ನವದೆಹಲಿ, ಏ.11-ಪ್ರಸ್ತಕ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕ ಪ್ರಗತಿ ಶೇ.7.3ರಷ್ಟು ಏರಲಿದ್ದು, ಮುಂದಿನ ವಿತ್ತೀಯ ಸಾಲಿನಲ್ಲಿ ಅದು 7.6ಕ್ಕೆ ವೃದ್ದಿಯಾಗಲಿದೆ ಎಂದು ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್(ಎಡಿಬಿ) ಹೇಳಿದೆ.
ಸರಕು ಮತ್ತು ಸೇವೆಗಳ ತೆರಿಗೆ(ಜಿಎಸ್ಟಿ) ಜಾರಿ ನಂತರ ಉತ್ಪಾದಕತೆಯಲ್ಲಿ ಹೆಚ್ಚಳ ಹಾಗೂ ಬ್ಯಾಂಕಿಂಗ್ ಸುಧಾರಣೆಯಿಂದಾಗಿ ಬಂಡವಾಳ ಹೂಡಿಕೆ ಪುನಃಶ್ಚೇತನದಿಂದ 2018-19ನೇ ಸಾಲಿಗೆ ಭಾರತದ ಆರ್ಥಿಕ ಬೆಳವಣಿಗೆ ಶೇ.7.3ರಷ್ಟು ತಲುಪಲಿದೆ. 2019-2020ನೇ ಸಾಲಿನಲ್ಲಿ ಅದು 7.6ರಷ್ಟು ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಎಡಿಬಿ ತಿಳಿಸಿದೆ.
ಕಳೆದ ಹಣಕಾಸು ವರ್ಷದಲ್ಲಿ ನೋಟು ಅಮಾನ್ಯೀಕರಣದ ಪರಿಣಾಮದಿಂದಾಗಿ ಭಾರತದ ಆರ್ಥಿಕ ಪ್ರಗತಿ ಶೇ.6.6ರಷ್ಟಿತ್ತು. ಅಮಾನ್ಯೀಕರಣದ ನಂತರ ಕಂಡುಬಂದಿದ್ದ ಆರ್ಥಿಕ ಹಿನ್ನಡೆಯಿಂದ ಹೊರಬಂದು ಚೇತರಿಕೆ ಕಂಡಿದೆ. ಅದೇ ರೀತಿ ಜಿಎಸ್ಟಿ ನಂತರ ಉತ್ಪಾದಕತೆಯಲ್ಲೂ ಹೆಚ್ಚಳ ಗೋಚರಿಸಿದೆ. ಬ್ಯಾಂಕಿಂಗ್ ವಲಯ ಪುನಃಶ್ಚೇತನವಾಗಿರುವುದರಿಂದ ಬಂಡವಾಳ ಹೂಡಿಕೆಯಲ್ಲೂ ಗಮನಾರ್ಹ ಹೆಚ್ಚಳವಾಗಿದೆ. ಈ ಎಲ್ಲ ಕಾರಣಗಳಿಂದ ಪ್ರಸ್ತಕ ವರ್ಷ ಹಾಗೂ ಮುಂದಿನ ಸಾಲಿನಲ್ಲಿ ಆರ್ಥಿಕ ಅಭಿವೃದ್ದಿಯನ್ನು ನಿರೀಕ್ಷಿಸಬಹುದಾಗಿದೆ ಎಂದು ಎಡಿಬಿ ವಿವರಿಸಿದೆ.