ನವದೆಹಲಿ, ಏ.9- ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ಸಂಬಂಧ ತಮಿಳುನಾಡು ಮನವಿಯನ್ನು ತಳ್ಳಿ ಹಾಕಿರುವ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರ ಸ್ಕೀಂ ರಚನೆ ಮಾಡಬೇಕಿದೆ. ಅದರನ್ವಯ ನೀರು ಹಂಚಿಕೆ ಆಗಲಿದೆ ಎಂದು ಪರೋಕ್ಷವಾಗಿ ಮಂಡಳಿ ಸ್ಥಾಪನೆ ಸಾಧ್ಯತೆಯನ್ನು ತಳ್ಳಿಹಾಕಿದೆ.
ಕಾವೇರಿ ವಿವಾದದಲ್ಲಿ ನ್ಯಾಯಾಲಯದ ತೀರ್ಪು ಪಾಲನೆಗಾಗಿ ಸ್ಕೀಂ ರಚಿಸಲು ಕೇಂದ್ರ ಸರ್ಕಾರಕ್ಕೆ ಸೂಚಿಸಿದ್ದೇವೆ. ಮೇ 3ರೊಳಗೆ ಸ್ಕೀಂನ ಸ್ವರೂಪದ ಕರಡು ಪ್ರತಿ ಸಲ್ಲಿಸಬೇಕಾಗಿದೆ. ಪ್ರತಿ ಬಾರಿ ಸುಪ್ರೀಂಕೋರ್ಟ್ ವಿವಾದ ಬಗೆಹರಿಸಲು ಸಾಧ್ಯವಿಲ್ಲ. ಅದಕ್ಕಾಗಿಯೇ ತೀರ್ಪು ನೀಡಿ ಸ್ಕೀಂ ರಚನೆಗೆ ಸೂಚಿಸಲಾಗಿದೆ. ಕೇಂದ್ರ ಸರ್ಕಾರ ಕೂಡಲೇ ಸ್ಕೀಂ ರಚನೆಯ ಕರಡು ತಯಾರಿಸಬೇಕು ಎಂದು ನ್ಯಾಯಾಲಯ ಹೇಳಿದೆ.
ಇದು ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಜವಾಬ್ದಾರಿ. ಈ ಆದೇಶವನ್ನು ಕೇಂದ್ರ ಜಾರಿಗೊಳಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ.
ತಮಿಳುನಾಡು, ಕರ್ನಾಟಕ ಮತ್ತು ಇತರ ರಾಜ್ಯಗಳು ಈ ವಿಷಯದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡಬೇಕು ಎಂದು ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.
ಕಾವೇರಿ ನೀರು ವಿವಾದ ನ್ಯಾಯಮಂಡಳಿ (ಸಿಡಬ್ಲ್ಯೂಡಿಟಿ) ತೀರ್ಪನ್ನು ಸುಪ್ರೀಂಕೋರ್ಟ್ ಪರಿಗಣಿಸಿದೆ ಮತ್ತು ಅದರ ಆಧಾರದ ಮೇಲೆಯೇ ನೀರು ಹಂಚಿಕೆ ಮಾಡುವ ನಿರ್ಧಾರ ಕೈಗೊಂಡಿದೆ. ಸ್ಕೀಂ (ಯೋಜನೆ) ಕುರಿತು ಕೇಂದ್ರ ಸರ್ಕಾರ ಕರಡು ಪ್ರತಿಯನ್ನು ಮೇ 3ರೊಳಗೆ ಸಲ್ಲಿಸಬೇಕು. ಆನಂತರ ಈ ಕುರಿತು ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿತು.
ಕಾವೇರಿ ನದಿ ನಿರ್ವಹಣಾ ಮಂಡಳಿ ರಚನೆ ಕುರಿತು ಫೆ.19ರಂದು ನೀಡಿರುವ ತೀರ್ಪಿನ ಬಗ್ಗೆ ಸ್ಪಷ್ಟೀಕರಣ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂಕೋರ್ಟ್ ಏ.3ರಂದು ಅಂಗೀಕರಿಸಿತ್ತು.
ಕಾವೇರಿ ನಿರ್ವಹಣಾ ಮಂಡಳಿ ರಚನೆ ಮತ್ತು ಯೋಜನೆ ಅನುಷ್ಠಾನ ವಿಷಯಕ್ಕೆ ಸಂಬಂಧಪಟ್ಟಂತೆ ನಾಲ್ಕೂ ರಾಜ್ಯಗಳಲ್ಲಿ ವಿಭಿನ್ನ ನಿಲುವು ಮತ್ತು ಅಭಿಪ್ರಾಯಗಳಿವೆ. ಹೀಗಾಗಿ ಈ ಬಗ್ಗೆ ಸ್ಪಷ್ಟೀಕರಣದ ಅಗತ್ಯವಿದೆ ಎಂದು ಕೋರಿ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ಗೆ ಮನವಿ ಸಲ್ಲಿಸಿತ್ತು.
ಕಾವೇರಿ ನಿರ್ವಹಣಾ ಮಂಡಳಿ ರಚಿಸಿಲ್ಲ ಎಂಬ ಕಾರಣಕ್ಕಾಗಿ ಕೇಂದ್ರ ಸರ್ಕಾರದ ವಿರುದ್ಧ ತಮಿಳುನಾಡು ಸರ್ಕಾರ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ಕೂಡ ಇದೇ ದಿನ ಸುಪ್ರೀಂಕೋರ್ಟ್ನಲ್ಲಿ ನಡೆಯಿತು. ಶತಮಾನದಷ್ಟು ಹಳೆಯದಾದ ಕಾವೇರಿ ವಿವಾದ ಕುರಿತು ತಾನು ನೀಡಿರುವ 465 ಪುಟಗಳ ತೀರ್ಪಿಗೆ ಅನುಗುಣವಾಗಿ ಯೋಜನೆಯೊಂದನ್ನು ರೂಪಿಸುವಂತೆ ಕೇಂದ್ರಕ್ಕೆ ಸುಪ್ರೀಂಕೋರ್ಟ್ ತನ್ನ ವರದಿಯಲ್ಲಿ ಈಗಾಗಲೇ ತಿಳಿಸಿದೆ.
ಕಾವೇರಿ ಜಲ ವಿವಾದಗಳ ನ್ಯಾಯಾಧಿಕರಣದ 2007ರಲ್ಲಿ ನೀಡಿದ್ದ ಆದೇಶವನ್ನು ಅದು ಮಾರ್ಪಡಿಸಿದ್ದು, ಯಾವುದೇ ಕಾರಣಕ್ಕೂ ಕಾಲವನ್ನು ವಿಸ್ತರಿಸುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು.
ಫೆ.16ರಂದು ತನ್ನ ತೀರ್ಪಿನಲ್ಲಿ ಸುಪ್ರೀಂಕೋರ್ಟ್, ಕರ್ನಾಟಕಕ್ಕೆ ಕಾವೇರಿ ನೀರಿನ ಪಾಲನ್ನು 270 ಟಿಎಂಸಿ ಅಡಿಗಳಿಗೆ ಹೆಚ್ಚಿಸಿತ್ತು(14.75 ಟಿಎಂಸಿ ಹೆಚ್ಚುವರಿ) ಹಾಗೂ ನದಿ ಪಾತ್ರದಿಂದ 10 ಟಿಎಂಸಿ ಅಡಿ ಅಂತರ್ಜಲ ಬಳಸಿಕೊಳ್ಳಲು ಅವಕಾಶ ನೀಡಿ ತಮಿಳುನಾಡಿನ ಪಾಲಿನಲ್ಲಿ ಕಡಿಮೆ ಮಾಡಿತ್ತು.
ಸುಪ್ರೀಂಕೋರ್ಟ್ ತೀರ್ಪಿನೊಂದಿಗೆ ತಮಿಳುನಾಡು, ಕರ್ನಾಟಕ, ಕೇರಳ ಮತ್ತು ಕೇಂದ್ರಾಡಳಿತ ಪ್ರದೇಶ ಪಾಂಡಿಚೇರಿಯು ಒಟ್ಟು 740 ಟಿಎಂಸಿ ಅಡಿಯಲ್ಲಿ ವರ್ಷಕ್ಕೆ ಅನುಕ್ರಮವಾಗಿ 404.25 ಟಿಎಂಸಿ ಅಡಿ, 284.75, 30 ಹಾಗೂ 7 ಟಿಎಂಸಿ ಅಡಿಗಳಷ್ಟು ನೀರನ್ನು ಹೊಂದಲಿವೆ.
ಸ್ಕೀಂ ಎಂದರೆ ಮಂಡಳಿಯಲ್ಲ: ಕಾವೇರಿ ವಿವಾದದಲ್ಲಿ ವಿಚಾರಣೆ ನಡೆಸಿದ ನ್ಯಾಯಾಧಿಕರಣ ನೀರು ನಿರ್ವಹಣಾ ಮಂಡಳಿ ರಚಿಸುವಂತೆ ತೀರ್ಪಿನಲ್ಲಿ ಸೂಚನೆ ನೀಡಿತ್ತು. ಆದರೆ, ತಮಿಳುನಾಡು ಮತ್ತು ಕರ್ನಾಟಕ ಸರ್ಕಾರಗಳು ಸಲ್ಲಿಸಿದ್ದ ತಕರಾರು ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮಂಡಳಿ ಬದಲಾಗಿ ಸ್ಕೀಂ ಮಾಡುವಂತೆ ಸೂಚನೆ ನೀಡಿದೆ.
ಸ್ಕೀಂ ಎಂದರೆ ನೀರು ನಿರ್ವಹಣಾ ಮಂಡಳಿ ಅಲ್ಲ. ನೀರು ಹಂಚಿಕೆ ಕುರಿತು ನಿರ್ಣಯ ತೆಗೆದುಕೊಳ್ಳಲು ಮತ್ತು ಕಾಲಕಾಲಕ್ಕೆ ಜಲಾಶಯಗಳ ಸ್ಥಿತಿಗತಿಗಳ ಮೇಲೆ ನಿಗಾ ವಹಿಸಲು ನಾಲ್ಕೂ ರಾಜ್ಯಗಳನ್ನೊಳಗೊಂಡು ಕೇಂದ್ರ ಜಲ ಆಯೋಗದ ಪ್ರಮುಖರನ್ನು ಒಳಗೊಂಡ ಸಮಿತಿಯ ರಚನೆ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.