![chira](http://kannada.vartamitra.com/wp-content/uploads/2018/04/chira-305x381.jpg)
ಬೆಂಗಳೂರು, ಏ.8-ಮಾನವನ ಘನತೆಯನ್ನು ಕಾಪಾಡಿಕೊಳ್ಳಲು ನಮ್ಮ ಹಿರಿಯರು ಮಾಡಿದ ಸುದೀರ್ಘ ಹೋರಾಟದ ಕಥನವನ್ನು ನೆನೆಯುವುದು ನಾವು ಅವರಿಗೆ ಸಲ್ಲಿಸುವ ಗೌರವ ಎಂದು ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಗ್ ತಿಳಿಸಿದರು.
ಇಂದು ಕೃಷಿ ತಂತ್ರಜ್ಞಾನ ಸಂಸ್ಥೆಯಲ್ಲಿ ಇಂದು ಅಂತಾರಾಷ್ಟ್ರೀಯ ಬಂಜಾರಾ ರೋಮ ಸಂಸ್ಥೆ ಹಾಗೂ ಕರ್ನಾಟಕ ಬಂಜಾರಾ ನೌಕರರ ಸಾಂಸ್ಕøತಿಕ ಕ್ಷೇಮಾಭಿವೃದ್ಧಿ ಸಂಘದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ರೋಮ ಬಂಜಾರಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಸಮಸ್ಯೆಗಳು ಮತ್ತು ಮುಂದಿನ ಸವಾಲುಗಳ ಬಗ್ಗೆ ಚಿಂತಿಸುತ್ತ ಅವುಗಳಿಗೆ ಪರಿಹಾರವನ್ನು ಹುಡುಕುವ ಹಾಗೂ ಪರಂಪರೆಯ ಕಹಿಯನ್ನು ಕರಗಿಸುವ ಸಲುವಾಗಿ ನಮ್ಮ ಸಮುದಾಯ ಏಕಭಾವದಿಂದ ಒಂದಾಗಬೇಕಾದ ತುರ್ತು ಪರಿಸ್ಥಿತಿ ಇದೆ. ಈ ಕಾರಣಕ್ಕಾಗಿ ಅಂತಾರಾಷ್ಟ್ರೀಯ ರೋಮ ದಿನಾಚರಣೆಯನ್ನು ಕೂಡಿ ಆಚರಿಸಲಾಗುತ್ತಿದೆ ಎಂದರು.
ರೋಮ ಸಮುದಾಯವು ತಮ್ಮ ಐಕ್ಯತೆ ಮತ್ತು ಶಕ್ತಿಯನ್ನು ಜಗತ್ತಿಗೆ ಸಾರಿ ಹೇಳಲು ತನ್ನದೇ ಆದ ಪ್ರತ್ಯೇಕ ಬಾವುಟವನ್ನು ಮತ್ತು ಸ್ವಾತಂತ್ರ್ಯ ಆಶಯಗೀತೆಯನ್ನು ರಚಿಸಿಕೊಂಡಿದೆ. ಇಂತಹ ಚಾರಿತ್ರಿಕ ಹಾಗೂ ಜಾಗತಿಕ ಮಹತ್ವವನ್ನು ರೋಮ ಸಮುದಾಯದೊಡನೆ ಕರುಳು-ಬಳ್ಳಿಯ ಸಂಬಂಧವಿರುವ ಬಂಜಾರಾ ಸಮುದಾಯಕ್ಕೆ ಅರಿವು ಮೂಡಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಯುರೋಪ್ ರಾಷ್ಟ್ರಗಳಲ್ಲಿ ಹಂಚಿ ಹೋಗಿರುವ ರೋಮ ಸಮುದಾಯವು ಸರ್ಕಾರದಿಂದ ಅಲಕ್ಷಿತಗೊಳಗಾದ ಜನಾಂಗವಾಗಿದೆ. ತಮ್ಮ ಸಂಸ್ಕøತಿಯ ರಕ್ಷಣೆಗೆ ತಮಗೆ ಎದುರಾಗಿರುವ ಸಮಸ್ಯೆಗಳ ಬಗ್ಗೆ ಸಮುದಾಯದವರಲ್ಲಿ ಜಾಗೃತಿ ಮೂಡಿಸಲು ತಾರತಮ್ಯದ ವಿರುದ್ಧ ಪ್ರತಿಭಟಿಸಲು ರೋಮ ಸಮುದಾಯದವರು 1990 ರಿಂದ ಪ್ರತಿ ವರ್ಷ ಏ.8 ರಂದು ಅಂತಾರಾಷ್ಟ್ರೀಯ ರೋಮ ದಿನಾಚರಣೆಯನ್ನಾಗಿ ಆಚರಿಸಿಕೊಂಡು ಬರುತ್ತಿದೆ ಎಂದರು.
ಭಾರತದ ಬಹುದೊಡ್ಡ ಮೂಲ ನಿವಾಸಿ ಸಮುದಾಯದ ಬಂಜಾರಾ ಜನಾಂಗವು ಬ್ರಿಟೀಷರು ಹೇರಿದ ಕಾಯ್ದೆಯಿಂದಾಗಿ ನಮ್ಮದೇ ನಾಡಿನಲ್ಲಿ ಭಯ ಮತ್ತು ಸಾಮೂಹಿಕ ಕಳಂಕದಲ್ಲಿ ಅಲೆಮಾರಿ ಬದುಕು ನಡೆಸುವಂತಾಯಿತು ಎಂದು ವಿಷಾದಿಸಿದರು.
ಆಹಾರ ಧಾನ್ಯಗಳು ಸೇರಿದಂತೆ ಮನುಷ್ಯರಿಗೆ ಅವಶ್ಯಕವಾದ ಮೂಲಭೂತ ಸೌಲಭ್ಯಗಳನ್ನು ಸಾಗಿಸಿ ಮಾರಾಟ ಮಾಡುವ ಕುಲಕಸುಬನ್ನು ತೊರೆದು ಗುಡ್ಡಗಾಡು ಸೇರಬೇಕಾದ ಪರಿಸ್ಥಿತಿ ಉಂಟಾಯಿತು ಎಂದು ಬೇಸರ ವ್ಯಕ್ತಪಡಿಸಿದರು.
ಸಾಹಿತಿ ನಾಡೋಜ ಹಂಪ ನಾಗರಾಜಯ್ಯ, ಕೆ.ವೈ.ನಾರಾಯಣಸ್ವಾಮಿ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಲರಾಜ್, ಹರಿಯಾಣ ಮೂಲದ ಲೇಖಕ ಗಂಗನ ದೀಪ್‍ಸಿಂಗ್, ಮುಖ್ಯಮಂತ್ರಿ ಆಪ್ತ ಕಾರ್ಯದರ್ಶಿ ಹೀರಾನಾಯಕ್, ಕರ್ನಾಟಕ ಬಂಜಾರಾ ನೌಕರರ ಸಾಂಸ್ಕøತಿಕ ಮತ್ತು ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕುಮಾರ್ ನಾಯಕ್, ಪ್ರಧಾನ ಕಾರ್ಯದರ್ಶಿ ಹರೀಶ್ ನಾಯಕ್, ಅಂತಾರಾಷ್ಟ್ರೀಯ ಬಂಜಾರ ರೋಮಾ ಸಂಸ್ಥೆ ಅಧ್ಯಕ್ಷ ರಾಮಾ ನಾಯಕ್, ಪ್ರಧಾನ ಕಾರ್ಯದರ್ಶಿ ಸಪ್ತಗಿರಿ ಸೇರಿದಂತೆ ಮತ್ತಿತರರು ಇದ್ದರು.