ಕೋಲಾರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಗಾಗಿ ಹೊಸ ಪ್ರಯತ್ನಗಳು ಆರಂಭಗೊಂಡಿವೆ

ಕೋಲಾರ, ಏ.9-ಕೋಲಾರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಗಾಗಿ ಹೊಸ ಪ್ರಯತ್ನಗಳು ಆರಂಭಗೊಂಡಿವೆ.

ಎರಡು ಬಾರಿ ಜನತಾ ಪರಿವಾರದಿಂದ, ಒಂದು ಬಾರಿ ಕಾಂಗ್ರೆಸ್‍ನಿಂದ ಜಯಗಳಿಸಿ ಎರಡು ಬಾರಿ ಜೆಡಿಎಸ್‍ನಿಂದ ಸ್ಪರ್ಧಿಸಿ ಸೋತಿದ್ದ ಶ್ರೀನಿವಾಸಗೌಡರು ಪಕ್ಷ ತೊರೆಯುವ ನಿರ್ಧಾರದಿಂದ ಪಕ್ಷದ ಹಿರಿಯ ಕಾರ್ಯಕರ್ತರಲ್ಲಿ ಹೊಸ ಹುರುಪು ಬಂದಿದೆ.

ಶ್ರೀನಿವಾಸಗೌಡರು ಜೆಡಿಎಸ್ ತೊರೆಯುವುದು ಅವರ ನಡವಳಿಕೆಗಳಿಂದ ಕಾಣುತ್ತಿತ್ತು. ಈ ಮುಂಚೆ ಪ್ರಚಾರಕ್ಕಾಗಿ ಬಂದಾಗಲೂ ಪಕ್ಷದ ಚಿಹ್ನೆ ಇರುವ ಶಾಲು ಹಾಕಿಕೊಳ್ಳುತ್ತಿರಲಿಲ್ಲ. ಹೀಗೆ ಅನೇಕ ನಿದರ್ಶನಗಳು ಕಂಡಿದ್ದು, ಪಕ್ಷ ತೊರೆಯುವುದು ನಮಗೆಲ್ಲ ತಿಳಿದಿತ್ತು ಎಂದು ಕೋಲಾರ ತಾಲೂಕು ಜೆಡಿಎಸ್ ಅಧ್ಯಕ್ಷ ಬಾಬು ಮೌನಿ ಪತ್ರಿಕೆಗೆ ತಿಳಿಸಿದ್ದಾರೆ.

ಇದೀಗ ಜೆಡಿಎಸ್ ಅಭ್ಯರ್ಥಿಯಾಗಲು ಆಕಾಂಕ್ಷಿಗಳಾದ ಕೆ.ಬಿ.ಗೋಪಾಲಕೃಷ್ಣ, ಡಾ.ರಮೇಶ್, ಸಿ.ಎಂ.ಆರ್.ಹರೀಶ್, ಸುಧಾಕರ್, ಮುಬಾರಕ್, ಸಿಎಂಆರ್ ಶ್ರೀಧರ್, ಬಾಬುಮೌನಿ ಹಾಗೂ ರಾಜೇಶ್ವರಿ ಮುಂದೆ ಬಂದಿದ್ದು, ಎಲ್ಲರೂ ಒಟ್ಟಿಗೆ ಒಮ್ಮತದಿಂದ ಕುಮಾರಣ್ಣನ ಬಳಿ ಹೋಗಿ ಅಭ್ಯರ್ಥಿಯನ್ನು ನಿಶ್ಚಯಿಸಿಕೊಳ್ಳುತ್ತೇವೆ ಎಂದರು. ಪ್ರತ್ಯೇಕವಾಗಿ ಕುಮಾರಣ್ಣ ಅವರನ್ನು ಭೇಟಿ ಮಾಡಬಾರದೆಂದು ನಾವೆಲ್ಲ ತೀರ್ಮಾನಿಸಿರುವುದಾಗಿದೆ ಎಂದು ಅವರು ತಿಳಿಸಿದರು.

ವ್ಯಕ್ತಿಗಿಂತ ಪಕ್ಷ ದೊಡ್ಡದು. ಶ್ರೀನಿವಾಸಗೌಡರು ಯಾರದೋ ಮಾತು ಕೇಳಿ ಪಕ್ಷ ತೊರೆದರೆ ಪಕ್ಷಕ್ಕೆ ಯಾವುದೇ ಹಾನಿ ಇಲ್ಲ ಎಂದು ಬಾಬು ಮೌನಿ ಪತ್ರಿಕೆಗೆ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ