ಸಂಸತ್ತಿನ ಕಲಾಪಗಳಿಗೆವಿಪಕ್ಶಗಳ ಅಡ್ಡಿ: ಬಿಜೆಪಿ ಸಂಸದರ ಉಪವಾಸ ಸತ್ಯಾಗ್ರಹ

 

ಬೆಂಗಳೂರು, ಏ.12- ಸಂಸತ್ತಿನ ಕಲಾಪಗಳಿಗೆ ಅಡ್ಡಿಪಡಿಸುತ್ತಿರುವ ಕಾಂಗ್ರೆಸ್ ಧೋರಣೆಯನ್ನು ಖಂಡಿಸಿ ಬಿಜೆಪಿ ಸಂಸದರು ಇಂದು ಉಪವಾಸ ಸತ್ಯಾಗ್ರಹ ನಡೆಸಿದರು.
ನಗರದ ಮೌರ್ಯ ವೃತ್ತದಲ್ಲಿರುವ ಗಾಂಧಿ ಪ್ರತಿಮೆ ಬಳಿ ಕೇಂದ್ರ ಸಚಿವರಾದ ಪ್ರಕಾಶ್ ಜಾವ್ಡೇಕರ್, ಅನಂತ್‍ಕುಮಾರ್, ಡಿ.ವಿ.ಸದಾನಂದಗೌಡ, ಸಂಸದ ಪಿ.ಸಿ.ಮೋಹನ್, ಬಿಜೆಪಿ ಉಸ್ತುವಾರಿ ಮುರಳೀಧರರಾವ್, ಮುಖಂಡರಾದ ರಾಮಚಂದ್ರೇಗೌಡ, ತಾರಾ ಅನುರಾಧ ಸೇರಿದಂತೆ ಮತ್ತಿತರರು ಪಾಲ್ಗೊಂಡು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವ್ಡೇಕರ್ ಮಾತನಾಡಿ, ಕಾಂಗ್ರೆಸ್‍ನವರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಹಾಗೂ ಎನ್‍ಡಿಎ ಸರ್ಕಾರದ ಭ್ರಷ್ಟಾಚಾರ ರಹಿತ ಆಡಳಿತವನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಸಂಸತ್‍ನ ಉಭಯ ಸದನಗಳಲ್ಲಿ ಗದ್ದಲ, ಕೋಲಾಹಲ ಸೃಷ್ಟಿಸುತ್ತಿದೆ. ಕಾಂಗ್ರೆಸ್‍ನಲ್ಲಿ ಪ್ರಜಾಪ್ರಭುತ್ವ ವಿರೋಧಿ ನೀತಿಗೆ ದೇಶದ ಜನತೆ ತಕ್ಕ ಪಾಠ ಕಲಿಸಬೇಕೆಂದು ಮನವಿ ಮಾಡಿದರು.

ದೇಶದಲ್ಲಿ ಭ್ರಷ್ಟಾಚಾರವನ್ನು ಪೆÇೀಷಣೆ ಮಾಡಿಕೊಂಡು ಬರುತ್ತಿರುವ ಪಕ್ಷವೇ ಅದರ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಹೇಳುವುದು ನಾಚಿಕೆಗೇಡಿನ ಸಂಗತಿ. ಹಿಂದಿನ ಯುಪಿಎ ಅವಧಿಯಲ್ಲಿ ಆಕಾಶದಿಂದ ಪಾತಾಳದವರೆಗೂ ಭ್ರಷ್ಟಾಚಾರ ನಡೆಯಿತು. ಆಗ ಎಲ್ಲವನ್ನು ನೋಡಿಕೊಂಡು ಮೌನವಹಿಸಿದ್ದ ಮಹಾನ್ ನಾಯಕರೊಬ್ಬರು ಈಗ ನಮ್ಮ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಮಾತನಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪರೋಕ್ಷವಾಗಿ ರಾಹುಲ್‍ಗಾಂಧಿ ಅವರನ್ನು ಪ್ರಶ್ನಿಸಿದರು.

ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಸಾಧ್ಯವಿಲ್ಲದ ಪಕ್ಷ ಲೋಕಪಾಲ್ ಮಸೂದೆಗೂ ಸಂಸತ್‍ನಲ್ಲಿ ಬೆಂಬಲ ನೀಡುತ್ತಿಲ್ಲ. ಹಿಂದೆ 2ಜಿ ಸ್ಪೆಕ್ಟ್ರಮ್, ಕಲ್ಲಿದ್ದಲು ಹಗರಣ ಸೇರಿದಂತೆ ಅನೇಕ ಹಗರಣದಿಂದಲೇ ದೇಶದಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದೆ. ನಿಮ್ಮ ವರ್ತನೆಯನ್ನು ಈಗಲಾದರೂ ಸರಿಪಡಿಸಿಕೊಳ್ಳದಿದ್ದರೆ ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಅನಂತ್‍ಕುಮಾರ್ ಮಾತನಾಡಿ, ರಾಹುಲ್‍ಗಾಂಧಿ ಎಐಸಿಸಿ ಅಧ್ಯಕ್ಷರಾಗಿರುವುದೇ ಪ್ರಜಾತಂತ್ರವನ್ನು ಸರ್ವನಾಶ ಮಾಡಲು. ಏಕೆಂದರೆ ಗಾಂಧಿ ಕುಟುಂಬದ ಜೀನ್ಸ್‍ನಲ್ಲೇ ಈ ಗುಣ ಅಡಗಿದೆ ಎಂದು ವಾಗ್ದಾಳಿ ನಡೆಸಿದರು.
ಹಿಂದೂ ಧರ್ಮ, ಮಠಮಾನ್ಯಗಳು, ಧಾರ್ಮಿಕ ಕೇಂದ್ರಗಳ ಬಗ್ಗೆ ಲಘುವಾಗಿ ಮಾತನಾಡುತ್ತಿದ್ದ ರಾಹುಲ್ ಈಗ ದೇವಸ್ಥಾನ, ಮಠಮಾನ್ಯಗಳಿಗೆ ಭೇಟಿ ನೀಡುತ್ತಿದ್ದಾರೆ. ಇದು ಚುನಾವಣೆ ಗಿಮಿಕ್ ಹೊರತು ಬೇರೇನೂ ಅಲ್ಲ. ಕರ್ನಾಟಕದ ಜನತೆ ಇಂತಹ ನಾಟಕವನ್ನು ನಂಬಲು ಮೂರ್ಖರಲ್ಲ ಎಂದು ಹರಿಹಾಯ್ದರು.
ಚುನಾವಣೆ ಬಂದ ಸಂದರ್ಭದಲ್ಲಿ ಮಠ ಮಂದಿರಗಳಿಗೆ ಭೇಟಿ ಕೊಟ್ಟರೆ ಜನತೆ ಮರುಳಾಗುವುದಿಲ್ಲ. ನಿಮ್ಮ ಕಪಟ ನಾಟಕ ಏನೆಂಬುದು ಜನತೆಗೆ ಗೊತ್ತಿದೆ. ಕರ್ನಾಟಕದ ಜನತೆ ಇಂತಹ ನಾಟಕ ನಂಬುವುದಿಲ್ಲ ಎಂದು ಹೇಳಿದರು.
ಇಪ್ಪತ್ಮೂರು ದಿನ ಸಂಸತ್ ಅಧಿವೇಶನ ನಡೆದರೂ ಒಂದೇ ಒಂದು ದಿನ ಸುಗಮ ಕಲಾಪ ನಡೆಯಲಿಲ್ಲ. ಕೆಲಸ ಮಾಡದ ನಮಗೆ ವೇತನ ಬೇಡ ಎಂದು ಎನ್‍ಡಿಎದ ಎಲ್ಲಾ ಸಂಸದರು ಭತ್ಯೆಯನ್ನು ನಿರಾಕರಿಸಿದ್ದಾರೆ. ಆದರೆ, ಅದೇ ವೇಳೆ ಕಲಾಪ ನಡೆಯಲು ಬಿಡದ ಕಾಂಗ್ರೆಸಿಗರು ತಮ್ಮ ವೇತನವನ್ನು ಬಿಡಲು ಸಿದ್ದರಿದ್ದಾರೆಯೇ ಎಂದು ಅನಂತ್‍ಕುಮಾರ್ ಪ್ರಶ್ನಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರದ್ದು ನೈತಿಕ ನಾಯಕತ್ವ. ರಾಹುಲ್‍ಗಾಂಧಿ, ಸೋನಿಯಗಾಂಧಿ ಹಾಗೂ ಸಿದ್ದರಾಮಯ್ಯ ಅವರದ್ದು ಅನೈತಿಕ ನಾಯಕತ್ವ. ಇತ್ತೀಚೆಗೆ ದೆಹಲಿಯಲ್ಲಿ ಕಾಂಗ್ರೆಸ್ ನಾಯಕರು ಹೊಟ್ಟೆ ತುಂಬ ತಿಂದು ಉಪವಾಸ ಸತ್ಯಾಗ್ರಹ ಕುಳಿತಿದ್ದರು. ಇದು ಇವರ ನಿಜವಾದ ಮುಖವಾಡ ಎಂದು ತರಾಟೆಗೆ ತೆಗೆದುಕೊಂಡರು.
ಪ್ರಧಾನಿ ಮೋದಿ ಅವರು ಇಂದು ಊಟ, ತಿಂಡಿ ತಿನ್ನದೆ ಉಪವಾಸ ಮಾಡುತ್ತಿದ್ದಾರೆ. ಅದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೀನು ತಿಂದು ಶ್ರೀ ಕ್ಷೇತ್ರಕ್ಕೆ ಹೋಗಿ ದೇವರ ದರ್ಶನ ಪಡೆದಿದ್ದಾರೆ. ಕಾಂಗ್ರೆಸಿಗರು ಚೋಲೆ ಭಟೂರ ತಿಂದು ಉಪವಾಸ ಮಾಡಿದರು. ಇದು ಕಾಂಗ್ರೆಸ್ ಶೈಲಿ. ನಮ್ಮದು ರಾಷ್ಟ್ರಪಿತ ಮಹಾತ್ಮಗಾಂಧಿ ಅವರ ಶೈಲಿ ಎಂದು ವ್ಯಂಗ್ಯವಾಡಿದರು.

ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರರಾವ್ ಮಾತನಾಡಿ, ಕರ್ನಾಟಕದಲ್ಲಿ ಕಾಂಗ್ರೆಸ್‍ಗೆ ಕೊನೆಯ ಮೊಳೆ ಹೊಡೆಯಲು ರಾಜ್ಯದ ಜನತೆ ತುದಿಗಾಲಲ್ಲಿ ನಿಂತಿದ್ದಾರೆ. ಮೇ 12 ಕಾಂಗ್ರೆಸ್ ಕೌಂಟ್‍ಡೌನ್ ಶುರುವಾಗಿ 15ರಂದು ಅದರ ಹಣೆಬರಹ ಗೊತ್ತಾಗಲಿದೆ. ನಿಮ್ಮನ್ನು ಕಳುಹಿಸಲು ಕರ್ನಾಟಕದ ಜನತೆ ತುದಿಗಾಲಲ್ಲಿ ನಿಂತಿದ್ದಾರೆ ಎಂದು ಹೇಳಿದರು.
ದಲಿತರು, ಬಡವರ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್ ಯಾವ ಸಮುದಾಯಕ್ಕೂ ಏನನ್ನೂ ಮಾಡಲಿಲ್ಲ. ಬಿಜೆಪಿ ಇಂದು ಎಲ್ಲ ವರ್ಗದ ಹಿತ ಕಾಪಾಡುವ ಕೆಲಸ ಮಾಡುತ್ತಿದೆ. ಸಮಾಜ ಹಾಗೂ ಧರ್ಮವನ್ನು ವಿಭಜಿಸುವರಿಗೆ ತಕ್ಕ ಪಾಠ ಕಲಿಸಿ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ