ಬೆಂಗಳೂರು, ಏ.10-ಸರ್ಕಾರಿ ಕೆರೆ ಜಾಗದಲ್ಲಿ ಬೃಹತ್ ಆಂಜನೇಯ ಮೂರ್ತಿ ಪ್ರತಿಷ್ಠಾಪನೆ ವಿಚಾರದಲ್ಲಿ ಬಿಬಿಎಂಪಿ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಸೇರಿದಂತೆ 18 ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಕಾಚಾರಕನಹಳ್ಳಿ ಕೆರೆ ಭಾಗದಲ್ಲಿ ಅಕ್ರಮವಾಗಿ ಆಂಜನೇಯ ಮೂರ್ತಿ ಪ್ರತಿಪ್ಠಾಪನೆ ಮಾಡಲಾಗುತ್ತಿದೆ ಎಂದು ಸಹಾಯಕ ಆಯುಕ್ತರಾದ ಜಗದೀಶ್ ಅವರು ಪೆÇಲೀಸ್ ಠಾಣೆಗೆ ದೂರು ನೀಡಿದ್ದರು.
ಅಲ್ಲಿ ಶ್ರೀರಾಮ ಚೈತನ್ಯ ವರ್ಧಿನಿ ಟ್ರಸ್ಟ್ ಇದ್ದು ಪದ್ಮನಾಭರೆಡ್ಡಿ ಅವರು ಈ ಟ್ರಸ್ಟ್ಗೆ ಉಪಾಧ್ಯಕ್ಷರು. ಸರ್ಕಾರಿ ಕೆರೆ ಜಾಗ ಸರ್ವೆ ನಂಬರ್ 153ರಲ್ಲಿ ನಿಯಮ ಬಾಹಿರವಾಗಿ ಪದ್ಮನಾಭರೆಡ್ಡಿ ಪಕ್ಷದ ಕಾರ್ಯಕರ್ತರನ್ನು ಸೇರಿಸಿಕೊಂಡು ಆಂಜನೇಯ ಮೂರ್ತಿ ಪ್ರತಿಷ್ಠಾಪನೆ ಮಾಡಲು ಹೊರಟಿದ್ದರು.
ಈ ಮೂರ್ತಿ ಪ್ರತಿಷ್ಠಾಪನೆ ಮಾಡಲು ಮುಂದಾಗಿದ್ದ ಕೆರೆ ಜಾಗವನ್ನು ಯಥಾಸ್ಥಿತಿ ಕಾಪಾಡಿಕೊಳ್ಳಬೇಕೆಂದು ಕೋರ್ಟ್ ಆದೇಶಿಸಿತ್ತು.
ಆ ಜಾಗದಲ್ಲಿದ್ದ ಟ್ರಸ್ಟ್ನವರು ಕೋರ್ಟ್ ಆದೇಶವನ್ನು ಉಲ್ಲಂಘನೆ ಮಾಡಿ ಅಲ್ಲಿದ್ದ ರಾಜಕಾಲುವೆಯನ್ನು ಮುಚ್ಚಿ ಮೂರ್ತಿ ಪ್ರತಿಷ್ಠಾಪನೆ ಮಾಡಲು ಮುಂದಾಗಿದ್ದರು.
ಅದು ವಿವಾದಿತ ಪ್ರದೇಶ. ಅಲ್ಲಿ ಯಾವುದೇ ಕಾರಣಕ್ಕೂ ಆಂಜನೇಯ ಮೂರ್ತಿ ಪ್ರತಿಷ್ಠಾಪನೆ ಮಾಡಬಾರದು ಎಂದು ಪಾಲಿಕೆ ಅಧಿಕಾರಿಗಳು ಹೇಳಲು ಹೊದಾಗ ಟ್ರಸ್ಟ್ನವರು ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು. ಈ ಕುರಿತಂತೆ ಸಹಾಯಕ ಆಯುಕ್ತ ಜಗದೀಶ್ ಕೆ.ಜಿ.ಹಳ್ಳಿ ಠಾಣೆಗೆ ದೂರು ಕೊಟ್ಟಿದ್ದರು.
ಈ ದೂರಿನ ಆಧಾರದ ಮೇರೆಗೆ ಟ್ರಸ್ಟ್ ಮುಖ್ಯಸ್ಥರಾದ ಪದ್ಮನಾಭರೆಡ್ಡಿ, ಗೋಪಾಲರೆಡ್ಡಿ, ಎಂ.ಎನ್.ರೆಡ್ಡಿ ಸೇರಿದಂತೆ 18 ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಜೈಲಿಗೆ ಹೋಗಲು ಸಿದ್ಧ:
ಏಕಶಿಲಾ ಆಂಜನೇಯ ಮೂರ್ತಿ ಪ್ರತಿಷ್ಠಾಪನೆ ವಿಷಯದಲ್ಲಿ ನನ್ನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ನಾನು ಯಾವುದಕ್ಕೂ ಹೆದರುವುದಿಲ್ಲ. ಈ ವಿಚಾರವಾಗಿ ನಾನು ಜೈಲಿಗೆ ಹೋಗಲೂ ಸಿದ್ಧ ಎಂದು ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಪ್ರತಿಕ್ರಿಯಿಸಿದ್ದಾರೆ.
ಆಂಜನೇಯ ದೇವಸ್ಥಾನಕ್ಕೆ 700 ವರ್ಷಗಳ ಇತಿಹಾಸವಿದೆ. ಸಚಿವ ಕೆ.ಜೆ.ಜಾರ್ಜ್ ಅವರ ಷಡ್ಯಂತ್ರದಿಂದ ಮೂರ್ತಿ ಪ್ರತಿಷ್ಠಾಪನೆಗೆ ಅಡ್ಡಿಪಡಿಸಲಾಗುತ್ತಿದೆ. ರಾಜ್ಯ ಸರ್ಕಾರ ಕೂಡ ಹಿಂದೂ ವಿರೋಧಿ ಧೋರಣೆ ಅನುಸರಿಸುತ್ತಿದೆ. ನಾನು ಇದ್ಯಾವುದಕ್ಕೂ ಜಗ್ಗುವುದಿಲ್ಲ. ಆಂಜನೇಯ ಮೂರ್ತಿ ಪ್ರತಿಷ್ಠಾಪಿಸಿಯೇ ತೀರುತ್ತೇವೆ ಎಂದು ಹೇಳಿದರು.