ಬೆಂಗಳೂರು, ಏ.8-ಭಾರತದ ದೇಶದ ಸಮಸ್ಯೆಯೆಂದರೆ ಕಷ್ಟಪಟ್ಟು ಕೆಲಸ ಮಾಡುವವರಿಗೆ ಏನೂ ಸಿಗುತ್ತಿಲ್ಲ. ಆದರೆ ಸುಖವಾಗಿರುವವರಿಗೆ ಎಲ್ಲವೂ ಸಿಗುತ್ತಿದೆ. ಕಾಂಗ್ರೆಸ್ ಈ ವ್ಯವಸ್ಥೆಯನ್ನು ಬದಲಾವಣೆ ಮಾಡಲಿದೆ. ನಾನು ಈ ಕೆಲಸವನ್ನು ಮಾಡಿಸುತ್ತೇನೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಹೇಳಿದರು.
ನಗರದ ಜಕ್ಕರಾಯನಕೆರೆ ಆವರಣದಲ್ಲಿ ಪೌರಕಾರ್ಮಿಕರ ಜೊತೆ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ಹೆಚ್ಚು ಕಷ್ಟ ಪಡುವವರಿಗೆ ಹೆಚ್ಚು ಆದ್ಯತೆ ಸಿಗಬೇಕು. ಪೌರಕಾರ್ಮಿಕರು ಹೆಚ್ಚು ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಅವರಿಗೆ ಎಲ್ಲಾ ಸೌಲಭ್ಯಗಳು ಸಿಗಬೇಕು ಎಂದು ತಿಳಿಸಿದರು.
ಪೌರಕಾರ್ಮಿಕರ ಜೊತೆ ಅತ್ಯಂತ ಹೃದಯಸ್ಪರ್ಶಿಯಾಗಿ ಸಂವಾದ ನಡೆಸಿದ ರಾಹುಲ್‍ಗಾಂಧಿಯವರು ಸಾಮಾನ್ಯರಲ್ಲಿ ಸಾಮಾನ್ಯರಾಗಿ ಆರಂಭದಲ್ಲೇ ಕನ್ನಡದಲ್ಲಿ ನಮಸ್ಕಾರ ಹೇಳಿದ ಅವರು, ನಾನು ಇಲ್ಲಿ ಭಾಷಣ ಮಾಡಲು ಬಂದಿಲ್ಲ. ನಿಮಗೆ ಏನು ಸೌಲಭ್ಯಗಳು ಸಿಕ್ಕಿವೆ, ಇನ್ನು ಏನು ಸೌಲಭ್ಯಗಳು ಬೇಕು ಎಂಬುದನ್ನು ಹೇಳಿ. ಅದನ್ನು ತಿಳಿದುಕೊಳ್ಳಲು ಬಂದಿದ್ದೇನೆ ಎಂದರು.
ಈ ವೇಳೆ ಜಯಮ್ಮ ಎಂಬುವರು ಮಾತನಾಡಿ, ಸಿದ್ದರಾಮಯ್ಯ ಅವರು ಗುತ್ತಿಗೆಪದ್ಧತಿ ರದ್ದು ಮಾಡಿ ಬಿಬಿಎಂಪಿಯಿಂದಲೇ ವೇತನ ಕೊಡಿಸುವುದಾಗಿ ಭರವಸೆ ನೀಡಿದ್ದರು. ಅದನ್ನು ಈಡೇರಿಸಿದ್ದಾರೆ ಎಂದು ಕನ್ನಡದಲ್ಲಿ ಹೇಳಿದಾಗ, ಮಧ್ಯಪ್ರವೇಶಿಸಿದ ರಾಹುಲ್‍ಗಾಂಧಿ, ನಿಮ್ಮ ಮಾತಿನ ಅರ್ಥ ಸಿದ್ದರಾಮಯ್ಯ ಅವರು ನುಡಿದಂತೆ ನಡೆದಿದ್ದಾರೆ ಎಂದಲ್ಲವೇ ಎಂದು ಕೇಳಿದರು.
ನಿಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಸರ್ಕಾರ ಕಾಳಜಿ ವಹಿಸಿದೆಯೇ ಎಂದು ಕೇಳಿದಾಗ ಜಯಮ್ಮ, ನಮ್ಮ ಮಕ್ಕಳಿಗೆ ಉಚಿತ ಶಿಕ್ಷಣ ಸಿಗುತ್ತಿದೆ. ಸಾಕಷ್ಟು ಸೌಲಭ್ಯ ಸಿಕ್ಕಿದೆ. ಇದು ಬಡವರ ಸರ್ಕಾರ. ಇಂದಿರಾಗಾಂಧಿ ನಮ್ಮ ಅಮ್ಮ ಎಂದು ಹೇಳಿದರು.
ಇನ್ನೊಬ್ಬ ಪೌರಕಾರ್ಮಿಕರಾದ ಇಂದ್ರಾಣಿ ಮಾತನಾಡಿ, ಸರ್ಕಾರ ನಮಗೆ ಸಾಕಷ್ಟು ಸೌಲಭ್ಯ ಕೊಟ್ಟಿದೆ. ಸುಮಾರು 25 ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿದ್ದೇವೆ. 750 ರೂ. ಸಂಬಳದಿಂದಲೂ ಕೆಲಸ ಮಾಡುತ್ತಿದ್ದೇವೆ. ನಮ್ಮನ್ನು ಖಾಯಂ ಮಾಡಿಸಿಕೊಡಿ ಎಂದು ಮನವಿ ಮಾಡಿದರು.
ಅದನ್ನು ದಿನೇಶ್‍ಗುಂಡೂರಾವ್ ಅವರು ರಾಹುಲ್‍ಗಾಂಧಿಯವರಿಗೆ ಭಾಷಾಂತರಿಸುವಾಗ ನಮ್ಮ ಸರ್ಕಾರ ಪೌರಕಾರ್ಮಿಕರಿಗೆ ಬಿಸಿಯೂಟ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡಿದೆ. ಗುತ್ತಿಗೆ ಪದ್ಧತಿಯನ್ನು ತೆಗೆದುಹಾಕಿದೆ ಎಂದು ಸಿದ್ದರಾಮಯ್ಯ ಅವರ ಕಡೆ ಕೈ ತೋರಿಸಿದರು.
ಆವರಣದಲ್ಲಿ ಕುಳಿತಿದ್ದ ಸಿದ್ದರಾಮಯ್ಯ ಅವರು ಮೈಕ್ ಪಡೆದು, ಈ ಮೊದಲು ಪೌರಕಾರ್ಮಿಕರು ತಿಂಗಳಿಗೆ 7,850 ರೂ. ವೇತನ ಪಡೆಯುತ್ತಿದ್ದರು. ನಮ್ಮ ಸರ್ಕಾರ ಗುತ್ತಿಗೆ ಪದ್ಧತಿ ತೆಗೆದು ಬಿಬಿಎಂಪಿಯಿಂದ ನೇರವಾಗಿ 18 ಸಾವಿರ ರೂ. ವೇತನ ಸಿಗುವಂತೆ ಮಾಡಿದೆ. ಅವರ ವೇತನ ದ್ವಿಗುಣಗೊಂಡಿದೆ. ಪೌರಕಾರ್ಮಿಕರಿಗಾಗಿಯೇ ಪ್ರತ್ಯೇಕ ಮಂಡಳಿಯನ್ನು ರಚಿಸಲಾಗಿದೆ. ಎಸ್‍ಟಿಪಿಎಸ್, ಟಿಪಿಎಸ್ ಯೋಜನೆಯಡಿ ಶೇ.20ರಷ್ಟು ಅನುದಾನವನ್ನು ಪೌರಕಾರ್ಮಿಕರಿಗಾಗಿಯೇ ಮೀಸಲಿಡಲಾಗಿದೆ. ಮನೆ ನಿರ್ಮಾಣಕ್ಕೆ 7.5 ಲಕ್ಷ ರೂ. ಅನುದಾನ ನೀಡಲಾಗುತ್ತಿದೆ ಎಂದು ವಿವರಿಸಿದರು.
ಇಂದ್ರಾಣಿ ಅವರು ಸಿದ್ದರಾಮಯ್ಯ ಹೇಳಿದ್ದನ್ನು ಒಪ್ಪಿಕೊಂಡರು. ಆದರೆ 700 ಮನೆಗಳನ್ನು ಮಾತ್ರ ನಿರ್ಮಿಸಲಾಗುತ್ತಿದೆ. ಉಳಿದ ಕಾರ್ಮಿಕರು ಏನು ಮಾಡಬೇಕು. ಎಲ್ಲರಿಗೂ ಮನೆ ಕಟ್ಟಿಕೊಡಿ. ಖಾಯಂ ಮಾಡಿಕೊಡಿ ಎಂದು ಮನವಿ ಮಾಡಿದರು.
ಮುಕ್ತಾರ್ ಎಂಬುವರು ಮಾತನಾಡಿ, ಈ ಮೊದಲು ನಾವು ತುಂಬಾ ಕಷ್ಟದಲ್ಲಿದ್ದೆವು. ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಕಷ್ಟು ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಹೇಳಿದರು.
ಪೌರಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ನಾರಾಯಣ್ ಅವರು ಇಂಗ್ಲೀಷ್‍ನಲ್ಲಿ ಮಾತನಾಡಲು ಆರಂಭಿಸಿದಾಗ ರಾಹುಲ್‍ಗಾಂಧಿ ಮಧ್ಯಪ್ರವೇಶಿಸಿ, ನೀವು ಕನ್ನಡದಲ್ಲೇ ಮಾತನಾಡಿ, ಎಲ್ಲರಿಗೂ ಅರ್ಥವಾಗಲಿ. ದಿನೇಶ್‍ಗುಂಡೂರಾವ್ ಅವರು ನಿಮ್ಮ ಮಾತುಗಳನ್ನು ಭಾಷಾಂತರಿಸುತ್ತಾರೆ ಎಂದು ಹೇಳಿದರು.
ಪೌರಕಾರ್ಮಿಕರ ಗುತ್ತಿಗೆ ಪದ್ಧತಿಯನ್ನು ರಾಜ್ಯಸರ್ಕಾರ ರದ್ದು ಮಾಡಿ ಎರಡು ಲಕ್ಷ ಸಿಬ್ಬಂದಿಗೆ ಸ್ಥಳೀಯ ಸಂಸ್ಥೆಗಳಿಂದ ನೇರವಾಗಿ ವೇತನ ನೀಡುತ್ತಿರುವ ಬಗ್ಗೆ ರಾಹುಲ್‍ಗಾಂಧಿ ಮೆಚ್ಚುಗೆ ವ್ಯಕ್ತಪಡಿಸಿದರು. ಮುಂದೆ ಕೇಂದ್ರದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ಇದೇ ವ್ಯವಸ್ಥೆಯನ್ನು ದೇಶಾದ್ಯಂತ ಅಳವಡಿಸುತ್ತೇವೆ ಎಂದು ಭರವಸೆ ನೀಡಿದ ಅವರು, ಕಷ್ಟದ ಕೆಲಸ ಮಾಡುವವರಿಗೆ ಹೆಚ್ಚಿನ ಸೌಲಭ್ಯಗಳು ಸಿಗಬೇಕು ಎಂಬುದೇ ನಮ್ಮ ಉದ್ದೇಶ ಎಂದರು.
ಇಂದಿರಾ ಕ್ಯಾಂಟೀನ್‍ನಿಂದ ಅನುಕೂಲವಾಗಿದೆ ಎಂದು ಕೇಳಿ ಪೌರಕಾರ್ಮಿಕರಿಂದ ರಾಹುಲ್‍ಗಾಂಧಿ ಮಾಹಿತಿ ಪಡೆದುಕೊಂಡರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಕಾರ್ಯಾಧ್ಯಕ್ಷ ದಿನೇಶ್‍ಗುಂಡೂರಾವ್, ಸಚಿವ ಕೆ.ಜೆ.ಜಾರ್ಜ್, ಮೇಯರ್ ಸಂಪತ್‍ರಾಜ್ ಮತ್ತಿತರರು ಹಾಜರಿದ್ದರು.