ಬೆಂಗಳೂರು, ಏ.7-ನಲಿ-ಕಲಿಯಿಂದ ಕನ್ನಡವನ್ನು ಮಕ್ಕಳು ಸರಿಯಾಗಿ ಕಲಿಯಲಾಗುತ್ತಿಲ್ಲ. ಈ ವ್ಯವಸ್ಥೆಯನ್ನು ಕೈಬಿಟ್ಟು ಮೊದಲಿನಂತೆ ಅಕ್ಷರಗಳನ್ನು ಕಲಿಸಿ. ಕಲಿತ ಮೇಲೆ ಮಕ್ಕಳು ನಲಿಯಲಿ ಎಂದು ಮಲ್ಲೇಶ್ವರಂ ಎರಡನೇ ಸಾಹಿತ್ಯ ಸಮ್ಮೇಳನಾಧ್ಯಕ್ಷ ಕೃಷ್ಣಪ್ಪ ಸರ್ಕಾರಕ್ಕೆ ಮನವಿ ಮಾಡಿದರು.
ಮಲ್ಲೇಶ್ವರಂನ ಸರ್ಕಾರಿ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಾವು ಕರ್ನಾಟಕದಲ್ಲಿ ವಾಸಿಸುವ ಎಲ್ಲರಿಗೂ ಕನ್ನಡ ಕಲಿಸುವ ಜೊತೆಗೆ ನಮ್ಮ ಮಕ್ಕಳಿಗೆ ಮೊದಲು ಸೂಕ್ತ ರೀತಿಯಲ್ಲಿ ಕನ್ನಡ ಕಲಿಸಬೇಕು. ಕೇವಲ ಪ್ರಚಾರಕ್ಕಾಗಿ ಕನ್ನಡವನ್ನು ಮೈಗೂಡಿಸಿಕೊಂಡರೆ ಅದು ರೆಕ್ಕೆಪುಕ್ಕವಿಲ್ಲದ ಪಕ್ಷಿಯಂತಾಗಿ ಕನ್ನಡವೇ ನಶಿಸಿ ಹೋಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಎಸ್‍ಎಸ್‍ಎಲ್‍ಸಿ ಓದಿದರೂ ಸಹ ಕನ್ನಡ ಭಾಷೆಯ ಉಚ್ಚಾರಣೆ ಮತ್ತು ಬಳಕೆಯಲ್ಲಿ ಸಾಕಷ್ಟು ವ್ಯತ್ಯಾಸ ತಿಳಿಯದೆ ತಪ್ಪೆಸಗುವ ವಿದ್ಯಾರ್ಥಿಗಳನ್ನೇ ಕಾಣುತ್ತೇವೆ. ಅದರಲ್ಲೂ ಉ ಕಾರ -ಹು ಕಾರ ಬಳಕೆಯಲ್ಲಿನ ವ್ಯತ್ಯಾಸದಿಂದಾಗಿ ಭಾಷಾ ಅರಿವಿಲ್ಲದೆ ಭಾವದ ಕಾವು ಕಮರಿಹೋಗುತ್ತಿದೆ ಎಂದು ವಿಷಾದಿಸಿದರು.
ಈ ಬಗೆಯ ಅವ್ಯವಸ್ಥೆಗೆ ತಂದಿಟ್ಟ ಪ್ರಾಥಮಿಕ ಪಾಠಶಾಲೆಯ ಕನ್ನಡ ಕಲಿಕಾ ಪ್ರಯೋಗಕ್ಕೆ ಏನು ಹೇಳಬೇಕು ಎಂದು ಪ್ರಶ್ನಿಸಿದರು.
ಮೊದಲಿಗೆ ಶಿಕ್ಷಣ ಸಚಿವಾಲಯ ಹೊರಡಿಸಿರುವ ಅಧಿಸೂಚನೆ ಜಾರಿಗೊಳ್ಳಬೇಕು. ಆ ನಿಯಮದ ಪ್ರಕಾರ ಎಲ್ಲಾ ಇಂಗ್ಲೀಷ್ ಮಾಧ್ಯಮದ ಶಾಲೆಗಳಲ್ಲಿ ರಾಜ್ಯ ಪಠ್ಯಕ್ರಮಗಳಲ್ಲಿ ಒಂದನೇ ತರಗತಿಯಿಂದ ಕನ್ನಡ ಕಲಿಸಬೇಕು. ಇದರಿಂದ ಮಾತ್ರ ಕನ್ನಡ ಭಾಷೆ ಉಳಿಸಿ ಬೆಳೆಸಲು ಸುವರ್ಣಾವಕಾಶ ಒದಗಲಿದೆ ಎಂದರು.
ನಮ್ಮ ಭಾಷೆ, ಸಂಸ್ಕøತಿ ಉಳಿಸಿ ಬೆಳೆಸಲು ಅಧಿಸೂಚನೆ ಜಾರಿಯಾಗಬೇಕು ಆಗ ಮಾತ್ರ ನಮ್ಮ ಮಕ್ಕಳು ಸಾರ್ವಜನಿಕವಾಗಿ, ಸಾಹಿತ್ಯಕ ಹಾಗೂ ಸಾಂಸ್ಕøತಿಕವಾಗಿ ಕರ್ನಾಟಕದ ಅರಿವಿಗೆ ಒಳಗಾಗುತ್ತಾರೆ. ಇದನ್ನು ಅರಿತು ಅಧಿಸೂಚನೆ ಜಾರಿಗೊಳಿಸಿ ಎಂದು ಶಾಲೆ ನಡೆಸುವ ಎಲ್ಲಾ ಕನ್ನಡ ಬಂಧುಗಳನ್ನು ಸಮ್ಮೇಳನದ ಮೂಲಕ ಕೈಮುಗಿದು ಪ್ರಾರ್ಥಿಸುತ್ತೇನೆ ಎಂದು ಹೇಳಿದರು.
ಬಡ ಕುಟುಂಬದಿಂದ ಬಂದ ಮಕ್ಕಳು ಕನ್ನಡ ಮಾಧ್ಯಮದಲ್ಲಿ ವಿಜ್ಞಾನ, ಸಮಾಜಶಾಸ್ತ್ರ, ಗಣಿತ ಕಲಿಯಬೇಕಾಗಿರುವುದರಿಂದ ಅವರಿಗೆ ಕಲಿಕೆ ಭಾಷೆಯ ತೊಡಕು ಉಂಟಾಗುವುದಿಲ್ಲ. ಆದರೆ ಸಂವಹನ ಕೊರತೆ ಮಾತ್ರ ಎದುರಾಗುತ್ತದೆ ಎಂದು ತಿಳಿಸಿದರು.
ಬಡತನದ ಅಸಹಾಯಕ ಕನ್ನಡ ಮಕ್ಕಳು ಉನ್ನತ ಶಿಕ್ಷಣ ಪಡೆಯದೆ ಉತ್ತಮ ಉದ್ಯೋಗದಿಂದ ವಂಚಿತರಾಗಿ ಆರ್ಥಿಕವಾಗಿ ಹಿಂದುಳಿಯುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದರು.
ಮಲ್ಲೇಶ್ವರಂನ ಕುವೆಂಪು ಪ್ರತಿಮೆಯಿಂದ ಸಂಪಿಗೆ ರಸ್ತೆ ಮೂಲಕ ವಿವಿಧ ಜಾನಪದ ಕಲಾತಂಡಗಳೊಂದಿಗೆ ಸಮ್ಮೇಳನಾಧ್ಯಕ್ಷರನ್ನು ವೇದಿಕೆಗೆ ಕರೆತರಲಾಯಿತು. ಕನ್ನಡ ಜಾಗೃತಿ ಕುರಿತ ನೃತ್ಯ ಪ್ರದರ್ಶನ ಏರ್ಪಡಿಸಲಾಗಿತ್ತು.
ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ, ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಗ್, ಕ್ರೀಡಾಪಟು ಟಿ.ಕೆ.ನಾರಾಯಣಪ್ಪ, ಮಲ್ಲೇಶ್ವರಂ ಶಾಸಕ ಅಶ್ವತ್ಥನಾರಾಯಣ, ಶಿಕ್ಷಣ ತಜ್ಞ ವೂಡೇ ಪಿ.ಕೃಷ್ಣ, ಸಾಹಿತಿ ಭೆರಮಂಗಲ ರಾಮೇಗೌಡ, ಕಸಾಪ ನಗರಾಧ್ಯಕ್ಷ ಮಾಯಣ್ಣ ಮತ್ತಿತರರು ಉಪಸ್ಥಿತರಿದ್ದರು.