ಬೆಂಗಳೂರು,ಏ.11- ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲೇ ಮೇ 3ರೊಳಗೆ ಕಾವೇರಿ ನಿರ್ವಹಣಾ ಮಂಡಳಿ ಸ್ಕೀಮ್ ಕರಡು ಕುರಿತ ನಿಲುವನ್ನು ಸಲ್ಲಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚಿಸಿರುವುದರಿಂದ ಬಿಜೆಪಿ ಇಕ್ಕಟ್ಟಿಗೆ ಸಿಲುಕಿದೆ.
ವಿಧಾನಸಭೆ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ಮೇ 3ರೊಳಗೆ ನಿಲುವ ಸೂಚಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಆದೇಶಿಸಿರುವುದು ಕಮಲ ನಾಯಕರನ್ನು ನಿದ್ದೆಗೆಡುವಂತೆ ಮಾಡಿದೆ.
ಒಂದು ವೇಳೆ ನ್ಯಾಯಾಲಯದ ಸೂಚನೆಯಂತೆ ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ನಮ್ಮದೇನು ತಕರಾರರು ಇಲ್ಲ ಎಂದು ಸುಪ್ರೀಂಕೋಟ್ ್ಗೆ ಕೇಂದ್ರ ಸರ್ಕಾರ ಅಫಿಡೆವಿಟ್ ಸಲ್ಲಿಸಿದರೆ ನಿಸ್ಸಂದೇಹವಾಗಿ ಬಿಜೆಪಿಗೆ ಹೊಡೆತ ಬೀಳುವುದರಲ್ಲಿ ಯಾವ ಅನುಮಾನವಿಲ್ಲ.
ಕರ್ನಾಟಕದಲ್ಲಿ ಕಾವೇರಿ ಅತ್ಯಂತ ಸೂಕ್ಷ್ಮವಾದ ವಿಷಯವಾಗಿದೆ. ಇಲ್ಲಿನ ಜನರಿಗೂ ಕಾವೇರಿ ನದಿಗೂ ಶತ ಶತಮಾನಗಳಿಂದಲೂ ಅವಿನಾಭಾವ ಸಂಬಂಧವಿದೆ.
ಒಂದು ವೇಳೆ ರಾಜ್ಯದ ಜನತೆಗೆ ವಿರುದ್ಧವಾಗಿ ಮಂಡಳಿ ರಚನೆಗೆ ಕೇಂದ್ರ ಸರ್ಕಾರ ಮುಂದಾದರೆ ಕರ್ನಾಟಕ ಮತ್ತೆ ಹೊತ್ತಿ ಉರಿದು ಕಮಲ ಮುದಡಬಹುದೆಂಬ ಭೀತಿ ಆವರಿಸಿದೆ.
ವಿಧಾನಸಭೆ ಚುನಾವಣೆ ಮುಗಿಯುವವರೆಗೂ ಕೇಂದ್ರ ಸರ್ಕಾರ ಯಾವುದೆ ರೀತಿಯ ನಿಲುವನ್ನು ತೆಗೆದುಕೊಳ್ಳಬಾರದು. ಫಲಿತಾಂಶದ ಬಳಿಕ ಎಲ್ಲ ಕಾವೇರಿ ನದಿ ಪಾತ್ರದ ಮುಖ್ಯಮಂತ್ರಿಗಳ ಸಭೆಯನ್ನು ಕರೆದು ಸಮಸ್ಯೆ ಇತ್ಯರ್ಥಪಡಿಸಲು ಪ್ರಧಾನಿ ಮುಂದಾಗಬೇಕೆಂದು ರಾಜ್ಯ ಬಿಜೆಪಿ ನಾಯಕರು ಮನವಿ ಮಾಡಿದ್ದಾರೆ.
ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡಲು ಮುಂದಾದರೆ ಪ್ರತಿಪಕ್ಷಗಳು ಇದನ್ನೇ ಅಸ್ತ್ರ ಮಾಡಿಕೊಂಡು ಬಿಜೆಪಿಯನ್ನು ಮುಗಿಸಿ ಹಾಕುತ್ತವೆ. ಕಾವೇರಿ ನದಿ ನೀರು, ರಾಜಧಾನಿ ಬೆಂಗಳೂರು, ಮೈಸೂರು, ಚಾಮರಾಜನಗರ, ಮಂಡ್ಯ, ಬೆಂಗಳೂರು ಗ್ರಾಮಾಂತರ, ಹಾಸನ, ತುಮಕೂರು ಸೇರಿದಂತೆ ಮತ್ತಿತರ ಕಡೆಗೆ ರೈತರ ಕೃಷಿ ಚಟುವಟಿಕೆಗಳು ಮತ್ತು ಕುಡಿಯುವ ನೀರು ಪೂರೈಕೆ ಮಾಡುತ್ತದೆ.
ಒಂದುವೇಳೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಇದರ ಪರಿಣಾಮ ರಾಜ್ಯವ್ಯಾಪಿ ಹಬ್ಬುತ್ತದೆ. ಇದರಿಂದ ಪಕ್ಷಕ್ಕೂ ಭಾರೀ ಹೊಡೆತ ಬೀಳುತ್ತದೆ. ಹೀಗಾಗಿ ಎಚ್ಚರಿಕೆಯ ಹೆಜ್ಜೆ ಇಡುವಂತೆ ರಾಜ್ಯ ನಾಯಕರು ಮನವಿ ಮಾಡಿಕೊಂಡಿದ್ದಾರೆ.
ಈ ಹಿಂದೆ ರಾಜ್ಯಕ್ಕೆ ವ್ಯತಿರಿಕ್ತವಾದ ತೀರ್ಪು ಬಂದ ಸಂದರ್ಭದಲ್ಲಿ ಬೆಂಗಳೂರು ಸೇರಿದಂತೆ ಮೈಸೂರು ಭಾಗದಲ್ಲಿ ಭಾರೀ ಗಲಭೆ ನಡೆದು ಪ್ರಾಣಹಾನಿ, ಅನೇಕ ಆಸ್ತಿಪಾಸ್ತಿ ಉಂಟಾಗಿತ್ತು.
ಚುನಾವಣೆ ಸಂದರ್ಭದಲ್ಲಿ ಒಂದು ಹೆಜ್ಜೆ ವ್ಯತ್ಯಾಸವಾದರೂ ಪಕ್ಷಕ್ಕೆ ಹಾನಿಯಾಗುವುದರಲ್ಲಿ ಸಂಶಯವಿಲ್ಲ. ಸ್ಕೀಂ ಕರಡು ರಚನೆಗೆ ಕರ್ನಾಟಕ ವಿರೋಧ ವ್ಯಕ್ತಪಡಿಸುತ್ತದೆ ಎಂಬ ಅಭಿಪ್ರಾಯವನ್ನೇ ನ್ಯಾಯಾಲಯದ ಮುಂದೆ ಅಡ್ವೋಕೇಟ್ ಜನರಲ್ ಮೂಲಕ ಹೇಳಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ಈಗಾಗಲೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್, ಕೇಂದ್ರ ಸಚಿವ ಅನಂತಕುಮಾರ್ ಮೂಲಕ ರಾಜ್ಯ ನಾಯಕರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರಕ್ಕೆ ಬಂದ ಸಂದರ್ಭದಲ್ಲಿ ಪ್ರತಿಪಕ್ಷಗಳು ಈ ಬಗ್ಗೆ ಕೆಣಕಬಹುದು. ಆ ಸಂದರ್ಭದಲ್ಲಿ ರಾಜ್ಯಕ್ಕೆ ವ್ಯತಿರಿಕ್ತವಾಗಿ ಯಾವುದೇ ರೀತಿಯ ತೀರ್ಮಾನ ಕೈಗೊಳ್ಳುವುದಿಲ್ಲ ಎಂದು ಪ್ರಧಾನಿ ಹೇಳಿದರೆ ಸಾಕು ಎನ್ನುತ್ತಿದ್ದಾರೆ ಬಿಜೆಪಿ ನಾಯಕರು.
ಮೇ 3ರಂದು ಸುಪ್ರೀಂಕೋರ್ಟ್ಗೆ ಅಭಿಪ್ರಾಯವನ್ನು ತಿಳಿಸುವ ಸಂದರ್ಭದಲ್ಲಿ ನಾವು ಕಾವೇರಿ ಜಲನಯನದ ಮುಖ್ಯಮಂತ್ರಿಗಳ ಸಭೆ ಕರೆದು ಅಭಿಪ್ರಾಯವನ್ನು ಪಡೆದ ನಂತರವೇ ಕೇಂದ್ರದ ನಿಲುವನ್ನು ಹೇಳುತ್ತೇವೆ ಎಂದರೆ ಸಮಸ್ಯೆ ಇಲ್ಲ. ಒಂದು ವೇಳೆ ತಮಿಳುನಾಡಿನ ಒತ್ತಡಕ್ಕೆ ಮಣಿದು ಸ್ಕೀಂ ಕರಡು ರೂಪಿಸಲು ಮುಂದಾದರೆ ಪಕ್ಷಕ್ಕೆ ಉಣಿಸಲಾಗದಷ್ಟು ನಷ್ಟವಾಗುತ್ತದೆ ಎಂಬ ಆತಂಕ ವ್ಯಕ್ತವಾಗಿದೆ.
ಒಂದು ಕಡೆ ಸುಪ್ರೀಂ ಕೋರ್ಟ್ನ ನ್ಯಾಯಾಂಗ ತೂಗುಗತ್ತಿಯಿಂದ ತನ್ನನ್ನು ರಕ್ಷಿಸಿಕೊಳ್ಳಬೇಕಾದ ಇಕ್ಕಟ್ಟಿನಲ್ಲಿ ಕೇಂದ್ರ ಸರ್ಕಾರವಿದೆ. ಮತ್ತೊಂದೆಡೆ ಕರ್ನಾಟಕದ ಹಿತವನ್ನು ಕಾಪಾಡಬೇಕು. ಹೀಗಾಗಿ ಕೇಂದ್ರ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ.