ಬೆಂಗಳೂರು, ಏ.10- ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರತೊಡಗಿದೆ. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷಗಳಲ್ಲಿ ಟಿಕೆಟ್ ಪಡೆದವರು ಪ್ರಚಾರ ಶುರುವಿಟ್ಟುಕೊಂಡರೆ, ಇನ್ನು ಟಿಕೆಟ್ ಸಿಗದವರು ಕೊನೆ ಕ್ಷಣದ ಕಸರತ್ತು ನಡೆಸುತ್ತಿದ್ದಾರೆ.
ಟಿಕೆಟ್ ಆಕಾಂಕ್ಷಿಗಳು ತಮ್ಮ ನಾಯಕರುಗಳೊಂದಿಗೆ ಟಿಕೆಟ್ ಪಡೆಯಲು ಲಾಬಿ ನಡೆಸುತ್ತಿದ್ದರೆ, ಇತ್ತ ಟಿಕೆಟ್ ಪಡೆದವರು ಅಬ್ಬರದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.
ಟಿಕೆಟ್ ಸಿಗದವರು ಬಂಡಾಯದ ಕಹಳೆ ಮೊಳಗಿಸಿದರೆ, ಅತೃಪ್ತಿ ಶಮನ ಮಾಡಲು ರಾಜಕೀಯ ನಾಯಕರು ಹರಸಾಹಸ ಪಡುತ್ತಿದ್ದಾರೆ. ಅಸಮಾಧಾನಗೊಂಡವರನ್ನು ತಮ್ಮತ್ತ ಸೆಳೆಯಲು ವಿವಿಧ ರಾಜಕೀಯ ಪಕ್ಷಗಳು, ಮುಖಂಡರು ಪ್ರಯತ್ನ ಮುಂದುವರಿಸಿದ್ದಾರೆ.
ಈಗಾಗಲೇ ಹಳ್ಳಿ ಹಳ್ಳಿಗಳಲ್ಲಿ, ಗಲ್ಲಿ ಗಲ್ಲಿಗಳಲ್ಲಿ ಸಭೆ-ಸಮಾರಂಭ-ಸಮಾಲೋಚನೆಗಳು ನಡೆಯುತ್ತಿದ್ದರೆ, ಮನೆ ಮನೆಗಳಿಗೆ ತೆರಳಿ ಮತಯಾಚನೆ ಶುರುವಾಗಿದೆ.
ಜೆಡಿಎಸ್ ಪಕ್ಷ ಈಗಾಗಲೇ 126 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದ್ದು, ಅವರು ಈಗಾಗಲೇ ತಮ್ಮ ಕ್ಷೇತ್ರಗಳಲ್ಲಿ ಪ್ರಚಾರದ ಭರಾಟೆಯಲ್ಲಿ ತೊಡಗಿಕೊಂಡಿದ್ದಾರೆ. ಬಿಜೆಪಿ 72 ಕ್ಷೇತ್ರಗಳಲ್ಲಿ ಅಧಿಕೃತವಾಗಿ ಅಭ್ಯರ್ಥಿಯನ್ನು ಪ್ರಕಟಿಸಿದೆ. ಕಾಂಗ್ರೆಸ್ ಹಾಲಿ ಶಾಸಕರಿಗೆ ಟಿಕೆಟ್ ಎಂದು ಪರೋಕ್ಷವಾಗಿ ಘೊಷಿಸಿದ ಹಿನ್ನೆಲೆಯಲ್ಲಿ ಬಹುತೇಕ ಕ್ಷೇತ್ರಗಳಲ್ಲಿ ಪ್ರಚಾರದ ಕಾವು ಏರತೊಡಗಿದೆ.
ಕೆಲವೆಡೆ ನೀತಿ-ಸಂಹಿತೆ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ. ಮತದಾರರ ಮನವೊಲಿಸಲು ಹಲವು ಆಮಿಷಗಳನ್ನು ಒಡ್ಡಲಾಗುತ್ತಿದೆ. ಚುನಾವಣಾ ಘೋಷಣೆಗೂ ಮುನ್ನ ಮತದಾರರ ಮನವೊಲಿಸಲು ಹಲವು ಉಡುಗೊರೆ ಭಾಗ್ಯಗಳನ್ನು ನೀಡಲಾಗಿತ್ತು. ಕುಕ್ಕರ್, ಸೀರೆಗಳನ್ನು ರಾಜಾರೋಷವಾಗಿ ವಿತರಿಸಲಾಗುತ್ತಿತ್ತು. ಪ್ರವಾಸ ಭಾಗ್ಯಗಳನ್ನು ಕಲ್ಪಿಸಲಾಗಿತ್ತು. ಚುನಾವಣಾ ದಿನಾಂಕ ಘೋಷಣೆಯಾದ ಮೇಲೆ ಆಯೋಗದ ಕಣ್ತಪ್ಪಿಸಿ ಈ ಕೆಲಸಗಳನ್ನು ಮಾಡಬೇಕಿದೆ.
ಚುನಾವಣಾ ಆಯೋಗ ಚಾಪೆ ಕೆಳಗೆ ನುಸುಳಿದರೆ, ಅಭ್ಯರ್ಥಿಗಳು ರಂಗೋಲಿ ಕೆಳಗೆ ನುಸುಳುವ ಕೆಲಸ ಮಾಡುತ್ತಿದ್ದಾರೆ. ಈಗ ಮತದಾರರನ್ನು ಸೆಳೆಯಲು ಟೋಕನ್ ಭಾಗ್ಯ ಕರುಣಿಸುತ್ತಿದ್ದಾರೆ. ಉಡುಗೊರೆಗಳನ್ನು ನೇರವಾಗಿ ನೀಡದೆ ನಿಗದಿತ ಅಂಗಡಿಗಳಿಗೆ ಟೋಕನ್ಗಳನ್ನು ನೀಡಿ ಪಡೆದುಕೊಳ್ಳುವಂತೆ ಸೂಚನೆಗಳನ್ನು ಅಲ್ಲಲ್ಲಿ ನೀಡುತ್ತಿರುವುದು ಕಂಡುಬರುತ್ತಿದೆ.
ಒಟ್ಟಾರೆ ಚುನಾವಣೆ ದಿನದಿಂದ ದಿನಕ್ಕೆ ರಂಗೇರತೊಡಗಿದೆ. ರಾಜಕೀಯ ಪಕ್ಷಗಳ ಆರೋಪ-ಪ್ರತ್ಯಾರೋಪಗಳು, ರಾಜಕೀಯ ಮೇಲಾಟಗಳು, ಸಭೆ-ಸಮಾರಂಭಗಳು ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿವೆ.
ಪ್ರಮುಖ ರಾಜಕೀಯ ಪಕ್ಷಗಳ ಅದ್ಧೂರಿ ಸಮಾವೇಶಗಳು, ರೋಡ್ಶೋ, ರ್ಯಾಲಿಗಳು ಒಂದು ಹಂತದಲ್ಲಿ ಈಗಾಗಲೇ ಮುಗಿದಿದ್ದು, ಎರಡನೆ ಹಂತದ ಸಮಾವೇಶ ಸಮಾರಂಭಗಳಿಗೆ ಭರದ ಸಿದ್ಧತೆಗಳು ನಡೆಯುತ್ತಿವೆ.
ಚುನಾವಣಾ ಆಯೋಗದ ಹದ್ದಿನ ಕಣ್ಣಿನ ನಡುವೆಯೂ ಪ್ರಚಾರದ ಭರಾಟೆ ದಿನದಿಂದ ದಿನಕ್ಕೆ ಹೆಚ್ಚಾಗತೊಡಗಿದೆ.