ನಂಜನಗೂಡು, ಏ.12- ವರುಣಾ ಕ್ಷೇತ್ರದ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಮತ್ತು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ನಡುವೆ ನೇರ ಹಣಾಹಣಿ ಇದೆ ಎಂದು ಬಿ.ವೈ.ವಿಜಯೇಂದ್ರ ತಿಳಿಸಿದರು.
ತಾಲ್ಲೂಕಿನ ತಾಂಡವಪುರ ಜಿಪಂ ವ್ಯಾಪ್ತಿಗೆ ಸೇರುವ ವರುಣಾ ವಿಧಾನಸಭಾ ಕ್ಷೇತ್ರದ ಹೆಬ್ಯ, ಅಡಕನಹುಂಡಿ, ಚಿಕ್ಕಯ್ಯನ ಛತ್ರ, ಬಂಚಳ್ಳಿಹುಂಡಿ, ಬಸವನಪುರ, ಕೆಂಪಿಸಿದ್ದನ ಹುಂಡಿ ಹಿಮ್ಮಾವು, ಹಿಮ್ಮಾವು ಹುಂಡಿ, ಹುಳಿಮಾವು, ಬೊಕ್ಕಳ್ಳಿ, ಹಂದಿನಾರು, ಹದಿನಾರು ಮೊಳೆ ಸೇರಿದಂತೆ ಹಲವು ಗ್ರಾಮದ ಮುಖಂಡರು, ಯುವಕರನ್ನು ಭೇಟಿ ಮಾಡಿ ನಂತರ ಮಾತನಾಡಿದರು.
ಕಳೆದ ಮೂರು ದಿನಗಳಿಂದ ಈ ಭಾಗದಲ್ಲಿ ಪ್ರಚಾರ ಕಾರ್ಯ ಕೈಗೊಂಡಿದ್ದು, ನಿರೀಕ್ಷೆಗೂ ಮೀರಿ ಜನ ಬೆಂಬಲ, ಯುವಕರು, ಬೇರೆ ಬೇರೆ ಸಮಾಜದವರು ಭಾರತೀಯ ಜನತಾ ಪಕ್ಷಕ್ಕೆ ಸ್ವಯಂ ಪ್ರೇರಿತರಾಗಿ ಅದ್ಧೂರಿ ಸ್ವಾಗತ, ಅಭೂತ ಪೂರ್ವ ಬೆಂಬಲ ದೊರೆಯುತ್ತಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರತಿನಿಧಿಸುವ ಈ ಕ್ಷೇತ್ರ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿಯಾಗಿಲ್ಲ. ರಾಜ್ಯದಲ್ಲೇ ಮಾದರಿ ಕ್ಷೇತ್ರ ಮಾಡಬಹುದಿತ್ತು ಎಂದ ಅವರು, ಹೊಸ ಹೊಸ ಕಾರ್ಖಾನೆಗಳು ಬರುತ್ತಿದ್ದರೂ ರೈತರು ಜಮೀನು ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಅವರ ಕುಟುಂಬಗಳಿಗೆ ಉದ್ಯೋಗ ಸಿಗುತ್ತಿಲ್ಲ ಎಂದು ಟೀಕಿಸಿದರು.
ಪ್ರಚಾರದಲ್ಲಿ ಹಿಂದುಳಿದ ವರ್ಗ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕೌಟಿಲ್ಯ ರಘು, ಬಿಜೆಪಿ ಮುಖಂಡರಾದ ಕಾಪು.ಸಿದ್ದಲಿಂಗಸ್ವಾಮಿ, ಅಪ್ಪಣ್ಣ, ಜಿಪಂ ಸದಸ್ಯರಾದ ಹದಿನಾರು ಗುರುಸ್ವಾಮಿ, ತಗಡೂರು ಸದಾನಂದ, ಶಕ್ತಿ ಕೇಂದ್ರ ಅಧ್ಯಕ್ಷ ಸಂದೀಪ್, ಹಿಮ್ಮಾವು ಶಿವಣ್ಣ, ಎಸ್ಟಿ ಮೋರ್ಚಾ ಅಧ್ಯಕ್ಷ ವರುಣಾ ಕಾರ್ಯದರ್ಶಿ ಗುರುಮಲ್ಲಮ್ಮ, ಶಿವನಾಗಪ್ಪ, ವಕೀಲ ಹಾಗೂ ರಾಜ್ಯ ಕಾರ್ಯಕಾರಿಣಿ ಸದಸ್ಯ ಹೆಜ್ಜಿಗೆ ಪಿ.ನಾಗೇಂದ್ರಪ್ಪ, ತಾಪಂ ಸದಸ್ಯ ರೇವಣ್ಣ ಸೇರಿದಂತೆ ಹಲವಾರು ಪ್ರಮುಖರು ಭಾಗವಹಿಸಿದ್ದರು.