ತಂಬಾಕು ಸೇವನೆ ಸಾರ್ವಜನಿಕ ಜೀವನಕ್ಕೆ ಒಂದು ಗಂಭೀರ ಸವಾಲಾಗಿ ಪರಿಣಮಿಸಿದೆ: ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಕೃಪಾ ಆಳ್ವ ವಿಷಾದ

 

ಬೆಂಗಳೂರು, ಏ.11- ತಂಬಾಕು ಸೇವನೆ ನಿಯಂತ್ರಣಕ್ಕೆ ಸಮಗ್ರ ಕಾನೂನು ಇದ್ದರೂ ನಮ್ಮ ದೇಶದಲ್ಲಿ ತಂಬಾಕು ಸೇವನೆ ಸಾರ್ವಜನಿಕ ಜೀವನಕ್ಕೆ ಒಂದು ಗಂಭೀರ ಸವಾಲಾಗಿ ಪರಿಣಮಿಸಿದ್ದು , ರೋಗ ರುಜಿನಗಳು ಹಾಗೂ ಸಾವಿಗೆ ಕಾರಣವಾಗುತ್ತಿರುವುದು ವಿಷಾದನೀಯ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಕೃಪಾ ಆಳ್ವ ವಿಷಾದ ವ್ಯಕ್ತಪಡಿಸಿದ್ದಾರೆ.

ತಂಬಾಕು ಲೋಗೋ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ತಂಬಾಕು ನಿಯಂತ್ರಣ ಕಾಯ್ದೆಯ ಅನುಷ್ಠಾನ ಮತ್ತು ಜಾರಿಗೆ ನೆರವಾಗುವುದು ಹಾಗೂ ಈ ನಿಟ್ಟಿನಲ್ಲಿ ಶ್ರಮಿಸುತ್ತಿರುವವರಿಗೆ ಸೂಕ್ತ ಕಾನೂನು ಮಾಹಿತಿ ಒದಗಿಸುವುದು ಆಯೋಗದ ಉದ್ದೇಶವಾಗಿದೆ.

ತಂಬಾಕು ನಿಯಂತ್ರಣಕ್ಕೆ ಈಗಾಗಲೇ ಆಯೋಗ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಆದರೂ ಸಹ ಯುವ ಜನತೆ ಮಾದಕ ವಸ್ತುಗಳ ದಾಸರಾಗುತ್ತಿದ್ದಾರೆ. ಸಂಪೂರ್ಣವಾಗಿ ತಂಬಾಕು ಸೇವನೆಯನ್ನು ನಿಷೇಧಿಸಬೇಕಾದರೆ ಕಾಯ್ದೆಗಳನ್ನು ಸಮಪರ್ಕವಾಗಿ ಅನುಷ್ಠಾನಕ್ಕೆ ತರಬೇಕಾಗಿದ್ದು ಇದರ ಬಗ್ಗೆ ಅಧಿಕಾರಿಗಳು, ಸಾರ್ವಜನಿಕರು ಹಾಗೂ ಮಾರಾಟಗಾರರು ಸಂಘ ಸಂಸ್ಥೆಗಳಿಗೆ ಮನವರಿಕೆ ಮಾಡಿಕೊಡುವ ಅವಶ್ಯಕತೆ ಇದೆ ಎಂದರು.

ಭಾರತೀಯ ತಂಬಾಕು ನಿಯಂತ್ರಣ ಕಾಯ್ದೆಯು ಕೆಲ ಪ್ರಮುಖ ಅಂಶಗಳನ್ನು ಜಾರಿಗೆ ತಂದಿದೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ, ತಂಬಾಕು ಉತ್ಪನ್ನಗಳ ಜಾಹಿರಾತು ಉತ್ತೇಜನದ ಮೇಲೆ ನಿರ್ಬಂಧ ಹೇರುವುದು ಎಲ್ಲಾ ತಂಬಾಕು ಉತ್ಪನ್ನಗಳ ಮೇಲೆ ಆರೋಗ್ಯದ ದುಷ್ಪರಿಣಾಮ ಕುರಿತು ಮುದ್ರಿಸಬೇಕು. ಈ ಎಲ್ಲಾ ಕಾಯ್ದೆಗಳನ್ನು ಜಾರಿಗೆ ತರಲಾಗಿದೆ. ಆದರೂ ಸಹ ಮಾದಕ ವಸ್ತು ಮತ್ತು ತಂಬಾಕು ಸೇವನೆ ನಿರಂತರವಾಗಿ ನಡೆಯುತ್ತಲೇ ಇದೆ. ಇದಕ್ಕೆ ಯುವ ಜನರ ಅರಿವು ಅವಶ್ಯಕವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ