![download (3)](http://kannada.vartamitra.com/wp-content/uploads/2018/04/download-3-6-509x381.jpg)
ಔರಂಗಾಬಾದ್, ಏ.9-ಕರ್ನಾಟಕ ಸರ್ಕಾರ ಲಿಂಗಾಯತ ಸಮುದಾಯಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ಮಂಜೂರು ಮಾಡಿದ ನಂತರ, ತಮಗೆ ಸಂವಿಧಾನಿಕ ಮಾನ್ಯತೆ ನೀಡುವಂತೆ ಮಹಾರಾಷ್ಟ್ರದ ಲಿಂಗಾಯತರು ಬೃಹತ್ ರ್ಯಾಲಿ ನಡೆಸಿ ಒತ್ತಾಯಿಸಿದ್ದಾರೆ.
ಮಹಾರಾಷ್ಟ್ರದಲ್ಲಿನ ಅಲ್ ಇಂಡಿಯಾ ಲಿಂಗಾಯತ್ ಕೋ-ಆರ್ಡಿನೇಷನ್ ಕಮಿಟಿ ಸದಸ್ಯರು ನಿನ್ನೆ ಔರಂಗಾಬಾದ್ ವಿಭಾಗೀಯ ಆಯುಕ್ತರ ಕಚೇರಿ ಮುಂದೆ ಧರಣಿ ನಡೆಸಿ ತಮ್ಮ ಸಮುದಾಯಕ್ಕೂ ಪ್ರತ್ಯೇಕ ಧಾರ್ಮಿಕ ಸ್ತಾನಮಾನ ನೀಡಬೇಕೆಂದು ಆಗ್ರಹಿಸಿದರು.
ಕ್ರಾಂತಿಯೋಗಿ ಬಸವಣ್ಣರ ಚಿತ್ರಗಳೊಂದಿಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡ ಅಸಂಖ್ಯಾತ ಮಂದಿ ಲಿಂಗಾಯತ ಸಮುದಾಯವನ್ನು ಧಾರ್ಮಿಕ ಅಲ್ಪಸಂಖ್ಯಾತ ಸಮೂಹವನ್ನಾಗಿ ರಾಷ್ಟ್ರಮಟ್ಟದಲ್ಲಿ ಮಾನ್ಯತೆ ನೀಡಬೇಕೆಂದು ಆಗ್ರಹಿಸಿದರು.
103 ವರ್ಷಗಳ ಶತಾಯುಷಿ ಶಿವಲಿಂಗ ಶಿವಾಚಾರ್ಯ ಮಹಾರಾಜ್ ಅವರ ನೇತೃತ್ವದಲ್ಲಿ ನಡೆದ ಈ ಮಹಾಮೋರ್ಚಾ ರ್ಯಾಲಿಯಲ್ಲಿ ಮಹಾರಾಷ್ಟ್ರ ಅಲ್ಲದೇ ದೇಶದ ಇತರ ಹಲವು ರಾಜ್ಯಗಳ ಲಿಂಗಾಯತ ಸಮುದಾಯದ ಹಲವಾರು ಧಾರ್ಮಿಕ ಮತ್ತು ಆಧ್ಯಾತ್ಮಿಕ ಗುರುಗಳು ಹಾಗೂ ನಾಯಕರು ಭಾಗವಹಿಸಿದ್ದರು.
ಸರ್ಕಾರವು ಲಿಂಗಾಯತ ಸಮುದಾಯಕ್ಕೆ ಸ್ವತಂತ್ರ ಧಾರ್ಮಿಕ ಸ್ಥಾನಮಾನ ನೀಡುವ ತನಕ ಇಂಥ ರ್ಯಾಲಿಗಳು ಮುಂದುವರಿಯಲಿದೆ ಎಂದು ಶಿವಲಿಂಗ ಶಿವಾಚಾರ್ಯ ಮಹಾರಾಜ್ ತಿಳಿಸಿದರು. ಲಿಂಗಾಯತ ಸಮುದಾಯವು ದೇಶದ ಅತ್ಯಂತ ಹಳೆಯ ಧರ್ಮಗಳಲ್ಲಿ ಒಂದು. ಮಹಾರಾಷ್ಟ್ರದಲ್ಲೇ ನಾಲ್ಕು ಕೋಟಿ ಲಿಂಗಾಯತರು ಮತ್ತು ಅನುಯಾಯಿಗಳು ಇದ್ದಾರೆ. ನಮ್ಮ ಧರ್ಮಕ್ಕೆ ಪ್ರತ್ಯೇಕ ಸ್ಥಾನಮಾನ ನೀಡಲೇಬೇಕು ಎಂದು ಶತಾಯುಷಿ ಆಗ್ರಹಿಸಿದರು.