ನೀತಿ ಸಂಹಿತೆ ಉಲ್ಲಂಘಿಸಿ ದಾಖಲೆ ತಿದ್ದಿದ ಆರೋಪ ಅರಕಲಗೂಡು ತಹಶೀಲ್ದಾರ್ ಪ್ರಸನ್ನಮೂರ್ತಿ ಅವರನ್ನು ಅಮಾನತು ಸಾಧ್ಯತೆ

ಹಾಸನ, ಏ.9-ನೀತಿ ಸಂಹಿತೆ ಉಲ್ಲಂಘಿಸಿ ದಾಖಲೆ ತಿದ್ದಿದ ಆರೋಪ ಎದುರಿಸುತ್ತಿರುವ ಅರಕಲಗೂಡು ತಹಶೀಲ್ದಾರ್ ಪ್ರಸನ್ನಮೂರ್ತಿ ಅವರನ್ನು ಅಮಾನತು ಸಾಧ್ಯತೆ ಇದೆ. ತಹಶೀಲ್ದಾರ್ ಅವರನ್ನು ಅಮಾನತು ಮಾಡಿ ತನಿಖೆಗೆ ಆದೇಶಿಸಲು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿಯಾಗಿರುವ ರೋಹಿಣಿ ಸಿಂಧೂರಿ ಸಿದ್ಧತೆ ನಡೆಸಿದ್ದಾರೆ.

ನೀತಿ ಸಂಹಿತೆ ಜಾರಿಯಾದ ನಂತರ ಬಗರ್‍ಹುಕುಂ ಸಾಗುವಳಿದಾರರ ಸಕ್ರಮಕ್ಕೆ ಅಂಕಿತ ಹಾಕಿರುವ ಆರೋಪದಡಿ ಅರಕಲಗೂಡು ತಹಶೀಲ್ದಾರ್ ಪ್ರಸನ್ನ ಮೂರ್ತಿ ಮತ್ತು ಸಚಿವ ಎ.ಮಂಜು ಅವರಿಗೆ ಕಾರಣ ಹೇಳಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ನೋಟೀಸ್ ನೀಡಿದ್ದರು. ಆದರೆ ನೋಟೀಸ್‍ಗೆ ಉತ್ತರಿಸದ ತಹಶೀಲ್ದಾರ್ ವಿರುದ್ಧ ಕ್ರಮಕ್ಕೆ ಜಿಲ್ಲಾಧಿಕಾರಿ ಮುಂದಾಗಿದ್ದಾರೆ.

ನೀತಿ ಸಂಹಿತೆ ಜಾರಿ ನಂತರವೂ ಬಗರ್‍ಹುಕುಂ ಸಾಗುವಳಿದಾರರ ಸಕ್ರಮಕ್ಕೆ ಅಂಕಿತ ಹಾಕಿದ್ದು, ಆ ದಾಖಲಾತಿಗಳನ್ನು ತಿದ್ದಲಾಗಿದೆ ಎಂದು ಆರೋಪಿಸಲಾಗಿತ್ತು.
ಸಭೆ ನಡೆಸದೆಯೇ 800ಕ್ಕೂ ಹೆಚ್ಚು ಅರ್ಜಿಗಳನ್ನು ವಿಲೇವಾರಿ ಮಾಡಿದ್ದು, ಅರ್ಜಿಗಳನ್ನು ತಿದ್ದುವ ಮೂಲಕ ಅನರ್ಹರಿಗೂ ಸಾಗುವಳಿ ಚೀಟಿ ನೀಡಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ. ತನಿಖೆ ವೇಳೆ ಸಭೆ ನಡೆಸದೆ ಹಿಂದಿನ ದಿನಾಂಕಗಳಂದು ಸಭೆ ನಡೆದಿರುವುದಾಗಿ ಸಹಿ ಮಾಡಿರುವುದು ಬಯಲಾಗಿದೆ.
ಅಮಾನತ್ತಿಗೆ ಸಿದ್ಧತೆ ನಡೆಸಿರುವ ಹಿನ್ನೆಲೆಯಲ್ಲಿ ತಹಶೀಲ್ದಾರ್ ಪ್ರಸನ್ನಮೂರ್ತಿ ಸ್ಥಾನಕ್ಕೆ ಬೇರೊಬ್ಬರನ್ನು ನಿಯೋಜನೆ ಮಾಡಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ