ಸಿರಿಯಾದಲ್ಲಿ ಉಗ್ರರ ದಾಳಿ: 70ಕ್ಕೂ ಹೆಚ್ಚು ನಾಗರಿಕರು ಬಲಿ

ಬೈರುತ್, ಏ.8-ಸಿರಿಯಾದಲ್ಲಿ ಉಗ್ರರ ವಶದಲ್ಲಿರುವ ಕಟ್ಟಕಡೆಯ ಪೂರ್ವ ಘೌಟಾ ಪ್ರಾಂತ್ಯದ ಮೇಲೆ ಸರ್ಕಾರಿ ಪಡೆಗಳು ದಾಳಿಯನ್ನು ತೀವ್ರಗೊಳಿಸಿವೆ. ಆದರೆ ಈ ವಾಯು ದಾಳಿಯಲ್ಲಿ 70ಕ್ಕೂ ಹೆಚ್ಚು ನಾಗರಿಕರು ಬಲಿಯಾಗಿದ್ದು, ಅನೇಕರು ಗಾಯಗೊಂಡಿದ್ದಾರೆ. ಇನ್ನೊಂದೆಡೆ ಉಗ್ರರು ನಡೆಸಿದ ಆಕ್ರಮಣದಲ್ಲೂ ಸಾವು-ನೋವು ಉಂಟಾಗಿದೆ.
ಸಿರಿಯಾ ಅಧ್ಯಕ್ಷ ಬಷರ್ ಅಲ್-ಅಸಾದ್‍ಗೆ ನಿಷ್ಠರಾಗಿರುವ ಪಡೆಗಳು ವಿಷಯುಕ್ತ ಕ್ಲೋರಿನ್ ಅನಿಲದ ಶಸ್ತ್ರಾಸ್ತ್ರಗಳನ್ನು ಬಳಸಿದ್ದು, ಅನೇಕರು ಅಸ್ವಸ್ಥರಾಗಿದ್ದಾರೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ.  ಡೌಮ ಪ್ರದೇಶದ ಮೇಲೆ ಹಿಡಿತ ಹೊಂದಿದ್ದ ಜೈಶ್-ಎಲ್-ಇಸ್ಲಾಂ ಉಗ್ರರೊಂದಿಗೆ ರಷ್ಯಾ ನಡೆಸಿದ ಮಾತುಕತೆ ವಿಫಲವಾದ ನಂತರ ಈ ದಾಳಿ ನಡೆದಿದೆ. ಭಯೋತ್ಪಾದಕರನ್ನು ಸದೆಬಡಿಯುವ ಕಾರ್ಯಾಚರಣೆಯಲ್ಲಿ ಅಮಾಯಕ ನಾಗರಿಕರು ಬಲಿಯಾಗುತ್ತಿರುವ ಬಗ್ಗೆ ಅಂತಾರಾಷ್ಟ್ರೀಯ ಸಂಸ್ಥೆಗಳು ತೀವ್ರ ಆತಂಕ ವ್ಯಕ್ತಪಡಿಸಿವೆ.
ಪೂರ್ವ ಘೌಟಾ ಮೇಲೆ ಬಾಂಬ್‍ಗಳ ಸುರಿಮಳೆಯಾಗಿದ್ದು 24 ಗಂಟೆಗಳ ಅವಧಿಯಲ್ಲಿ ಮಕ್ಕಳು, ಮಹಿಳೆಯರೂ ಸೇರಿದಂತೆ 70ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಇನ್ನೊಂದೆಡೆ ಡಮಾಸ್ಕಸ್ ಮೇಲೆ ಬಂಡುಕೋರರು ನಡೆಸಿದ ಷೆಲ್ ದಾಳಿಯಲ್ಲಿ ಆರು ನಾಗರಿಕರು ಹತರಾಗಿ ಅನೇಕರು ಗಾಯಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ