ಬೆಂಗಳೂರು, ಏ.11-ರಾಷ್ಟ್ರೀಯ ನಾಯಕರ ಅಪೇಕ್ಷೆಯಂತೆ ಕಾಂಗ್ರೆಸ್ ಮುಕ್ತ ಭಾರತವಾಗಬೇಕಾದರೆ ಕರ್ನಾಟಕದಲ್ಲಿ ಕಾಂಗ್ರೆಸ್ನ್ನು ಬುಡಸಮೇತ ಕಿತ್ತು ಹಾಕಲು ಕಾರ್ಯಕರ್ತರು ಪಣ ತೊಡಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕರೆ ಕೊಟ್ಟಿದ್ದಾರೆ.
ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಚುನಾವಣಾ ನಿರ್ವಹಣೆ ಕುರಿತ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾಲು ಸಾಲು ಚುನಾವಣೆಗಳಲ್ಲಿ ಸೋತಿರುವ ಕಾಂಗ್ರೆಸ್ ಕರ್ನಾಟಕದಲ್ಲಿ ಗೆಲ್ಲಲು ಎಲ್ಲ ರೀತಿಯ ವಾಮಮಾರ್ಗ ಅನುಸರಿಸಲಿದೆ. ಕಾಂಗ್ರೆಸ್ ಮುಕ್ತ ಕನಸು ನನಸಾಗಬೇಕಾದರೆ ಕರ್ನಾಟಕದ ಮತದಾರರು ಅದಕ್ಕೆ ಮುನ್ನುಡಿ ಬರೆಯಬೇಕೆಂದು ಮನವಿ ಮಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಲಿನ ಭೀತಿಯಿಂದಾಗಿ ತಾವು ಪ್ರತಿನಿಧಿಸುವ ವರುಣಾ ಮತ್ತು ಚಾಮುಂಡೇಶ್ವರಿಯಲ್ಲಿ ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದಾರೆ. ತಮ್ಮ ಕ್ಷೇತ್ರದಲ್ಲೇ ಜನರ ವಿಶ್ವಾಸವನ್ನು ಕಳೆದುಕೊಂಡು ಬೇರೊಂದು ಕ್ಷೇತ್ರವನ್ನು ಹುಡುಕುತ್ತಿದ್ದಾರೆ. ಇಂಥವರು ಮತ್ತೆ ಗೆದ್ದು ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ ಎಂದು ಬಿಎಸ್ವೈ ವ್ಯಂಗ್ಯವಾಡಿದರು.
ವರುಣಾ ಮತ್ತು ಚಾಮುಂಡೇಶ್ವರಿಯಲ್ಲಿ ಡಾ.ಯತೀಂದ್ರ ಮತ್ತು ಸಿದ್ದರಾಮಯ್ಯ ಅವರನ್ನು ಸೋಲಿಸಲು ನಾವು ಎಲ್ಲ ರೀತಿಯ ರಣ ತಂತ್ರ ರೂಪಿಸಿದ್ದೇವೆ. ಅವರು ರಾಜ್ಯದ ಯಾವುದೇ ಭಾಗದಿಂದ ಸ್ಪರ್ಧಿಸಿದರೂ ಸೋಲನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಭವಿಷ್ಯ ನುಡಿದರು.
ಚಾಮುಂಡೇಶ್ವರಿ ಮತ್ತು ವರುಣಾದಲ್ಲಿ ಅಪ್ಪ ಮಕ್ಕಳನ್ನು ಸೋಲಿಸಲು ಅಲ್ಲಿನ ಮತದಾರರು ತೀರ್ಮಾನಿಸಿದ್ದಾರೆ. ಸ್ವಂತ ಕ್ಷೇತ್ರಗಳನ್ನೇ ಉಳಿಸಿಕೊಳ್ಳು ಆಗದವರು ರಾಜ್ಯದಲ್ಲಿ ಪುನಃ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಸಾಧ್ಯವೇ ಎಂದು ಯಡಿಯೂರಪ್ಪ ಪ್ರಶ್ನಿಸಿದರು.
ಮೈಸೂರಿನಲ್ಲಿ ಕಾಂಗ್ರೆಸ್ ಸೋತರೆ ರಾಜ್ಯದಲ್ಲಿ ಅದರ ಬುಡ ಅಲುಗಾಡುತ್ತದೆ. ಭ್ರಷ್ಟ ಕಾಂಗ್ರೆಸ್ನ್ನು ಕಿತ್ತೊಯ್ಯುವರೆಗೂ ಕಾರ್ಯಕರ್ತರು ವಿರಮಿಸಬಾರದು. ಇನ್ನು ಒಂದು ತಿಂಗಳವರೆಗೂ ನೀವು ನಿಮ್ಮ ನಿಮ್ಮ ಕ್ಷೇತ್ರ ಬಿಟ್ಟು ಹೋಗದೆ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುವಂತೆ ಸಲಹೆ ಮಾಡಿದರು.
ಉತ್ತರಪ್ರದೇಶದಂತೆ ರಾಜ್ಯದಲ್ಲೂ ಅಚ್ಚರಿಯ ಫಲಿತಾಂಶ ಬರುವುದರಲ್ಲಿ ಯಾವ ಸಂಶಯವೂ ಇಲ್ಲ. ಮಿಷನ್ 150 ತಲುಪುವ ಬಗ್ಗೆ ನನಗೆ ಸಂದೇಶಹವಿಲ್ಲ. ಯಾರೂ ಏನೇ ಮಾತನಾಡಿಕೊಳ್ಳಲಿ ಮತದಾರರು ಮಾತ್ರ ಬಿಜೆಪಿ ಪರವಾಗಿದ್ದಾರೆ ಎಂದರು.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಪಕ್ಷದ ಗೆಲುವಿಗೆ ತಮ್ಮದೇ ಆದ ರಣತಂತ್ರ ರೂಪಿಸುತ್ತಿದ್ದಾರೆ. ಕೇಂದ್ರ ನಾಯಕರು ನಮಗೆ ಎಲ್ಲ ರೀತಿಯ ಸಹಕಾರ ನೀಡುತ್ತಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಅನೇಕ ಸವಲತ್ತುಗಳನ್ನು ನೀಡಲಾಗಿದೆ. ಇದನ್ನು ಜನರಿಗೆ ಮನವರಿಕೆ ಮಾಡಿಕೊಡುವಂತೆ ಸೂಚಿಸಿದರು.
ಕೇಂದ್ರ ಸಚಿವ ಅನಂತಕುಮಾರ್ ಮಾತನಾಡಿ, ನಾಳೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಂಸದರು ಸೇರಿ ಎಲ್ಲರೂ ಉಪವಾಸ ಸತ್ಯಾಗ್ರಹ ನಡೆಸಲಿದ್ದೇವೆ. ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸೇರಿದಂತೆ ಕೆಲವರು ಕಲಾಪ ನಡೆಯದಂತೆ ಅಡ್ಡಿಪಡಿಸಿದೆ. ಅವರ ಪ್ರಜಾತಂತ್ರ ವಿರೋಧಿ ನೀತಿ ಖಂಡಿಸಿ ಉಪವಾಸ ಕೈಗೊಳ್ಳಲಿದ್ದೇವೆ ಎಂದರು.
ಕಾಂಗ್ರೆಸ್ನಿಂದ ದೇಶವನ್ನು ಉಳಿಸಿ ಎಂಬ ಘೋಷಣೆಯೊಂದಿಗೆ ಸತ್ಯಾಗ್ರಹ ನಡೆಸಲಾಗುವುದು. ಕಾಂಗ್ರೆಸ್ನಲ್ಲಿ ಎಂದಿಗೂ ಪ್ರಜಾಪ್ರಭುತ್ವವಿಲ್ಲ. ನೆಹರು ಗಾಂಧಿ ಕುಟುಂಬದಲ್ಲಿ ಕಾರ್ಯಕರ್ತರು ಎಂದಿಗೂ ಅಧ್ಯಕ್ಷರಾಗಲು ಸಾಧ್ಯವೇ ಇಲ್ಲ. ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮುಂದೆ ಪಾಪು ಗಾಂಧಿಯೂ ಅಧ್ಯಕ್ಷರಾಗಬಹುದು ಎಂದರು.
ರಾಜ್ಯ ಉಸ್ತುವಾರಿ ಮುರುಳೀಧರ್ ರಾವ್ ಮಾತನಾಡಿ, ಮೈಮೇಲೆ ಸ್ಕೇಲ್ನಿಂದ ಗೆರೆಗಳನ್ನು ಎಳೆದುಕೊಂಡ ಮಾತ್ರಕ್ಕೆ ರಾಹುಲ್ ಗಾಂಧಿ ಹುಲಿಯಾಗಲು ಸಾಧ್ಯವಿಲ್ಲ. ಕಾಂಗ್ರೆಸ್ ಅಧ್ಯಕ್ಷರಾಗಿ ಇಲ್ಲಿಗೆ ಬಂದು ಭಾಷಣ ಮಾಡಿದರೆ ಕರ್ನಾಟಕದ ಜನತೆ ಮತ ಹಾಕಲು ಮೂರ್ಖರೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಒಂದೆರಡು ದಿನದಲ್ಲಿ 2ನೇ ಪಟ್ಟಿ ಬಿಡುಗಡೆ ಮಾಡಲು ವರಿಷ್ಠರು ತೀರ್ಮಾನಿಸಿದ್ದಾರೆ.ಮೊದಲ ಪಟ್ಟಿಯಲ್ಲಿರುವ 72 ಅಭ್ಯರ್ಥಿಗಳ ಪೈಕಿ ಕನಿಷ್ಠ 68 ಅಭ್ಯರ್ಥಿಗಳು ಗೆಲ್ಲುವ ಸಾಧ್ಯತೆ ಇದೆ ಎಂದು ಹೇಳಿದರು.
ಚುನಾವಣೆಯಲ್ಲಿ ಅಭ್ಯರ್ಥಿಗಳು ನೆಪ ಮಾತ್ರ. ನಮ್ಮನ್ನು ಗೆಲ್ಲಿಸುವುದು ಕಾರ್ಯಕರ್ತರು. ಅಭ್ಯರ್ಥಿಗಳು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಎದುರಿಸಬೇಕೆಂದು ಹೇಳಿದರು.
ಕಾರ್ಯಾಗಾರದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಸಹಕಾರ್ಯದರ್ಶಿ ಬಿ.ಎಲ್.ಸಂತೋಷ್, ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.