ನವದೆಹಲಿ, ಏ.10- ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಏ.12ರಂದು ಮಾರ್ಗದರ್ಶಿ(ಪಥಸೂಚಕ) ಉಪಗ್ರಹ (ನ್ಯಾವಿಗೇಷನ್ ಸ್ಯಾಟಲೈಟ್) ಉಡಾವಣೆಗೆ ಸಜ್ಜಾಗಿದೆ.
ಏ.12ರ ಗುರುವಾರ ಮಾರ್ಗದರ್ಶಿ ಉಪಗ್ರಹ ಐಆರ್‍ಎನ್‍ಎಸ್‍ಎಸ್-2 ಉಪಗ್ರಹ ಶ್ರೀಹರಿಕೋಟಾದಿಂದ ಪಿಎಸ್‍ಎಲ್‍ವಿ-ಸಿ41 ರಾಕೆಟ್ ಮೂಲಕ ಉಡಾವಣೆಯಾಗಲಿದೆ. ಇದಕ್ಕಾಗಿ ಸರ್ವ ಸಿದ್ಧತೆ ನಡೆದಿದೆ ಎಂದು ಇಸ್ರೋ ಅಧ್ಯಕ್ಷ ಡಾ.ಕೆ.ಶಿವನ್ ಹೇಳಿದ್ದಾರೆ.
ಈ ಹಿಂದೆ ಉಡಾವಣೆಯಾಗಿದ್ದ ಐಆರ್‍ಎನ್‍ಎಸ್‍ಎಸ್-1ಎ ಕಳೆದ ಎರಡು ವರ್ಷಗಳಿಂದ ತನ್ನ ಮೂರು ರುಬಿಡಿಯಂ ಅಣು ಗಡಿಯಾರಗಳ ಕಾರ್ಯನಿರ್ವಹಣೆಯನ್ನು ಸ್ಥಗಿತಗೊಳಿಸಿದೆ. ಈಗ ಉಡ್ಡಯನವಾಗಲಿರುವ ಐಆರ್‍ಎನ್‍ಎಸ್‍ಎಸ್-2, ಹಳೆಯ ಉಪಗ್ರಹವನ್ನು ಬದಲಿಸಲಿದೆ ಎಂದು ಡಾ.ಶಿವನ್ ಮಾಹಿತಿ ನೀಡಿದ್ದಾರೆ.
ಇಸ್ರೋ ತಂಡವು ಮಾರ್ಗದರ್ಶಿ ಉಪಗ್ರಹ ಉಡ್ಡಯನದ ಅಂತಿಮ ಹಂತಕ್ಕಾಗಿ ಸಕಲ ರೀತಿಯಲ್ಲಿ ಸಜ್ಜಾಗುತ್ತಿದೆ ಎಂದು ಡಾ. ಶಿವನ್ ವಿವರಿಸಿದ್ದಾರೆ.
ಹೊಸ ಶ್ರೇಣಿಯ ಮಾರ್ಗದರ್ಶಿ ಉಪಗ್ರಹ 600 ಕೆಜಿ(ಶುಷ್ಕ ಸಾಂದ್ರತೆ) ಹೊಂದಿದ್ದು, 10 ವರ್ಷಗಳ ಕಾರ್ಯನಿರ್ವಹಣೆ ಕ್ಷಮತೆ ಇದೆ. ಭಾರತೀಯ ಸಮೂಹದೊಂದಿಗೆ ಮಾರ್ಗದರ್ಶಿ ಯೋಜನೆ(ಐಆರ್‍ಎನ್‍ಎಸ್‍ಎಸ್) ಅಡಿ ಈ ಸಮೂಹಕ್ಕೆ ಸೇರಲಿರುವ ಎಂಟನೇ ಉಪಗ್ರಹವಾಗಲಿದೆ.
ಏಳು ದೇಶೀಯ ಉಪಗ್ರಹ ಮಾರ್ಗದರ್ಶಿ ವ್ಯವಸ್ಥೆಯು ಅಮೆರಿಕದ ಜಿಪಿಎಸ್‍ನ ಪುಟ್ಟ ನಮೂನೆ. ಈಗಾಗಲೇ ಇಂಥ 31 ಉಪಗ್ರಹಗಳು ಅಂತರಿಕ್ಷದಲ್ಲಿ ಕಾರ್ಯನಿರ್ವಹಿಸುತ್ತಿವೆ.
ಈ ದೇಸಿ ಜಿಪಿಎಸ್‍ನನ್ನು ಭಾರತ ಮತ್ತು ಅದರ ಸರಹದ್ದಿನ 1,500 ಕಿ.ಮೀ. ವ್ಯಾಪ್ತಿಯ ಪ್ರದೇಶದ ಬಳಕೆದಾರರಿಗೆ ನಿಖರ ಸ್ಥಾನ ಮಾಹಿತಿ ಒದಗಿಸಲು ವಿನ್ಯಾಸಗೊಳಿಸಲಾಗಿದೆ.
ಹಳೆಯ ಐಆರ್‍ಎನ್‍ಎಸ್‍ಎಸ್-1ಎ ಬದಲಾವಣೆಗೆ ಕಳೆದ ವರ್ಷ ಆಗಸ್ಟ್ 31ರಂದು ಇಸ್ರೋ ಉಡಾವಣೆ ಮಾಡಲು ಯತ್ನಿಸಿದ್ದ ಐಆರ್‍ಎನ್‍ಎಸ್‍ಎಸ್-1ಎಚ್ ವಿಫಲವಾಗಿತ್ತು.