ಬೆಂಗಳೂರು, ಏ.7- ನಗರದ ನಂದಿನಿ ಬಡಾವಣೆಯ ಕಂಠೀರವ ಸ್ಟುಡಿಯೋ ಡಾ.ರಾಜ್ ಪುಣ್ಯಭೂಮಿಯ ಬಸ್ ನಿಲ್ದಾಣದ ಅವ್ಯವಸ್ಥೆ ಪದೇ ಪದೇ ಸಂಬಂಧಪಟ್ಟವರ ಗಮನ ಸೆಳೆದರೂ ಇನ್ನೂ ದುರಸ್ತಿಯಾಗಿಲ್ಲ ಎಂದು ಅಭಿಮಾನಿಗಳು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಡಾ.ರಾಜ್ ಪುಣ್ಯಭೂಮಿಯ ಬಸ್ ನಿಲ್ದಾಣದ ಅವ್ಯವಸ್ಥೆ ಬಗ್ಗೆ ಪತ್ರಿಕೆಯಲ್ಲಿ 2.1.2017ರಂದು ಹವ್ಯಾಸಿ ಛಾಯಾ ಚಿತ್ರಗಾರ ಎಂ.ರಾಜಣ್ಣ ಹಾಗೂ ಡಾ.ರಾಜ್ ಅಭಿಮಾನಿಗಳು ಬೇಸರ ತೋಡಿಕೊಂಡು ಶೀಘ್ರ ದುರಸ್ತಿಪಡಿಸುವಂತೆ ಮನವಿ ಮಾಡಿದ್ದರು.
ಬಸ್ ನಿಲ್ದಾಣ ದುರಸ್ತಿಪಡಿಸಬೇಕು, ನಾಮಫಲಕದಲ್ಲಿ ಡಾ.ರಾಜ್ ಪುಣ್ಯಭೂಮಿ ಬಸ್ ನಿಲ್ದಾಣ ಎಂದು ದೊಡ್ಡದಾಗಿ ಬೆರೆಯಬೇಕು ಹಾಗೂ ಎರಡೂ ಕಡೆಯೂ ಡಾ.ರಾಜ್ಕುಮಾರ್ ಅವರ ಭಾವಚಿತ್ರವನ್ನು ಹಾಕಬೇಕೆಂದು ಮನವಿ ಮಾಡಿದ್ದೆವು. ಆದರೆ, ದುರಸ್ತಿಪಡಿಸಿ ಆರು ತಿಂಗಳಾದರೂ ದೊಡ್ಡ ಅಕ್ಷರಗಳಲ್ಲಿ ನಾಮಫಲಕ ಬರೆಸಿಲ್ಲ. ಅಣ್ಣಾವ್ರ ಭಾವಚಿತ್ರಗಳನ್ನು ಹಾಕಿಲ್ಲ ಎಂದು ಎಂ.ರಾಜಣ್ಣ ಬೇಸರ ವ್ಯಕ್ತಪಡಿಸಿದ್ದಾರೆ.
ರಾಜ್ ಪುಣ್ಯಭೂಮಿಗೆ ದೂರದೂರುಗಳಿಂದ ಅಭಿಮಾನಿಗಳು ಪ್ರತಿದಿನ ಬರುತ್ತಾರೆ. ಏ.12ರಂದು ವರನಟನ ಪುಣ್ಯತಿಥಿ ಕಾರ್ಯಕ್ರಮವಿದೆ ಹಾಗೂ ಏ.24ರಂದು ರಾಜ್ ಅವರ ಹುಟ್ಟುಹಬ್ಬ ಕೂಡ ಇದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ನಾಮಫಲಕ ದೊಡ್ಡದಾಗಿ ಬರೆಸಲು ಮತ್ತು ಅಣ್ಣಾವ್ರ ಭಾವಚಿತ್ರ ಹಾಕಿಸಲು ಕ್ರಮ ಕೈಗೊಳ್ಳಬೇಕೆಂದು ಅಭಿಮಾನಿಗಳು ಮತ್ತು ಎಂ.ರಾಜಣ್ಣ ಮನವಿ ಮಾಡಿದ್ದಾರೆ.