ನವದೆಹಲಿ, ಏ.10-ಕಾಂಗ್ರೆಸ್ ಪಕ್ಷದ ಟಿಕೆಟ್ ಆಯ್ಕೆ ಕಸರತ್ತು ಮುಂದುವರೆದಿದೆ. ಅನಾರೋಗ್ಯ ಹಾಗೂ ವಯೋಮಾನದ ಕಾರಣ ಕೆಲವು ಶಾಸಕರನ್ನು ಹೊರತು ಪಡಿಸಿ ಬಹುತೇಕ ಹಾಲಿ ಶಾಸಕರಿಗೆ ಟಿಕೆಟ್ ನೀಡುವುದು ಖಚಿತವಾಗಿದೆ. ಅಲ್ಲದೆ ಜೆಡಿಎಸ್‍ನಿಂದ ಸೇರ್ಪಡೆಯಾಗಿರುವ ಏಳು ಬಂಡಾಯ ಶಾಸಕರು ಹಾಗೂ ಬಿಜೆಪಿಯಿಂದ ಸೇರ್ಪಡೆಯಾದ ಇಬ್ಬರು ಶಾಸಕರಿಗೆ ಟಿಕೆಟ್ ನೀಡುವುದು ನಿಶ್ಚಿತವಾಗಿದೆ.
ಮಂಡ್ಯದಲ್ಲಿ ಅಂಬರೀಶ್ ಅವರು ಹೇಳಿದವರಿಗೆ ಟಿಕೆಟ್ ಕೊಡಬೇಕೆಂದು ಸಭೆಯಲ್ಲಿ ಚರ್ಚೆಯಾಗಿರುವುದು ತಿಳಿದುಬಂದಿದೆ. ಅದೇ ರೀತಿ ದಾವಣಗೆರೆಯಲ್ಲಿ ಶಾಮನೂರು ಶಿವಶಂಕರಪ್ಪ ಅವರ ಬದಲಾಗಿ ಅವರ ಕುಟುಂಬದ ಮತ್ತೊಬ್ಬರಿಗೆ ಟಿಕೆಟ್ ನೀಡುವುದು ಸೂಕ್ತ ಎಂದು ತೀರ್ಮಾನಿಸಲಾಗಿದೆ.
ಬೇಲೂರಿನಲ್ಲಿ ವೈ.ಎನ್.ರುದ್ರೇಶ್‍ಗೌಡ ಅವರ ಸೋದರನನ್ನು ಕಣಕ್ಕಿಳಿಸುವುದರ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ. ಸಾಗರದಲ್ಲಿ ಕಾಗೋಡು ಅವರೇ ಕಣಕ್ಕಿಳಿಯುವ ಸಾಧ್ಯತೆ ಇದೆ.
ಬಾದಾಮಿಯಲ್ಲಿ ಬಿ.ಬಿ.ಚಿಮ್ಮನಕಟ್ಟಿ ಬದಲಾಗಿ ಬೇರೆಯವರನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ. ಹಾನಗಲ್ ಕ್ಷೇತ್ರದಲ್ಲಿ ಶಾಸಕ ಮನೋಹರ್ ತಹಶೀಲ್ದಾರ್ ಅವರ ಬದಲಾಗಿ ಅವರ ಕುಟುಂಬದ ಯಾರಾದರೊಬ್ಬರಿಗೆ ಟಿಕೆಟ್ ನೀಡುವ ಸಾಧ್ಯತೆ ಇದೆ.
ರಾಮಕೃಷ್ಣ ಅವರಿಗೂ ಟಿಕೆಟ್ ಸಿಗುವುದು ಅನುಮಾನ ವ್ಯಕ್ತವಾಗಿದೆ.
ಇದೇ ರೀತಿ ಸುಮಾರು 10 ರಿಂದ 12 ಕ್ಷೇತ್ರಗಳಲ್ಲಿ ಅನಾರೋಗ್ಯ ಹಾಗೂ ವಯೋಮಾನದ ಹಿನ್ನೆಲೆಯಲ್ಲಿ ಕೆಲ ಹಾಲಿ ಶಾಸಕರನ್ನು ಬದಲಾಯಿಸುವ ಸಾಧ್ಯತೆಯನ್ನು ಹೊರತುಪಡಿಸಿದರೆ ಬಹುತೇಕ ಹಾಲಿ ಶಾಸಕರಿಗೆ ಟಿಕೆಟ್ ಸಿಗುವ ಸಾಧ್ಯತೆ ಇದೆ.
ಎಚ್.ವೈ.ಮೇಟಿ, ಪರಮೇಶ್ವರ್ ನಾಯಕ್ ಅವರಿಗೆ ಟಿಕೆಟ್ ಕೈತಪ್ಪುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಈ ಇಬ್ಬರು ದೆಹಲಿಯಲ್ಲಿ ಲಾಬಿ ನಡೆಸುತ್ತಿದ್ದಾರೆ.
ಮಧುಸೂದನ್ ಮಿಸ್ತ್ರೀ, ಕೆ.ಸಿ. ವೇಣುಗೋಪಾಲ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಮಲ್ಲಿಕಾರ್ಜುನ್ ಖರ್ಗೆ, ಡಾ.ಜಿ.ಪರಮೇಶ್ವರ್ ಅವರ ನೇತೃತ್ವದಲ್ಲಿ ನಡೆದ 2ನೆ ಸುತ್ತಿನ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಯಾವುದೇ ರೀತಿ ಗೊಂದಲ, ಭಿನ್ನಾಭಿಪ್ರಾಯ ಉಂಟಾಗದಂತೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ವರಿಷ್ಠರು ತೀವ್ರ ಕಸರತ್ತು ನಡೆಸುತ್ತಿದ್ದಾರೆ. ಸೋತ ಕ್ಷೇತ್ರಗಳಲ್ಲಿ ಆಕಾಂಕ್ಷಿಗಳು ಹೆಚ್ಚಾಗಿರುವುದರಿಂದ ಅಭ್ಯರ್ಥಿಗಳನ್ನು ಅಖೈರು ಗೊಳಿಸುವುದು ತಲೆ ನೋವಾಗಿ ಪರಿಣಮಿಸಿದೆ.
ಕಳೆದ ಬಾರಿ ಕಡಿಮೆ ಅಂತರದಲ್ಲಿ ಅಂದರೆ 500 ರಿಂದ 5 ಸಾವಿರ ಮತಗಳಿಂದ ಸೋತವರಿಗೆ ಟಿಕೆಟ್ ನೀಡುವ ಮಾನದಂಡವನ್ನೂ ಕೂಡ ರೂಪಿಸಿಕೊಳ್ಳಲಾಗಿದೆ.
ಇಂದು ಸಂಜೆಯೊಳಗೆ ಒಂದು ಹಂತದ ಅಭ್ಯರ್ಥಿಗಳ ಆಯ್ಕೆಯ ತೀರ್ಮಾನ ಹೊರಬೀಳುವ ಸಾಧ್ಯತೆ ಇದೆ. ಸುಮಾರು 140 ಅಭ್ಯರ್ಥಿಗಳ ಆಯ್ಕೆಯನ್ನು ಕಾಂಗ್ರೆಸ್ ಮಾಡಲಿದೆ.
ಏ.15ರೊಳಗೆ ಎರಡನೇ ಹಂತದ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಬಹುತೇಕ ಆಕಾಂಕ್ಷಿಗಳು ದೆಹಲಿಯಲ್ಲಿ ಬೀಡುಬಿಟ್ಟಿದ್ದು, ಟಿಕೆಟ್ ಪಡೆಯಲು ಕೊನೆ ಕ್ಷಣದ ಕಸರತ್ತು ನಡೆಸುತ್ತಿದ್ದಾರೆ.