ಕಾಂಗ್ರೆಸ್ ಜನಾಶೀರ್ವಾದ ಯಾತ್ರೆ ಯಶಸ್ವಿಯಾಗುವುದಿಲ್ಲ. ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರ ಪ್ರಚಾರ ಜನಾಕರ್ಷಣೆ ಪಡೆದಿಲ್ಲ – ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ

ಗುರುಮಿಟ್ಕಲ್/ವಿಜಯಪುರ,ಏ.8- ರಾಜ್ಯದಲ್ಲಿ ಕಾಂಗ್ರೆಸ್ ಜನಾಶೀರ್ವಾದ ಯಾತ್ರೆ ಯಶಸ್ವಿಯಾಗುವುದಿಲ್ಲ. ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರ ಪ್ರಚಾರ ಜನಾಕರ್ಷಣೆ ಪಡೆದಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್‍ಗಾಂಧಿ ಅವರು ರಾಜ್ಯದಲ್ಲಿ ಪ್ರಚಾರ ಮಾಡಿದಷ್ಟೂ ಕಾಂಗ್ರೆಸ್ ಪಕ್ಷ ಕುಸಿಯುತ್ತಾ ಹೋಗುತ್ತದೆ. ನಿನ್ನೆ ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಅವರ ಕಾರ್ಯಕ್ರಮಕ್ಕೆ ಹೆಚ್ಚಿನ ಜನ ಸೇರಿರಲಿಲ್ಲ. ಇದೇ ಇದಕ್ಕೆ ಸಾಕ್ಷಿ ಎಂದರು.
ಕಳೆದ ನಾಲ್ಕೂವರೆ ವರ್ಷಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವ ಕೆಲಸವನ್ನೂ ಮಾಡದೆ ಚುನಾವಣೆ ಸಮೀಪಿಸುತ್ತಿದ್ದಂತೆ ಅತ್ಯಂತ ವೇಗದಲ್ಲಿ ರಾಜ್ಯದ ಹಲವಾರು ವಿಧಾನಸಭಾ ಕ್ಷೇತ್ರಗಳಲ್ಲಿ ಶಂಕುಸ್ಥಾಪನೆ, ಉದ್ಘಾಟನೆ ಹೀಗೆ ಹಲವಾರು ಅಭಿವೃದ್ಧಿ ಕಾಮಗಾರಿಗಳಿಗೆ ತರಾತುರಿಯಲ್ಲಿ ಚಾಲನೆ ನೀಡಿದ್ದಾರೆ. ಕೊನೆ ಹಂತದಲ್ಲಿ 30ಸಾವಿರ ಕೋಟಿ ಹಣವನ್ನು ಬಿಡುಗಡೆ ಮಾಡಿದ್ದಾರೆ. ಹಾಗಾಗಿ ಇನ್‍ಕಮ್‍ಟ್ಯಾಕ್ಸ್ ಅಧಿಕಾರಿಗಳಿಗೆ ಮತ್ತು ಚುನಾವಣಾ ಆಯುಕ್ತರಿಗೆ ಅನುಮಾನ ಬಂದಿರಬಹುದು. ಹಾಗಾಗಿಯೇ ಇದನ್ನು ಪ್ರಶ್ನಿಸಿ ನೋಟಿಸ್ ನೀಡಿರಬಹುದು ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
ಒಂದು ವೇಳೆ ಈ ಬಗ್ಗೆ ತನಿಖೆ ನಡೆಸಿದರೂ ಫಲ ಸಿಗುತ್ತದೆ ಎಂದು ಹೇಳಲಾಗದು. ಇದಕ್ಕೆ ನಮ್ಮಲ್ಲಿನ ವ್ಯವಸ್ಥೆ ಕಾರಣ ಎಂದರು.
ಗೃಹ ಇಲಾಖೆ ಕೆಂಪಯ್ಯ ಅವರ ಸಾರಥ್ಯದಲ್ಲೇ ಎಲ್ಲಾ ಕೆಲಸ ನಡೆಯುತ್ತಿದೆ. ಅವರು ಹೇಳಿದಂತೆ ವರ್ಗಾವಣೆ ಮಾಡಲಾಗುತ್ತದೆ. ಗೃಹ ಸಚಿವರು ಏನು ಮಾಡಲಾರರು ಎಂದು ಟೀಕಿಸಿದರು.
ಅಭಿವೃದ್ಧಿ ಹೆಸರಿನಲ್ಲಿ, ಸಾಧನಾ ಸಮಾವೇಶದ ಹೆಸರಿನಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಅದಕ್ಕೆ ನೀಡುವ ಹಣವನ್ನು ಚುನಾವಣಾ ವೆಚ್ಚಕ್ಕೆ ಸಿದ್ದರಾಮಯ್ಯ ಸರ್ಕಾರ ಬಳಸಿಕೊಂಡಿದೆ. ಹೈದರಾಬಾದ್ ಕರ್ನಾಟಕ ನೀರಾವರಿ ಯೋಜನೆಗೆ 7ಸಾವಿರ ಕೋಟಿ ನೀಡಲಾಗಿದೆ ಎಂದು ಹೇಳುತ್ತಾರೆ.
ಇಲ್ಲಿ ಮಾಡಿರುವುದು ಕೇವಲ ಪ್ಲಾಸ್ಟ್ರಿಂಗ್ ಕೆಲಸ. 10ರೂ.ನಲ್ಲಿ ಮಾಡುವ ಕೆಲಸಕ್ಕೆ ಲಕ್ಷ ರೂ. ಎಂದು ಹೇಳಿ ಹಣವನ್ನು ಚುನಾವಣೆಗೆ ಬಳಸಿಕೊಂಡಿದ್ದಾರೆ ಎಂದು ದೂರಿದರು.
ಈ ಸರ್ಕಾರ ಜಾಹೀರಾತಿಗೆ ಕೋಟ್ಯಂತರ ರೂ. ವೆಚ್ಚ ಮಾಡಿದೆ. ಇದುವರೆಗೆ ಯಾವ ಸರ್ಕಾರವೂ ಇಷ್ಟೊಂದು ಹಣವನ್ನು ಜಾಹೀರಾತಿಗಾಗಿ ವೆಚ್ಚ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.
ಲಿಂಗಾಯಿತ ಪ್ರತ್ಯೇಕ ಧರ್ಮ ಕುರಿತು ರಂಭಾಪುರಿ ಶ್ರೀಗಳು ಒಂದು ರೀತಿ, ಮಾತೆಮಹಾದೇವಿಯವರು ಒಂದು ರೀತಿ ಹೇಳಿಕೆ ನೀಡುತ್ತಾರೆ. ಮಾತೆಮಹಾದೇವಿಯವರು ಕಾಂಗ್ರೆಸ್‍ಗೆ ಬೆಂಬಲ ಎನ್ನುತ್ತಾರೆ. ಆದರೆ, ರಾಜ್ಯ ಸರ್ಕಾರ ಒಡೆದು ಆಳುವ ನೀತಿ ಅನುಸರಿಸಿದೆ. ಸಮಾಜವನ್ನು ಒಡೆಯುವ ಕೆಲಸ ಮಾಡಿದೆ. ಈ ಸಮುದಾಯದವರ ವಿಶ್ವಾಸವನ್ನು ಸಿದ್ದರಾಮಯ್ಯ ಕಳೆದುಕೊಂಡಿದ್ದಾರೆ ಎಂದರು.
ಈ ಬಾರಿ ಕಾಂಗ್ರೆಸ್ ಹಾಗೂ ಬಿಜೆಪಿಗೆ ಮತ ಬೀಳುವುದಿಲ್ಲ. ನಾವು ಹೋದೆಡೆಯಲೆಲ್ಲಾ ಜನ ಬೆಂಬಲ ಸಿಕ್ಕಿದೆ. 113 ಸೀಟುಗಳನ್ನು ಗೆದ್ದು ಅಧಿಕಾರಕ್ಕೆ ಬರುವುದೇ ಮುಖ್ಯ ಗುರಿ ಎಂದು ಹೇಳಿದರು.
ಬೇನಾಮಿ ಆಸ್ತಿ:
ಶಾಸಕ ಸಿ.ಪಿ.ಯೋಗೇಶ್ವರ್ ನಾನು ಬೆನಾಮಿ ಆಸ್ತಿ ಹೊಂದಿರುವುದಾಗಿ ಹೇಳಿದ ಬಗ್ಗೆ ನೋಟಿಸ್ ನೀಡಲಾಗಿದೆ. ಆದರೆ, ಈವರೆಗೆ ಯೋಗೇಶ್ವರ್ ಉತ್ತರ ಕೊಟ್ಟಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ನನಗೆ ಯಾವುದೇ ಬೇನಾಮಿ ಆಸ್ತಿ ಬಗ್ಗೆ ಗೊತ್ತಿಲ್ಲ. ನಾನು ಬೇನಾಮಿ ಆಸ್ತಿ ಮಾಡಿದ್ದೇನೆ ಎನ್ನುವುದಾದರೆ ಅದನ್ನು ಪ್ರಧಾನಿ ನರೇಂದ್ರ ಮೋದಿ ಕೈಯಿಂದಲೇ ಹುಡುಕಿಸಲಿ ಎಂದು ಸವಾಲು ಹಾಕಿದರು.
ಕಾನೂನು ಬಾಹೀರವಾಗಿ ಒಂದಿಂಚು ಆಸ್ತಿ ಅಥವಾ ಭೂಮಿ ಮಾಡಿದ್ದರೆ ಅದನ್ನು ಪತ್ತೆ ಮಾಡಲಿ. ಹಾಗೇನಾದರು ಸಿಕ್ಕರೆ ಅದನ್ನು ಕಷ್ಟದಲ್ಲಿರುವ ರೈತರಿಗೆ ಕೊಟ್ಟುಬಿಡಲಿ ಎಂದು ಕುಮಾರಸ್ವಾಮಿ ತಿಳಿಸಿದರು.
ತಮ್ಮ ಸ್ಥಾನಕ್ಕೆ ತಕ್ಕಂತೆ ಮಾತನಾಡಲಿ:
ಮುಖ್ಯಮಂತ್ರಿ ಸಿದ್ದರಾಮಯ್ಯ ಬಾರ್‍ನಲ್ಲಿ ಕುಳಿತು ಹೆಂಡ ಕುಡಿದವರಂತೆ ಮಾತನಾಡುವ ಬದಲು ತಮ್ಮ ಸ್ಥಾನಮಾನಕ್ಕೆ ತಕ್ಕಂತೆ ಮಾತನಾಡಬೇಕು ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಅವರು, ಅಪ್ಪನ ಮೇಲೆ ಹಾಣೆ ಹೇಳಿಕೆ ವಿವಾದ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಸಿಎಂ ಬಾರ್‍ನಲ್ಲಿ ಕುಳಿತು ಮಾತನಾಡಿದ್ದಾರೆ. ಅವರು ಬಳಸುವ ಭಾಷೆ ನೋಡಿದರೆ ಅವರು ಪೆಗ್‍ಹಾಕಿ ಮಾತನಾಡಿದ್ದಂತೆ ಕಾಣುತ್ತದೆ. ಅವರು ಮೊದಲು ಮುಖ್ಯಮಂತ್ರಿಯಂತೆ ಮಾತನಾಡುವುದನ್ನು ಕಲಿಯಲಿ ಎಂದು ವಾಗ್ದಾಳಿ ನಡೆಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ