ಬೆಂಗಳೂರು, ಏ.10-ಮನೆ ಬಳಿ ಹೋಗುತ್ತಿದ್ದ ಮಹಿಳೆಯ ಹಿಂಬಾಲಿಸಿ ಬಂದ ಸರಗಳ್ಳ ಅವರ ಕೊರಳಲ್ಲಿದ್ದ ಸರದ ಪೈಕಿ 20 ಗ್ರಾಂ ಸರದ ತುಂಡಿನೊಂದಿಗೆ ಪರಾರಿಯಾಗಿರುವ ಘಟನೆ ಜಾಲಹಳ್ಳಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮುತ್ಯಾಲನಗರದ ಎಂಇಎಸ್ ರಸ್ತೆ ನಿವಾಸಿ ರೇವತಿ ಎಂಬುವರು ನಿನ್ನೆ ಸಂಜೆ ಹೊರಗೆ ಹೋಗಿ ರಾತ್ರಿ 9.30ರಲ್ಲಿ ಮನೆಗೆ ಹಿಂದಿರುಗುತ್ತಿದ್ದರು.
ಇನ್ನೇನು ಮನೆಯ ಗೇಟ್ ತೆಗೆಯಬೇಕೆನ್ನುವಷ್ಟರಲ್ಲಿ ಇವರನ್ನು ಹಿಂಬಾಲಿಸಿ ಬಂದ ಸರಗಳ್ಳ ಕೊರಳಿಗೆ ಕೈ ಹಾಕಿ ಸರ ಎಗರಿಸಲು ಮುಂದಾಗಿದ್ದಾನೆ.
ತಕ್ಷಣ ಎಚ್ಚೆತ್ತುಕೊಂಡ ರೇವತಿ ಅವರು ಸರವನ್ನು ಬಿಗಿಯಾಗಿ ಹಿಡಿದುಕೊಂಡು ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ.
ಆದರೂ ಬಿಡದ ಸರಗಳ್ಳ ಬಲವಾಗಿ ಸರ ಎಳೆದಿದ್ದು, ಸರ ತುಂಡಾಗಿ 20 ಗ್ರಾಂ ಸರದ ತುಂಡು ಕೈಸೇರುತ್ತಿದ್ದಂತೆ ಸ್ವಲ್ಪ ದೂರ ಬೈಕ್ ನಿಲ್ಲಿಸಿಕೊಂಡು ಕಾಯುತ್ತಿದ್ದ ಮತ್ತೊಬ್ಬನೊಂದಿಗೆ ಪರಾರಿಯಾಗಿದ್ದಾನೆ.
ನೆರೆಹೊರೆಯವರು ಸಹಾಯಕ್ಕಾಗಿ ಬರುವಷ್ಟರಲ್ಲಿ ಸರಗಳ್ಳರು ಪರಾರಿಯಾಗಿದ್ದರು.
ಜಾಲಹಳ್ಳಿ ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ಸರಗಳ್ಳರ ಬೇಟೆಗೆ ಮುಂದಾಗಿದ್ದಾರೆ.