ತುರುವೇಕೆರೆ, ಏ.11- ತಲಾಖ್ ನಿಷೇಧಕ್ಕೆ ನನ್ನ ವಿರೋಧವಿದೆ. ಮುಸ್ಲಿಮರ ಮೂಲಭೂತ ಹಕ್ಕುಗಳ ರಕ್ಷಣೆ ಜೆಡಿಎಸ್ನಿಂದ ಮಾತ್ರ ಸಾಧ್ಯ. ಹೀಗಾಗಿ ಈ ಬಾರಿ ನಮಗೇ ಮತ ನೀಡಬೇಕು ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಕರೆ ನೀಡಿದರು.
ಮುಸ್ಲಿಂ ಮುಖಂಡರು ಮತ್ತು ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಹೆಚ್.ಡಿ.ದೇವೇಗೌಡರು ಮುಖ್ಯಮಂತ್ರಿಯಾಗಿದ್ದ ವೇಳೆ ಹುಬ್ಬಳ್ಳಿಯ ಈದ್ಗಾ ಮೈದಾನದ ಸಮಸ್ಯೆಯನ್ನು ಬಗೆಹರಿಸಿದ್ದರು. ಅದೇ ರೀತಿ ಪ್ರಧಾನಿಯಾಗಿದ್ದ ವೇಳೆ ಕಾಶ್ಮೀರದ ಸಮಸ್ಯೆ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ನಡೆಸಿದ್ದರು ಎಂದರು.
ಬಿಜೆಪಿಯವರದ್ದು ಒಡೆದಾಳುವ ನೀತಿ. ಅವರು ಸಮಾಜ ನೆಮ್ಮದಿಯಾಗಿ ಇರಲು ಬಿಡರು. ಕಾಂಗ್ರೆಸ್ನವರದ್ದು ಮೊಸಳೆ ಕಣ್ಣೀರು. ಕಾಂಗ್ರೆಸ್ಸಿಗರು ಮುಸಲ್ಮಾನರನ್ನು ಕೇವಲ ವೋಟ್ ಬ್ಯಾಂಕ್ ಆಗಿ ಪರಿಗಣಿಸಿದರೆ ವಿನಃ ಅವರ ಅಭಿವೃದ್ಧಿಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ತಲಾಖ್ಗೆ ಸಾಥ್: ಕೇಂದ್ರ ಸರ್ಕಾರ ತಲಾಖ್ಗೆ ಅಂತ್ಯ ಹಾಡಿದ್ದು ಸರಿಯಲ್ಲ. ಅದಕ್ಕೆ ಸುಪ್ರೀಂ ಕೋರ್ಟ್ ಸಹ ಬೆಂಬಲ ವ್ಯಕ್ತಪಡಿಸಿದ್ದು ದುರಂತವೇ ಸರಿ. ತಾವು ತಲಾಖ್ಗೆ ಕೇಂದ್ರ ಸರ್ಕಾರ ತೆಗೆದುಕೊಂಡ ನಿರ್ಣಯವನ್ನು ವಿರೋಧಿಸುವುದಾಗಿ ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.
ದೇಶದಲ್ಲಿ 25 ಕೋಟಿ ಮುಸಲ್ಮಾನರಿದ್ದಾರೆ. ಅವರನ್ನು ಕೆರಳಿಸುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ. ಈಗ ಕಾಂಗ್ರೆಸ್ ಮುಕ್ತ ಮಾಡುತ್ತೇವೆ ಎಂದು ಹೇಳುವ ಬಿಜೆಪಿ ಮುಂದೆ ಮುಸ್ಲಿಂ ಮುಕ್ತ ಎಂಬ ಘೋಷಣೆ ಹಾಕಿದರೂ ಆಶ್ಚರ್ಯವಿಲ್ಲ ಎಂದರು.
ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ಗೆ ಬಿಜೆಪಿಯೇ ಎದುರಾಳಿ. ಕ್ಷೇತ್ರದಲ್ಲಿ ಕಾಂಗ್ರೆಸ್ ಶೂನ್ಯ. ಕಾಂಗ್ರೆಸ್ ಗೆಲುವು ಸಾಧಿಸಲು ಸಾಧ್ಯವೇ ಇಲ್ಲ ಎಂದು ಭವಿಷ್ಯ ನುಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ದುರಹಂಕಾರ. ಮೊದಲು ದೇವೇಗೌಡರೇ ಬಿಜೆಪಿಯನ್ನು ರಾಜ್ಯದಿಂದ ದೂರ ಇಡಲು ಕಾಂಗ್ರೆಸ್ ಜತೆ ಒಡಂಬಡಿಕೆ ಮಾಡಿಕೊಳ್ಳಲು ಮುಂದಾಗಿದ್ದರು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಬಹಳ ದುರಹಂಕಾರದಿಂದ ವರ್ತಿಸಿದ ಪರಿಣಾಮ ಮಾತುಕತೆ ಅರ್ಧಕ್ಕೆ ನಿಂತಿತು ಎಂದು ಹೇಳಿದರು.
ತಾಪಂ ಸದಸ್ಯ ಸಿ.ವಿ.ಮಹಲಿಂಗಯ್ಯ, ಎಪಿಎಂಸಿ ಅಧ್ಯಕ್ಷ ಹಿಂಡುಮಾರನಹಳ್ಳಿ ನಾಗರಾಜು, ಪಪಂ ಸದಸ್ಯ ವಿಜಯೇಂದ್ರ, ಮಾಜಿ ಅಧ್ಯಕ್ಷ ಮಂಗಿಕುಪ್ಪೆ ಬಸವರಾಜು, ಮಣೆಚಂಡೂರು ಬಸವರಾಜು, ಗುಡ್ಡೇನಹಳ್ಳಿ ಉಮೇಶ್, ಜಫ್ರುಲ್ಲಾ ಖಾನ್, ಯೂಸುಫ್, ಇಫ್ರಾನ್, ಹುಸೇನ್, ಇಸ್ಮಾಯಿಲ್ ಛೋಟಾ ಸಾಬ್ ಮತ್ತಿತರ ಮುಸಲ್ಮಾನ ಮುಖಂಡರು ಹಾಜರಿದ್ದರು.
ತಮಿಳುನಾಡಿಗೆ ಕೆಎಸ್ಆರ್ಟಿಸಿ ಬಸ್ ಸ್ಥಗಿತ
ಬೆಂಗಳೂರು, ಏ.11-ರಾಜ್ಯದಿಂದ ತಮಿಳುನಾಡಿಗೆ ಒದಗಿಸಿದ್ದ ಎಲ್ಲಾ ಕೆಎಸ್ಆರ್ಟಿಸಿ ಬಸ್ಗಳ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ತಮಿಳುನಾಡಿನ ಕಡಲೂರು ಸೇರಿದಂತೆ ಮೂರು ಕಡೆಗಳಲ್ಲಿ ಕೆಎಸ್ಆರ್ಟಿಸಿ ಬಸ್ಗಳ ಮೇಲೆ ಕಲ್ಲು ತೂರಾಟ ನಡೆದಿದೆ.
ತಮಿಳುನಾಡಿನಲ್ಲಿ ರಾಜಕೀಯ ಪಕ್ಷವೊಂದು ನೀಡಿರುವ ಬಂದ್ ಕರೆ ಹಿನ್ನೆಲೆಯಲ್ಲಿ ನಡೆಯುತ್ತಿರುವ ಪ್ರತಿಭಟನೆಯಿಂದಾಗಿ ಇಂದು ಬೆಳಗ್ಗೆಯಿಂದಲೇ ರಾಜ್ಯದಿಂದ ತಮಿಳುನಾಡಿಗೆ ಒದಗಿಸಲಾಗಿದ್ದ ಬಸ್ ಸೇವೆಯನ್ನು ನಿಲ್ಲಿಸಲಾಗಿದೆ ಎಂದು ಕೆಎಸ್ಆರ್ಟಿಸಿ ಮೂಲಗಳು ತಿಳಿಸಿವೆ.
ಬೆಂಗಳೂರು ಸೇರಿದಂತೆ ಕೆಎಸ್ಆರ್ಟಿಸಿಯ ಎಲ್ಲಾ ವಿಭಾಗಗಳ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಹಗಲಿನಲ್ಲಿ ತಮಿಳುನಾಡಿಗೆ 250ಬಸ್ಗಳು ಹಾಗೂ ರಾತ್ರಿ 200 ಬಸ್ಗಳ ಸೇವೆಯನ್ನು ಕೆಎಸ್ಆರ್ಟಿಸಿ ಒದಗಿಸುತ್ತಿತ್ತು. ಪೆÇಲೀಸ್ ಇಲಾಖೆ ನೀಡುವ ಸಲಹೆ ಆಧರಿಸಿ ಸಂಜೆ ನಂತರ ತಮಿಳುನಾಡಿಗೆ ಬಸ್ ಸಂಚಾರ ಮರು ಆರಂಭಿಸುವ ಬಗ್ಗೆ ನಿರ್ಧಾರ ಕೈಗೊಳ್ಳುತ್ತದೆ ಎಂದು ಕೆಎಸ್ಆರ್ಟಿಸಿ ಮೂಲಗಳು ಸ್ಪಷ್ಟಪಡಿಸಿವೆ.