ಮುಂದುವರಿದ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಕಸರತ್ತು

 

ಬೆಂಗಳೂರು, ಏ.9- ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಕಸರತ್ತು ಮುಂದುವರಿದಿದೆ. ನವದೆಹಲಿಯಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಅಭ್ಯರ್ಥಿಗಳ ಆಯ್ಕೆ ಸಂಬಂಧ ವರಿಷ್ಠರ ಮಹತ್ವದ ಸಭೆ ನಡೆಯಲಿರುವುದರಿಂದ ಕಾಂಗ್ರೆಸ್ ರಾಜಕಾರಣ ದೆಹಲಿಗೆ ಶಿಫ್ಟ್ ಆಗಿದೆ.

ಚುನಾವಣೆಗೆ ಕೇವಲ 32 ದಿನಗಳಷ್ಟೇ ಬಾಕಿ ಇದೆ. ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಇನ್ನೂ ಆಖೈರುಗೊಂಡಿಲ್ಲ. ಇನ್ನೆರಡು ದಿನಗಳಲ್ಲಿ ಮೊದಲ ಹಂತದ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಈಗಾಗಲೇ ಅಭ್ಯರ್ಥಿ ಆಯ್ಕೆ ಸಂಬಂಧ ಬೆಂಗಳೂರಿನಲ್ಲಿ ಮೂರು ಹಂತದ ಸಭೆ ನಡೆಸಿ ಸಂಭಾವ್ಯ ಪಟ್ಟಿ ಸಿದ್ಧಪಡಿಸಿ ರಾಜ್ಯ ನಾಯಕರು ಹೈಕಮಾಂಡ್‍ಗೆ ರವಾನಿಸಿದ್ದು, ಎಐಸಿಸಿ ಪ್ರಧಾನ ಕಾರ್ಯದರ್ಶಿ, ಪರಿಶೀಲನಾ ಸಮಿತಿ ಮುಖಂಡರೂ ಆಗಿರುವ ಮಧುಸೂದನ್ ಮಿಸ್ತ್ರಿ ನೇತೃತ್ವದಲ್ಲಿ ಇಂದಿನಿಂದ ಅಭ್ಯರ್ಥಿಗಳ ಆಯ್ಕೆ ಸಂಬಂಧ ಸಭೆ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಾ.ಜಿ.ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್, ವೇಣುಗೋಪಾಲ್ ಸೇರಿದಂತೆ ಎಲ್ಲರೂ ದೆಹಲಿಗೆ ತೆರಳಿದ್ದಾರೆ.

ಟಿಕೆಟ್ ಆಕಾಂಕ್ಷಿಗಳೂ ಕೂಡ ದೆಹಲಿಗೆ ದೌಡಾಯಿಸಿದ್ದು, ತಮ್ಮ ನಾಯಕರುಗಳ ಮೂಲಕ ಟಿಕೆಟ್ ಪಡೆಯಲು ಕೊನೆ ಹಂತದ ಕಸರತ್ತು ಮುಂದುವರಿಸಿದ್ದಾರೆ.

ಹಾಲಿ ಶಾಸಕರಿಗೆ, ಏಳು ಜೆಡಿಎಸ್ ಬಂಡಾಯ ಶಾಸಕರಿಗೆ, ಬೇರೆ ಪಕ್ಷದಿಂದ ಬಂದವರಿಗೆ ಕಡಿಮೆ ಮತಗಳ ಅಂತರದಲ್ಲಿ ಸೋತು ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರಿಗೆ ಹಾಗೂ ಯುವಕರಿಗೆ ಟಿಕೆಟ್ ನೀಡುವುದು, ಗೆಲುವನ್ನು ಮಾನದಂಡವನ್ನಾಗಿರಿಸಿಕೊಂಡು ಅಭ್ಯರ್ಥಿಗಳಿಗೆ ಆದ್ಯತೆ ನೀಡುವುದು, ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲೇಬೇಕೆಂಬ ನಿಟ್ಟಿನಲ್ಲಿ ಹಲವು ಮಹತ್ವದ ವಿಷಯಗಳು ಚರ್ಚೆಯಾಗಿದ್ದು, ಈಗ ಎಲ್ಲವೂ ದೆಹಲಿಗೆ ಶಿಫ್ಟ್ ಆಗಿವೆ.

ಇಂದಿನಿಂದ ಮೂರು ದಿನಗಳ ಕಾಲ ದೆಹಲಿಯಲ್ಲಿ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಸಮಗ್ರ ಚರ್ಚೆ ನಡೆಯಲಿದ್ದು, ಹಂತ ಹಂತವಾಗಿ ಅಭ್ಯರ್ಥಿಗಳ ಆಯ್ಕೆ ಪಟ್ಟಿ ಬಿಡುಗಡೆಯಾಗಲಿದೆ. ಈಗಾಗಲೇ ಬಿಜೆಪಿಯಲ್ಲಿ 72 ಮಂದಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದ್ದು, ಆರಂಭದಲ್ಲೇ ಬಂಡಾಯ ಎದುರಾಗಿದೆ. ಹೀಗಾಗದಂತೆ ಕಾಂಗ್ರೆಸ್ ಎಚ್ಚರಿಕೆ ವಹಿಸಿದ್ದು, ಯಾವುದೇ ಗೊಂದಲವಿಲ್ಲದಂತೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕೆಂದು ತಮ್ಮ ಕಸರತ್ತು ಮುಂದುವರಿಸಿದ್ದಾರೆ.

ಅನಾರೋಗ್ಯವಿರುವ ಕಾರಣ ಹಲವು ಕ್ಷೇತ್ರಗಳಲ್ಲಿ ಹಾಲಿ ಶಾಸಕರಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆಯಿದ್ದು, ಆ ಕ್ಷೇತ್ರಗಳಲ್ಲಿ ಅವರ ಸಂಬಂಧಿಕರಿಗೆ ಅಥವಾ ಅವರು ಹೇಳುವವರಿಗೆ ಟಿಕೆಟ್ ನೀಡಲು ನಿರ್ಧರಿಸಲಾಗಿದೆ.
ಒಟ್ಟಾರೆ ಎರಡು-ಮೂರು ದಿನಗಳಲ್ಲಿ ಕಾಂಗ್ರೆಸ್ ಟಿಕೆಟ್ ಫೈನಲ್ ಆಗುವ ಸಾಧ್ಯತೆ ಇದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ