ಬಿಹಾರದಲ್ಲಿ ಕೇವಲ ಒಂದೇ ವಾರದೊಳಗೆ 8.5 ಲಕ್ಷ ಶೌಚಾಲಯ ನಿರ್ಮಾಣ: ಪ್ರಧಾನಿ ಮೋದಿ ಹೇಳಿಕೆಗೆ ವಿಪಕ್ಷಗಳ ವಾಗ್ದಾಳಿ

ಪಾಟ್ನಾ:ಏ-೧೧: ಬಿಹಾರದಲ್ಲಿ ಕೇವಲ ಒಂದೇ ವಾರದೊಳಗೆ 8.5 ಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ವಿಪಕ್ಷಗಳು ತಿರುಗಿಬಿದ್ದಿದ್ದು, ವಾಗ್ದಾಳಿ ನಡೆಸಿದ್ದಾರೆ.ಪ್ರಧಾನಿ ಮೋದಿ ಹೇಳಿಕೆಗೆ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಪ್ರಶ್ನಿಸಿದ್ದಾರೆ.

ಒಂದು ವಾರದೊಳಗೆ 8.5 ಲಕ್ಷ ಶೌಚಾಲಯವನ್ನು ನಿರ್ಮಿಸಿರುವುದು ನಿಜವೆಂದಾದರೆ ಪ್ರತಿ ತಾಸಿಗೆ 5,059 ಶೌಚಾಲಯಗಳನ್ನು ನಿರ್ಮಿಸಿದಂತಾಗುತ್ತದೆ. ಆದರೆ ಇದು ಸಾಧ್ಯವೇ ? ಎಂದು ತೇಜಸ್ವಿ   ಪ್ರಶ್ನಿಸಿದ್ದಾರೆ.

ಈ ಸಂಬಂಧ ತೇಜಸ್ವಿ ಟ್ವಿಟರ್‌ನಲ್ಲಿ ಕೊಟ್ಟಿರುವ ಲೆಕ್ಕ ಹೀಗಿದೆ :

1 ವಾರ = 7 ದಿನ

1 ದಿನ = 24 ಗಂಟೆ

7 ದಿನ = 168 ಗಂಟೆ

1  ಗಂಟೆ= 60 ನಿಮಿಷ.

ಹೀಗಿರುವಾಗ 8,50,000 ಭಾಗಿಸು 168 = 5,059 ಶೌಚಾಲಯಗಳು ಪ್ರತೀ ತಾಸಿಗೆ; 5,059 ಭಾಗಿಸು 60 = 84.31 ಶೌಚಾಲಯಗಳು ಪ್ರತೀ ನಿಮಿಷಕ್ಕೆ.

ಪ್ರಧಾನಿ ಸಾಹೇಬರೇ, ಇದೊಂದು ಮಹಾ ಸುಳ್ಳು. ಬಿಹಾರದ ಮುಖ್ಯಮಂತ್ರಿ ಇಂತಹ ಸುಳ್ಳನ್ನು ಒಪ್ಪುವುದಿಲ್ಲ ಎಂದು ನಾನು ತಿಳಿಯುತ್ತೇನೆ ಎಂದು ತೇಜಸ್ವಿ ಟ್ವೀಟ್‌ ಮಾಡಿದ್ದಾರೆ.

ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ನೇತೃತ್ವದಲ್ಲಿ ನಡೆದಿರುವ ಸ್ವಚ್ಚ ಭಾರತ ಅಭಿಯಾನದಲ್ಲಿ ಮಹತ್ತರ ಸಾಧನೆಯನ್ನು ಮಾಡಿರುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ನಿತೀಶ್‌ ಅವರನ್ನು ಅಭಿನಂದಿಸಿರುವುದಕ್ಕೆ ಪ್ರತಿಯಾಗಿ ತೇಜಸ್ವಿ ಯಾದವ್‌ ಟ್ವಿಟರ್‌ನಲ್ಲಿ “ಶೌಚಾಲಯ ಲೆಕ್ಕಾಚಾರ’ ವಿವರಿಸಿದ್ದಾರೆ.

ಇದೇ ವೇಳೆ ಮುಂಬೈ ಕಾಂಗ್ರೆಸ್ ಮುಖ್ಯಸ್ಥ ಸಂಜಯ್ ನಿರುಪಮ್ ಕೂಡ ಟೀಕಿಸಿದ್ದು ಇಷ್ಟೊಂದು ಸಂಖ್ಯೆಯ ಶೌಚಾಲಯಗಳನ್ನು ಇಷ್ಟೊಂದು ವೇಗದಲ್ಲಿ ನಿರ್ಮಿಸಲು ಸಾಧ್ಯವಿಲ್ಲ. ಇದರರ್ಥ ಪ್ರತಿ ಸೆಕೆಂಡಿಗೆ 1.4 ಶೌಚಾಲಯ. ಇದು ಸಾಧ್ಯ ಎಂದು ನನಗನಿಸುತ್ತಿಲ್ಲ ಎಂದು ಹೇಳಿದ್ದಾರೆ.

ಬಿಹಾರದ ಮೋತಿಹಾರಿಯಲ್ಲಿ ಚಂಪಾರಣ್ ಸತ್ಯಾಗ್ರಹದ ಶತಮಾನೋತ್ಸವದ ಸಮಾರೋಪ ಸಮಾರಂಭದಲ್ಲಿ ಸುಮಾರು 20,000 ಸ್ವಚ್ಛ ರಾಯಭಾರಿಗಳನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ಕೇವಲ ಒಂದೇ ವಾರದಲ್ಲಿ ನಿತೀಶ್‌ ಕುಮಾರ್‌‌‌ ನೇತೃತ್ವದ ಸರ್ಕಾರ 8.5 ಲಕ್ಷ ಶೌಚಾಲಯ ನಿರ್ಮಿಸಿದ್ದಕ್ಕಾಗಿ ಅಭಿನಂದನೆಗಳು ಎಂದಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ