ ಆಳ್ವಾ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆ ಇದೆ. ಉಳಿದಂತೆ ಮಹದೇವಪ್ಪ, ಜಯಚಂದ್ರ, ರಾಜಣ್ಣ ಅವರ ಪುತ್ರರಿಗೆ ಟಿಕೆಟ್ ನೀಡಲು ಸ್ಕ್ರೀನಿಂಗ್ ಕಮಿಟಿ ನಿರಾಕರಿಸಿದೆ ಎಂದು ಹೇಳಲಾಗಿದೆ.
ಅಳೆದೂ ತೂಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಿದ್ದು, ಗೆಲುವನ್ನೇ ಮಾನದಂಡವನ್ನಾಗಿ ಇಟ್ಟುಕೊಳ್ಳಲಾಗುತ್ತಿದೆ. ಈ ಮೊದಲು ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಆಧರಿಸಿ ಸುಮಾರು 70 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಅವಕಾಶ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದರು. ಆದರೆ, ರಾಜಕೀಯ ಒತ್ತಡದ ಸನ್ನಿವೇಶದಲ್ಲಿ 20 ಕ್ಷೇತ್ರಗಳಲ್ಲೂ ಟಿಕೆಟ್ ನೀಡಲಾಗದೆ ಕಾಂಗ್ರೆಸ್ ತಿಣುಕಾಡುತ್ತಿದೆ.
ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡುವುದಾಗಿ ಈವರೆಗೂ ಹೇಳುತ್ತಿದ್ದ ಕಾಂಗ್ರೆಸ್ ಈ ಬಾರಿ ಗೆಲ್ಲುವ ಅಭ್ಯರ್ಥಿಗಳಿಗೆ ಮಣೆ ಹಾಕುವ ನಿರ್ಧಾರ ಮಾಡಿದೆ. ಅದರಲ್ಲೂ ಅಲ್ಪಸ್ವಲ್ಪ ಸಾಮಾಜಿಕ ನ್ಯಾಯ ಪಾಲಿಸುವ ಪ್ರಯತ್ನ ನಡೆಯುತ್ತಿದೆ.