ಬೆಂಗಳೂರು, ಏ.11- ಕಳೆದ ಎರಡು ವರ್ಷಗಳಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಆರಂಭವಾಗಿರುವುದು ಬರೋಬ್ಬರಿ 13 ಸಾವಿರ ಕೋಟಿ ಮೌಲ್ಯದ ಕಾಮಗಾರಿಗಳು. ಈ ಕಾಮಗಾರಿಗಳ ಪೈಕಿ ಇದುವರೆಗೂ ಪೂರ್ಣಗೊಂಡಿರುವುದು ಕೇವಲ ಶೇ.25ರಷ್ಟು ಮಾತ್ರ.
ಬಿಬಿಎಂಪಿ ಅಧಿಕಾರಿಗಳು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್ನಲ್ಲಿ ಈ ಆಘಾತಕಾರಿ ಅಂಶ ಬಯಲಾಗಿದೆ.
2015-16 ಮತ್ತು 2016-17ನೆ ಸಾಲಿನಲ್ಲಿ ಬಿಬಿಎಂಪಿಗೆ 7300 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ಇಡೀ ಬೆಂಗಳೂರು ಅಭಿವೃದ್ಧಿಯತ್ತ ಮುಖ ಮಾಡಿದೆ ಎಂದೇ ಬಿಂಬಿಸಲಾಗುತ್ತಿತ್ತು.
ಇದೀಗ ಬಣ್ಣ ಬಯಲಾಗಿದ್ದು, ಕಳೆದ ಎರಡು ವರ್ಷಗಳಲ್ಲಿ ಮಂಜೂರಾಗಿರುವ 13,342.67 ಕೋಟಿ ರೂ. ವೆಚ್ಚದ 19,996 ಕಾಮಗಾರಿ ಪೈಕಿ ಇದುವರೆಗೂ ಪೂರ್ಣಗೊಂಡಿರುವುದು 2,158 ಕೋಟಿ ರೂ. ವೆಚ್ಚದ ಕೇವಲ 4865 ಕಾಮಗಾರಿಗಳು ಮಾತ್ರ.
ಚಾಲ್ತಿಯಲ್ಲಿರುವ ಕಾಮಗಾರಿಗಳು 10,693. ಇದರ ಮೌಲ್ಯ 7,759 ಕೋಟಿ ರೂ. ಇನ್ನೂ ಪ್ರಾರಂಭವಾಗದಿರುವುದು 358 ಕೋಟಿ ಮೌಲ್ಯದ 303 ಕಾಮಗಾರಿಗಳು. ಫೈಲ್ ಹಂತದಲ್ಲಿರುವುದು ಸುಮಾರು 1881 ಕೋಟಿ ಮೌಲ್ಯದ 3890 ಕಾಮಗಾರಿಗಳು.
ಕಳೆದ ಎರಡು ವರ್ಷಗಳಲ್ಲಿ ನಗರದಲ್ಲಿ ಕೇಂದ್ರ, ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಯ ವಿವಿಧ ಅನುದಾನಗಳಿಂದ ಸರಿಸುಮಾರು 19,996 ಕಾಮಗಾರಿಗಳು ಮಂಜೂರಾಗಿದ್ದು, ಇದುವರೆಗೂ ಶೇ.25ರಷ್ಟು ಮಾತ್ರ ಕಾಮಗಾರಿ ಪೂರ್ಣಗೊಂಡಿದೆ ಎಂದು ಸ್ವತಃ ಬಿಬಿಎಂಪಿ ಅಧಿಕಾರಿಗಳೇ ಅಫಿಡವಿಟ್ನಲ್ಲಿ ಉತ್ತರ ನೀಡಿದ್ದಾರೆ.
ಬುದ್ಧಿವಂತ ರಾಜಕಾರಣಿಗಳು: ಚುನಾವಣಾ ನೀತಿ ಸಂಹಿತೆ ಜಾರಿಯಾದ ನಂತರ ಯಾವುದೇ ಹೊಸ ಕಾಮಗಾರಿಗಳನ್ನು ಆರಂಭಿಸಲು ಸಾಧ್ಯವಿಲ್ಲ ಎಂಬ ಅಂಶ ಅರಿತಿರುವ ನಗರದ ಬುದ್ಧಿವಂತ ರಾಜಕಾರಣಿಗಳು ಈ ಹಿಂದೆ ಅನುಮತಿ ಪಡೆದಿದ್ದ ಕಾಮಗಾರಿಗಳಿಗೆ ಈಗ ಚಾಲನೆ ನೀಡಿದ್ದಾರೆ.
ಕಾಮಗಾರಿಗೆ ಅನುಮತಿ ದೊರೆತ ತಕ್ಷಣ ಯೋಜನೆ ಪೂರ್ಣಗೊಳಿಸಿದರೆ ಅದನ್ನು ಜನ ಮರೆಯುತ್ತಾರೆ ಎಂಬ ಮಾಹಿತಿ ತಿಳಿದಿದ್ದ ರಾಜಕಾರಣಿಗಳು ಈ ಹಿಂದಿನ ಎರಡು ವರ್ಷಗಳಲ್ಲಿ ಅನುಮತಿ ಪಡೆದ ಕಾಮಗಾರಿಗಳಿಗೆ ಇದೀಗ ಚಾಲನೆ ನೀಡಿದ್ದಾರೆ.
ಚುನಾವಣೆಗೆ ದಿನಾಂಕ ನಿಗದಿಯಾಗುತ್ತಿದ್ದಂತೆ ಈ ಹಿಂದೆ ಅನುಮತಿ ಪಡೆದಿದ್ದ ಕಾಮಗಾರಿಗಳನ್ನು ತರಾತುರಿಯಲ್ಲಿ ಆರಂಭಿಸಿದ್ದಾರೆ. ಇದುವರೆಗೂ ದುರಸ್ತಿ ಕಾಣದ ರಸ್ತೆಗಳು ಡಾಂಬರೀಕರಣದಿಂದ ನಳನಳಿಸುತ್ತಿವೆ.
ಕೊಳಚೆ ನೀರು ನಿಂತು ಗಬ್ಬು ನಾರುತ್ತಿದ್ದ ಮೋರಿಗಳನ್ನು ದುರಸ್ತಿ ಮಾಡಿಕೊಡಿ ಎಂದು ನಾಗರಿಕರು ಬೊಬ್ಬೆ ಹೊಡೆದುಕೊಂಡರೂ ಕಿವಿಯಿದ್ದೂ ಕುರುಡರಂತೆ ವರ್ತಿಸುತ್ತಿದ್ದ ಜನಪ್ರತಿನಿಧಿಗಳು ಇದೀಗ ಇದ್ದಕ್ಕಿದ್ದಂತೆ ಯಾರು ಕೇಳದಿದ್ದರೂ ಮೋರಿ ದುರಸ್ತಿ ಮಾಡುವ ಕಾರ್ಯಕ್ಕೆ ಕೈ ಹಾಕಿದ್ದಾರೆ.
ಅದೇ ರೀತಿ ರಾಜಕಾಲುವೆ, ಫುಟ್ಪಾತ್, ಚರಂಡಿ, ಕೆರೆ ಅಭಿವೃದ್ಧಿಯಂತಹ ನೂರಾರು ಕಾಮಗಾರಿಗಳು ನಗರದಲ್ಲಿ ನಡೆಯುತ್ತಿವೆ.
ಗ್ಯಾರಂಟಿ ಇಲ್ಲ: ಮಾಮೂಲು ದಿನಗಳಲ್ಲೇ ಕಳಪೆ ಕಾಮಗಾರಿ ಮಾಡುವ ಗುತ್ತಿಗೆದಾರರು ಚುನಾವಣಾ ಸಮಯದಲ್ಲಿ ಮಾಡುವ ಕಾಮಗಾರಿಗಳಿಗೆ ಯಾವುದೇ ಗ್ಯಾರಂಟಿ ಇಲ್ಲ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
ಚುನಾವಣೆ ಸಂದರ್ಭದಲ್ಲಿ ಯಾರೂ ಕಾಮಗಾರಿಗಳ ಸಾಚಾತನ ಪ್ರಶ್ನಿಸಲು ಮುಂದೆ ಬರುವುದಿಲ್ಲ ಎಂಬ ಅಂಶ ಅರಿತಿರುವ ಕೆಲ ಗುತ್ತಿಗೆದಾರರು ರಸ್ತೆಗಳಿಗೆ ಸಗಣಿ ಸಾರಿಸುವಂತೆ ಡಾಂಬರು ಬಳಿಯುತ್ತಿದ್ದಾರೆ.
ಹೇಗೋ ಏನೋ ಮತದಾರರಿಗೆ ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಯೋಜನೆಗಳಾಗುತ್ತಿವೆ ಎಂಬ ಅಂಶ ಮನದಟ್ಟಾದರೆ ಸಾಕು ಎಂಬ ಮನೋಭಾವನೆ ಹೊಂದಿರುವ ರಾಜಕಾರಣಿಗಳು ಕಣ್ಮುಚ್ಚಿ ಕುಳಿತಿರುವುದರಿಂದ ಚುನಾವಣೆ ಸಂದರ್ಭದಲ್ಲಿ ನಡೆಸಲಾಗುತ್ತಿರುವ ಕಾಮಗಾರಿಗಳಿಗೆ ಯಾವುದೇ ಗ್ಯಾರಂಟಿ ಇಲ್ಲ ಎನ್ನುವಂತಾಗಿದೆ.
ಎಚ್ಚರಗೊಳ್ಳಿ: ನಾಗರೀಕರೇ ಚುನಾವಣೆ ಸಂದರ್ಭದಲ್ಲಿ ನಿಮ್ಮ ಕ್ಷೇತ್ರದಲ್ಲಿ ದಿಢೀರ್ ಅಭಿವೃದ್ಧಿ ಕಾಮಗಾರಿಗಳಾಗುತ್ತಿದ್ದರೆ ಅದರ ಸಾಚಾತನವನ್ನು ನೀವೇ ಪತ್ತೆಹಚ್ಚಿ. ಒಂದು ವೇಳೆ ಕಳಪೆ ಕಾಮಗಾರಿ ಪತ್ತೆಯಾದರೆ ಸಂಬಂಧಪಟ್ಟವರಿಗೆ ದೂರು ನೀಡಿ. ಇಲ್ಲದಿದ್ದರೆ ಅಭಿವೃದ್ಧಿ ಹೆಸರಿನಲ್ಲಿ ನಡೆಸಲಾಗುತ್ತಿರುವ ಕಳಪೆ ಕಾಮಗಾರಿಗಳಿಂದ ನಷ್ಟ ಸಂಭವಿಸುವುದು ನೀವು ಪಾವತಿಸುವ ನ್ಯಾಯಯುತ ತೆರಿಗೆ ಹಣ ಎಂಬುದನ್ನು ಮರೆಯಬಾರದು.