ಬೆಂಗಳೂರು, ಏ.9- ಬಿಜೆಪಿ ಟಿಕೆಟ್ ವಂಚಿತ ಎನ್.ಆರ್.ರಮೇಶ್ ಅವರಿಗೆ ಜೆಡಿಎಸ್ ಗಾಳ ಹಾಕಿದೆ.
ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ ಟಿಕೆಟ್ ಆಕಾಂಕ್ಷಿಯಾಗಿದ್ದ ಬಿಜೆಪಿ ವಕ್ತಾರ ಎನ್.ಆರ್.ರಮೇಶ್ ಅವರಿಗೆ ಟಿಕೆಟ್ ಕೈತಪ್ಪಿರುವ ಹಿನ್ನೆಲೆಯಲ್ಲಿ ಅವರನ್ನು ಜೆಡಿಎಸ್ ತನ್ನತ್ತ ಸೆಳೆಯಲು ಪ್ರಯತ್ನ ನಡೆಸಿದೆ.
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಎನ್.ಆರ್.ರಮೇಶ್ ಅವರ ಬಗ್ಗೆ ಮಾಹಿತಿ ತರಿಸಿಕೊಂಡಿದ್ದು, ಅವರು ಈವರೆಗೆ ಜೆಡಿಎಸ್ ವಿರುದ್ಧವಾಗಲಿ, ತಮ್ಮ ಹಾಗೂ ದೇವೇಗೌಡರ ವಿರುದ್ಧವಾಗಲಿ ಯಾವುದೇ ಆರೋಪ ಮಾಡಿಲ್ಲ. ಈವರೆಗೂ ಅವರು ಮಾಡಿರುವ ಆರೋಪಗಳೆಲ್ಲ ಕಾಂಗ್ರೆಸ್ ವಿರುದ್ಧ. ಹಾಗಾಗಿ ಅವರು ಜೆಡಿಎಸ್ ಸೇರುವುದಾದರೆ ಮುಕ್ತ ಅವಕಾಶ ಕಲ್ಪಿಸುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.
ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 60 ಸಾವಿರದಷ್ಟು ಅಲ್ಪಸಂಖ್ಯಾತ ಮತಗಳಿದ್ದು, ನಾಲ್ಕು ವಾರ್ಡ್‍ಗಳಲ್ಲಿ ಒಕ್ಕಲಿಗರ ಪ್ರಾಬಲ್ಯವಿದ್ದು, ಆ ಮತಗಳು ನಿರ್ಣಾಯಕವಾಗಲಿರುವ ಹಿನ್ನೆಲೆಯಲ್ಲಿ ಚಿಕ್ಕಪೇಟೆಯಲ್ಲಿ ಪ್ರಭಾವಿಯಾಗಿರುವ ರಮೇಶ್ ಅವರನ್ನು ಜೆಡಿಎಸ್‍ನತ್ತ ಸೆಳೆದರೆ, ಈ ಮತಗಳನ್ನು ಕ್ರೋಢೀಕರಿಸಿ ಜೆಡಿಎಸ್ ಈ ಕ್ಷೇತ್ರವನ್ನು ತನ್ನದಾಗಿಸಿಕೊಳ್ಳಬಹುದು ಎಂಬ ಲೆಕ್ಕಾಚಾರ ಕುಮಾರಸ್ವಾಮಿ ಅವರದ್ದಾಗಿದೆ. ಹೀಗಾಗಿ ಎನ್.ಆರ್.ರಮೇಶ್ ಅವರಿಗೆ ಗಾಳ ಹಾಕಿದೆ ಎಂದು ತಿಳಿದುಬಂದಿದೆ.