ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಎದೆಯಲ್ಲಿ ಡವಡವ

ಬೆಂಗಳೂರು,ಏ.9- ಮೊದಲ ಪಟ್ಟಿಯಲ್ಲೇ ಟಿಕೆಟ್ ಸಿಕ್ಕೇ ಸಿಗುತ್ತದೆ ಎಂಬ ಅತಿಯಾದ ಆತ್ಮವಿಶ್ವಾಸದಲ್ಲಿದ್ದ ಆಕಾಂಕ್ಷಿಗಳಿಗೆ ಈಗ ಆತಂಕ ಎದುರಾಗಿದೆ.
ಬಿಜೆಪಿ ಬಿಡುಗಡೆ ಮಾಡಿರುವ ಮೊದಲ ಪಟ್ಟಿಯಲ್ಲಿ 72 ಅಭ್ಯರ್ಥಿಗಳ ಹೆಸರನ್ನು ಮಾತ್ರ ಅಖೈರುಗೊಳಿಸಲಾಗಿದೆ. ಇದರಿಂದ ಸಹಜವಾಗಿ ಆಕಾಂಕ್ಷಿಗಳ ಎದೆಯಲ್ಲಿ ಡವಡವ ಕಾಡುತ್ತಿದೆ.

ಟಿಕೆಟ್ ಸಿಗುತ್ತದೆಯೋ ಇಲ್ಲವೋ ಎಂದು ಕೈ ಕೈ ಹಿಸುಕಿಕೊಳ್ಳುತ್ತಿರುವ ಅಭ್ಯರ್ಥಿಗಳು ಒಂದು ರೀತಿ ನೀರಿನಿಂದ ಹೊರಬಿದ್ದ ಮೀನಿನಂತೆ ವಿಲ ವಿಲ ಚಡಪಡಿಸುತ್ತಿದ್ದಾರೆ.
ಟಿಕೆಟ್ ಸಿಕ್ಕರೆ ಸಮಸ್ಯೆಯಿಲ್ಲ. ಆದರೆ ಕೊನೆ ಕ್ಷಣದಲ್ಲಿ ಕೈ ತಪ್ಪಿದರೆ ಬೇರೆ ರಾಜಕೀಯ ಪಕ್ಷಕ್ಕೆ ಸೇರಬೇಕೆ ಇಲ್ಲವೇ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಬೇಕೇ ಅಥವಾ ತಟಸ್ಥರಾಗಿಯೇ ಇರಬೇಕೆ ಎಂಬ ಜಿಜ್ಞಾಸೆಯಲ್ಲಿದ್ದಾರೆ.

ಈ ಮೊದಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮೊದಲ ಕಂತಿನಲ್ಲಿ 140 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿದ್ದರು.
ಇದರಿಂದ ಸಹಜವಾಗಿ ಅಭ್ಯರ್ಥಿಗಳು ತಮಗೆ ಟಿಕೆಟ್ ಸಿಕ್ಕೇ ಸಿಗುತ್ತದೆ. ಶುಭ ಮುಹೂರ್ತದಂದು ನಾಮಪತ್ರ ಸಲ್ಲಿಸೋಣ ಎಂಬ ಲೆಕ್ಕಾಚಾರ ಹಾಕಿಕೊಂಡಿದ್ದರು.

ಸಾಲದ್ದಕ್ಕೆ ತಮ್ಮ ಆಪ್ತ ಜ್ಯೋತಿಷಿಗಳ ಸಲಹೆ ಪಡೆದು ಯಾವ ದಿನಾಂಕದಂದು ಯಾವ ಸಮಯದಲ್ಲಿ ಎಷ್ಟು ನಿಮಿಷಕ್ಕೆ ನಾಮಪತ್ರ ಸಲ್ಲಿಸಬೇಕೆಂಬ ಸಲಹೆಯನ್ನು ಪಡೆದಿದ್ದರು.
ಆದರೆ ಇದೀಗ ಎಲ್ಲ ಲೆಕ್ಕಾಚಾರಗಳು ಉಲ್ಟಾಪಲ್ಟಾ ಆಗಿರುವುದರಿಂದ ಟಿಕೆಟ್ ಕೈ ತಪ್ಪುತ್ತದೆಯೋ ಎಂಬ ಆತಂಕ ಎಲ್ಲರಲ್ಲೂ ಮನೆ ಮಾಡಿದೆ.
ಕೆಲವು ಕ್ಷೇತ್ರಗಳಲ್ಲಿ ಆಕಾಂಕ್ಷಿಗಳ ಪಟ್ಟಿ ಹೆಚ್ಚಿರುವುದರಿಂದ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಟ್ಟಿ ಬಿಡುಗಡೆ ಮಾಡಲು ವರಿಷ್ಠರು ತೀರ್ಮಾನಿಸಿದ್ದಾರೆ.

ಪ್ರಾರಂಭದಲ್ಲೇ ಭಿನ್ನಮತಕ್ಕೆ ಅವಕಾಶ ನೀಡಿದರೆ ಪಕ್ಷಕ್ಕೆ ಹಾನಿಯಾಗುತ್ತದೆ ಎಂಬ ಎಚ್ಚರಿಕೆ ಹಿನ್ನೆಲೆಯಲ್ಲಿ ಕೇಂದ್ರ ವರಿಷ್ಠರು ಎಚ್ಚರಿಕೆಯ ಹೆಜ್ಜೆ ಇಟ್ಟಿದ್ದಾರೆ.
ಇನ್ನು ನಾಲ್ಕೈದು ದಿನ ಕಾದು ನೋಡಿ ಅನ್ಯ ಪಕ್ಷಗಳಿಂದ ಕೆಲವುನಿರೀಕ್ಷಿತರು ಬಂದರೆ ಅಂಥವರಿಗೆ ಟಿಕೆಟ್ ನೀಡಬೇಕಾಗುತ್ತದೆ ಎಂಬ ಕಾರಣಕ್ಕೆ ಕೆಲವು ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿಲ್ಲ.

ತಮಗೆ ಮೊದಲ ಪಟ್ಟಿಯಲ್ಲೇ ಟಿಕೆಟ್ ಸಿಗುತ್ತದೆ ಎಂದು ಕಾತರರಾಗಿದ್ದ ಮಾಜಿ ಸಚಿವರಾದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಮುರುಗೇಶ್ ನಿರಾನಿ, ಎಂ.ಪಿ.ರೇಣುಕಾಚಾರ್ಯ, ಕೃಷ್ಣ ಪಾಲೇಮರ್, ಸಿ.ಸಿ.ಪಾಟೀಲ, ಕರುಣಾಕರ ರೆಡ್ಡಿ , ಎಸ್.ಎ.ರಾಮದಾಸ್ ಮತ್ತಿತರರು ನಿರಾಸೆಗೊಳಗಾಗಿದ್ದಾರೆ.

ಇದೇ ರೀತಿ ಮಾಜಿ ಶಾಸಕರಾದ ಗೋಪಾಲಕೃಷ್ಣ ಬೇಳೂರು, ಬಿ.ಪಿ.ಹರೀಶ್, ಸೋಮಶೇಖರ್ ರೆಡ್ಡಿ , ಕುಮಾರ ಬಂಗಾರಪ್ಪ, ಮಾಡಾಳು ವಿರೂಪಾಕ್ಷಪ್ಪ ಸೇರಿದಂತೆ ಸುಮಾರು 20-30 ಶಾಸಕರಲ್ಲಿ ಆತಂಕ ಮನೆ ಮಾಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ