ಬೆಂಗಳೂರು, ಏ.10-ಈ ಬಾರಿಯ ಘಟಿಕೋತ್ಸವದಲ್ಲಿ 20,482 ಪದವೀಧರ ಅಭ್ಯರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತಿದ್ದು, 84 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ದೊರೆತಿದೆ ಎಂದು ರಾಜೀವ್ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎಂ.ಕೆ.ರಮೇಶ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಅವರು, ರಾಜೀವ್ಗಾಂಧಿ ಆರೋಗ್ಯ ವಿವಿಯ 20ನೇ ಘಟಿಕೋತ್ಸವ ಸಮಾರಂಭ ಇದೇ 12 ರಂದು ನಿಮ್ಹಾನ್ಸ್ ಸಭಾಂಗಣದಲ್ಲಿ ನಡೆಯಲಿದೆ ಎಂದು ತಿಳಿಸಿದರು.
ಪ್ರಸ್ತುತ ಸಾಲಿನಲ್ಲಿ 26,469 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, ಪದವಿ ಪಡೆಯಲು ಅರ್ಹತೆ ಹೊಂದಿದ್ದಾರೆ. ಈ ಪೈಕಿ 68 ಪಿಎಚ್ಡಿ, 138 ಸೂಪರ್ಸ್ಪೆಷಾಲಿಟಿ, 5,581 ಸ್ನಾತಕೋತ್ತರ ಪದವಿ, 182 ಫೆಲೋಶಿಪ್ ಕೋರ್ಸ್, 18 ಸರ್ಟಿಫಿಕೇಟ್ ಕೋರ್ಸ್ ಸೇರಿವೆ ಎಂದು ಹೇಳಿದರು.
ಘಟಿಕೋತ್ಸವ ಸಮಾರಂಭದಲ್ಲಿ 84 ಚಿನ್ನದ ಪದಕ ಪ್ರದಾನ ಮಾಡಲಾಗುವುದು. ಜೊತೆಗೆ 7ಮಂದಿ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಕೊಡಲಾಗುವುದು ಎಂದು ತಿಳಿಸಿದರು.
ರಾಜೀವ್ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯವು ಡಿಜಿಟಲ್ ಮೌಲ್ಯಮಾಪನ ಪದ್ಧತಿಯನ್ನು ಅಳವಡಿಸಿಕೊಂಡಿದ್ದು, ದೇಶದ ಎಲ್ಲಾ ವಿವಿಗಳ ಪ್ರಶಂಸೆಗೆ ಪಾತ್ರವಾಗಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಕುಲಸಚಿವ ಡಾ.ಸಿ.ಎ.ನೂರ್ ಮನ್ಸೂರ್ ಮಾತನಾಡಿ, ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು, ರಾಜ್ಯಪಾಲ ವಜೂಭಾಯಿ ರೂಢಬಾಯಿ ವಾಲಾ ಮತ್ತಿತರ ಗಣ್ಯರು ಘಟಿಕೋತ್ಸವದಲ್ಲಿ ಪಾಲ್ಗೊಳ್ಳಲಿದಾರೆ ಎಂದು ತಿಳಿಸಿದರು.
ರಾಜೀವ್ಗಾಂಧಿ ಆರೋಗ್ಯ ವಿಜ್ಞಾನ ವಿವಿಗೆ ಐಎಸ್ಒ 9001-2015 ಸರ್ಟಿಫಿಕೇಟ್ ದೊರೆತಿದೆ ಎಂದು ತಿಳಿಸಿದರು.